January 8, 2009...3:47 pm

ಬಾಗಿಲೇ ತೆರೆದು, ಸೇವೆಯನು ಕೊಡು

Jump to Comments

madwa_011108_euegen-2We are continuously opening the doors with happiness and closing them with despair.
-ಹಾಗೆಂದು ಸಿ ಡಿ ಮೋರ್ಲೆ ಎಂಬ ಲೇಖಕ `ಡೋರ್‌’ ಎಂಬ ಲೇಖನದಲ್ಲಿ ಬಾಗಿಲನ್ನು ಬಹಳ ಅದ್ಭುತವಾಗಿ ತೆರೆದು ತೋರಿಸುತ್ತಾ ಹೋಗುತ್ತಾನೆ. ಬಾಗಿಲಿನ ಹಿಂದೆ ಏನೆಲ್ಲಾ ಇರಬಹುದು. ಬಾಗಿಲು ನಮ್ಮೆಲ್ಲಾ ರಹಸ್ಯಕ್ಕೂ ಊಹೋಪೋಹಕ್ಕೂ, ಅರ್ಧ ಸತ್ಯಕ್ಕೂ ಒಳ್ಳೆಯ ಉದಾಹರಣೆ.
ಹಿಂದೊಮ್ಮೆ ಆ ಲೇಖನದಿಂದ ತುಂಬ ಪ್ರೇರಣೆ ಹೊಂದಿ ಕಾಲೇಜು ಓದುವ ಹೊತ್ತಿಗೆ ಬರೆದ ಕವಿತೆ `ಬಾಗಿಲು’. ಸ್ವಲ್ಪ ದೀರ್ಘವಾಯಿತು ಎಂದು ನೀವು ಬೇಕಾದರೆ ಬೈಯಬಹುದು. ಮುಚ್ಚಿದ ಬಾಗಿಲು ನಮಗೆಲ್ಲಾ ನೀಡಿದ ವಿಸ್ಮಯಕ್ಕಾಗಿ ನಮಿಸುತ್ತಾ ಇಲ್ಲಿ ಆ ಕವಿತೆ ಹಾಜರಾಗುತ್ತಿದೆ.

1
ಸುಟ್ಟಿಟ್ಟಿಗೆಗೆ ಮೆದು ಮಣ್ಣು ಮೆತ್ತಿ,
ಪಂಚಾಂಗದ ಇಂಚಿಂಚೂ ನೀರೆರಚಿದಾಗ
ಸೂರಿನ ಹನಿಸುಗಳ ತಡೆಗೆ
ಪರದೆ ಕಣ್ಣ ಗೋಡೆ:
ಹೊಸಮಣ್ಣ ಪ್ರಾಕಾರದಲ್ಲಿ ಅವಿತರೆ
ಬಿಟ್ಟೀತೇ ಹುಚ್ಚು ಗಾಳಿ
ಮಳೆಯ ನಡುವೆ ಗೂಳಿ ನುಗ್ಗುವ ಪರಿ?
ಪಾಗರದ ನಡುವಿನಲಿ ನಮ್ಮನ್ನೇ ಕಳಕೊಂಡಾಗ
ನುಸುಳಿ ಹೊರ ಹೊರಡಲಿಕ್ಕೆ,
ಎಳೆ ಬಿಸಿಲಿನ ಅಂಬೆಗಾಲಿಡುವ ನಾಳೆಗಳ
ರಂಗವಲ್ಲಿ ಚುಕ್ಕೆ ಇಟ್ಟು ಸ್ವಾಗತಿಸುವುದಕ್ಕೆ
ಬೇಕಲ್ಲವೇ?-
ಕಾವಲು ಕಣ್ಣ ಮುಚ್ಚಿಸಿ
ತಿಂಗಳ ಬೆಳಕ ರಾತ್ರಿಗಳ ಅಟ್ಟಿ
ನಿಲ್ಲಿಸುವ ನಂದಿ-ಬೀಟೆ ಸಾಗವಾನಿಯ ಗಟ್ಟಿ
ಬಾಗಿಲು,
ಮತ್ತು
ಬಿಡುವ ನೆಮ್ಮದಿಯ ನಿಟ್ಟುಸಿರು.
2
ಆಫೀಸಿನ ಸದಾ ಮುಚ್ಚು ಬಾಗಿಲು,
ಅಂಗಡಿಯ ನಗೆ ತೆರೆದ ಬಾಗಿಲು,
ಕಾಲ್‌ತಲೆ ತೋರಿ-ಎದೆ ಹೊಟ್ಟೆಯ ಬಚ್ಚಿಟ್ಟ
ಆಸ್ಪತ್ರೆಯ ಅರೆ ಬಾಗಿಲು,
ಇದ್ದಂತೇ ತೋರ್ಪಡಿಸಹೊರಟ
ಗಾಜು ಹಲಗೆಯ ಧೈರ್ಯದ ಬಾಗಿಲು,
ಮುರಿವ-ಮುರಿಯದ-ಮೆರುಗಿನ
ಕದಗಳ ಬಗೆ-ಬಿನ್ನಾಣ
ಕೂಲಿ ದುಡಿತದ ತಿರುಕನಿಗೆ
ಬಿದಿರ ತಡಿಕೆಯೇ ಬಿರುಗಾಳಿ ತಡೆವ ಕಡಿವಾಣ!?
3
ಬಾಗಿಲೆಂದಾಕ್ಷಣ ಬೇರ್ಪಡಿಕೆಯ
ತೋರಿಕೆ ನೀಡುವರಿಗೇ
ಈ ಕೆಳಗಿನ ತುಸು ಅಂಬೋಣ:
ಒಂಟಿತನದ ಕೊಂಚ ತಿರುವಾಟಕ್ಕೆ,
ಅಂಟಿ ಕುಳಿತು ನೆನಪಿಸುವ ಬಿಡುವಿಗೆ,
ನಮ್ಮ ನಾವೇ ಅರಿತುಕೊಳ್ಳುವುದಕ್ಕೆ,
ಪಿಸು ಮಾತಾಡಿ ಬೆರೆತುಕೊಳ್ಳುವುದಕ್ಕೆ,
ಗಳಿಸಿಟ್ಟ ಮೊತ್ತಗಳ ಉಳಿಸಿಕೊಳ್ಳುವುದಕ್ಕೆ,
ಕೊಟ್ಟ ಕೋಡಂಗಿಯವನಲ್ಲಿ
ಇಸಕೊಂಡ ಈರಭದ್ರ ತಲೆ ಮರೆಸಿಕೊಳ್ಳುವುದಕ್ಕೆ…

ಹೀಗೆ ಹಲವಾಶಯ ಹೊತ್ತ
ಈ ಬಾಗಿಲುಗಳಿಗೆ
ಬಿಚ್ಚಿಡುವ ಸ್ವಚ್ಛ ಮನಕ್ಕಿಂತಾ
ಬಚ್ಚಿಡುವ,
ಹೊಳಪು-ಕೊಳಕು ಮುಚ್ಚಿಡುವ
ಕಾಯಕದಲ್ಲೇ ಭಗವಂತ ಪ್ರೀತಿ!
4
ಬಾಗಿಲೆಂದರೆ ಇಲ್ಲವೆಂಬುದರ
ಕಳ್ಳ ಸುಳಿವು,
ಎಷ್ಟೋ ತಪ್ಪಿಸಿ ಪ್ರೀತಿ ತೋಡಿಕೊಳ್ಳಲು
ಬಂದವನಿಗೆ
ಆಕೆಯ ಕ್ಕರಿಕೆಯ
ಮುಖದರಿವು,
ಸಾಲ ಕೊಡಲೊಪ್ಪದವನ ಉರಿ ಮುಖ,
ಹಣ ಕೊಡದಾದ
ಹಾಲು ಹಾಕುವವನ ಬರಿ ಮುಖ,
ಮುಖ-ಮುಖದಲ್ಲೇ ಮುಚ್ಚು ಬಾಗಿಲು.

ತೆರೆವಾಗಿನ ಬಾಗಿಲ
ಹೃದ್ಯ ಲಾಸ್ಯದ ಪ್ರಮೋದ,
ಮುಚ್ಚುವಾಗೆಲ್ಲೋ ಚುಚ್ಚುತ್ತಾ
ಮಡುಗಟ್ಟಿ ಕುಳಿತ
ವಿಷಾದ…

3 Comments

  • ಚೆನ್ನಾಗಿದೆ ವಿಕಾಸ್, ನೀವು ಏನೇ ಬರೆದರೂ ತುಂಬ ಪ್ಯಾಷನೇಟ್ ಆಗಿ ಬರೆಯುತ್ತೀರಿ. ‘ಕದಬಾಗಿಲಿರಿಸಿದ ಕಳ್ಳ ಮನೆ’ ಕತೆ ಕೂಡ ಚೆನ್ನಾಗಿತ್ತು. ಪರ್ಜಾನಿಯಾ ಕುರಿತ ಬರಹ ತುಂಬಾ ತಟ್ಟಿತು (ಸಾರಿ, ತುಸು ಲೇಟಾಗಿ ಪ್ರತಿಕ್ರಿಯಿಸಿರುವೆ).
    - ಹರೀಶ್ ಕೇರ

  • vikaas! Congratualtions. nimma blog tumbaa chennagide. ella barahagalu ishtavaadavu. kavanagalu kooda chennagive. goodluck!

  • college oduvagale baredidde ee kavana? hagadre ishtottige ondu academy prashasti barbekittalri nimage….


Leave a Reply