December 22, 2008

ಕೈಗೆ ಬಂದೂಕು ಕೊಡದಿರಲಿ ದೇವರು

ಫ್ಲಿಕರ್‌

ಚಿತ್ರಕೃಪೆ: ಫ್ಲಿಕರ್‌

ಭಯೋತ್ಪಾದನೆ ಮೂಲೋತ್ಪಾಟನೆಗೆ ಹಾಗಾದರೆ ಕದನವೊಂದೇ ದಾರಿಯೇ? ಈವರೆಗೆ ಜಗತ್ತಲ್ಲಾದ ಸಮರ ಯಾವತ್ತೂ ಅಂತಿಮವಾಗಿ ಯಾವೊಂದು ರಾಷ್ಟ್ರಕ್ಕೂ ಶಾಶ್ವತ ಸಂತೋಷವನ್ನು, ಪರಿಹಾರವನ್ನು  ಕಂಡುಕೊಟ್ಟಿಲ್ಲ. ಪರಸ್ಪರ ಸೇಡು ತೀರಿಸಿಕೊಳ್ಳಲು ಮಾತ್ರ ಅದು ಬಳಕೆಯಾಗಿದೆ. ಸಮರ ಬೇಡ ಎಂದೇ ಯಾವತ್ತಿಗೂ ಜನಸಾಮಾನ್ಯರೆಲ್ಲರೂ ಪ್ರತಿಪಾದಿಸಿದರು. `ಕೈಯ್ಯಲ್ಲಿ ಬಂದೂಕು ಕೊಡುವ ದೇವರು ಹಿಂದೂಗಳಿಗೂ ಬೇಡ, ಮುಸಲ್ಮಾನರಿಗೂ ಬೇಡ’ ಎಂದು ಮೊನ್ನೆ ಡಾ. ಯು ಆರ್‌ ಅನಂತಮೂರ್ತಿ ಹೇಳಿದರು. ಕೈ ಕೈ ಮಿಲಾಯಿಸಿ, ಸಾವು ತಂದುಕೊಂಡ ಯಾವುದೆ ರಾಷ್ಟ್ರವೂ ಮತ್ತೊಮ್ಮೆ ಸಮರವನ್ನು ಬಯಸುವುದಿಲ್ಲ. ಯಾಕೆಂದರೆ ಕದನದ ಅನಂತರದ ಸ್ಥಿತಿ ನಮಗೆಲ್ಲಾ ಗೊತ್ತು. ಮಹಾಭಾರತ ಸಮರ, ಅಶೋಕ ಮಾಡಿದ ಕದನ-ಗಳ ಪರಿಣಾಮವನ್ನು ತಿಳಿದ ರಾಷ್ಟ್ರ ನಮ್ಮದು.
ನಾವು ಈ ಕೈ ಕೈ ಮಿಲಾಕತ್‌ಗೂ ಮೀರಿದ ಪರಿಹಾರವನ್ನು ಸರ್ವ ರಾಷ್ಟ್ರಗಳ ಸಹಯೋಗದೊಂದಿಗೆ, ರಕ್ತರಹಿತ ಕ್ರಾಂತಿಯಂತೆ, ಮೌನಸಂಗ್ರಾಮದಂತೆ ಕಂಡುಕೊಳ್ಳುವ ಜರೂರತ್ತು ಇವತ್ತಿದೆ. ಯಾಕೆಂದರೆ ಅಮಾಯಕರನ್ನು ಕೊಲ್ಲುವುದನ್ನು ಬಿಟ್ಟು ಈ ಸಮರ ಬೇರೇನನ್ನೂ ಮಾಡುವುದಿಲ್ಲ. ಅಫ್ಗಾನ್‌ನಲ್ಲಿ ಕೆಲವೇ ವರ್ಷಗಳ ಹಿಂದೆ ಆದ ಸಮರದ ಪರಿಣಾಮ ನಮಗೆಲ್ಲರಿಗೂ ಮೊನ್ನ ಮೊನ್ನೆ ನಡೆದಂತೆ ಹಚ್ಚ ಹಸಿರಾಗಿದೆ. ಭಾರತ ನಡೆಸುವ ಸಮರದಲ್ಲೂ ಅಮೆರಿಕಾದಂಥ ರಾಷ್ಟ್ರ ಬೇಳೆ ಬೇಯಿಸಿಕೊಳ್ಳಲು ಸಜ್ಜಾಗುತ್ತಿದೆ. ಸಮರವನ್ನು ನಾವು ಅಸ್ತ್ರವನ್ನಾಗಿ ಮಾಡಿಕೊಳ್ಳಲು ಹೊರಟರೆ ಅದೇ ಅಸ್ತ್ರ  ಮುಂದೊಂದು ದಿನ ನಮ್ಮ ಕಡೆಗೇ ತಿರುಗುತ್ತದೆ.
ಸಮರವನ್ನು ಪ್ರತಿಭಟಿಸುತ್ತಾ, ಭಯೋತ್ಪಾದಕತೆ ನಿವಾರಣೆಗೆ ಆದಷ್ಟು ಹುಷಾರಾದ ಮಾರ್ಗವನ್ನು  ಕಂಡುಕೊಳ್ಳಬೇಕೆಂದು ಆಗ್ರಹಿಸುತ್ತಾ ಹಿಂದೆ ಅಫ್ಗಾನ್‌ ಸಮರದ ತರುವಾಯ ಬರೆದ
`ಅಫ್ಗಾನ್‌ಗೆ ಬನ್ನಿ ಇಫ್ತಾರ್‌ ಕೂಟಕ್ಕೆ‘ ಎಂಬ ಕವಿತೆಯನ್ನು ನೀಡುತ್ತಿದ್ದೇವೆ. ನಮ್ಮ ಎಲ್ಲರ ಒಂದೊಂದು ಕೂಗೂ ನಡೆಯಲು ಅನುವಾಗಿರುವ ಸಮರವನ್ನು ಪ್ರತಿಭಟಿಸಲಿ.

(Now In afgan everything is was- ಅಫ್ಘಾನ್‌ ಗೈಡ್‌ ಒಬ್ಬ ಹೇಳಿದ್ದು.)

ಕಾಬೂಲ ವಿರಳ ಪ್ರಾಚ್ಯ ಸಂಗ್ರಹಾಲಯ,
ದರುಲಮನ್‌ ಅರಮನೆ ಆವರಣ
ಝೂನ ಮುಗ್ಧ ಜೀವಿ ಜಗತ್ತು
ಮದ್ದುಗುಂಡಿನಡಿ ಮುದ್ದೆಯಾಗಿ
ಕಾಬೂಲಿನ
ಆಲಯಗಳೆಲ್ಲಾ ಈಗ ಬಟಾ ಬಯಲು!
ಬಬೂರು ಗಾರ್ಡನಿನ ಹೊಸ ಹೂಗಳು,
ಆ ಹೂವಿನಂಥ ಜನಗಳು
ಒಟ್ಟುಗೂಡಿಸಿಟ್ಟಿದ್ದ ಅಷ್ಟೋ ಇಷ್ಟೋ ಅಗುಳು-
ನಜ್ಜುಗುಜ್ಜಾಗಿದೆ ಈಗ…

ಲೂಟಿಯಾದ ಮೇಲೆ ಕೋಟೆಯ ಬಾಗಿಲು
ಇಕ್ಕಿಕೊಂಡು
ಹಿರಿಯರ ಬಣ
ಘನ ಸರಕಾರದ ಚೌಕಟ್ಟು ಚಾಚಿತು
ನಾವು… ಇದನ್ನು
ನೀವು… ಅದನ್ನು
ನಾವೆಲ್ಲರೂ… ನಿಮ್ಮೆಲ್ಲರನ್ನೂ
ನೋಡಿಕೊಳ್ಳುತ್ತೇವೆಂದು
ಕರ್ಝಾಯಿ ಡಂಗುರ ಹೊರಡಿಸುತ್ತಿದ್ದಂತೇ-
ಕಿವಿಗೊಟ್ಟು ಆಲಿಸಿ
ಕೇಳುತ್ತಿಲ್ಲವೇ ನಿಮಗೆ-
`ಪ್ರಭು ಪ್ರಭುತ್ವವನ್ನು ಹೇರಿ
ತೋರಾಬೋರಾದಲ್ಲಿ ಈಗಾಗಲೇ
ಸೇರಿಕೊಂಡಿದ್ದಾನೆ…’
ಎಂಬ
ನಿರಾಶ್ರಿತರ ಪಿಸು ನಿಟ್ಟುಸಿರು!

ರಮ್ಜಾನ್‌ನ ಪೂರ್ಣಚಂದ್ರ ಕಾಣಿಸಿಕೊಂಡ,
ಓ ಚಂದ್ರ
ಎಲ್ಲಿ ಬೆಳುದಿಂಗಳು?
ಎಲ್ಲಾ ಮತ್ತದೇ ಧರ್ಮಾಂಧರ ತಂಗಳು
ಇನ್ನೆಲ್ಲಿ ಖುಷಿ ತಿಂಗಳು?
ಬುರ್ಖಾ ಕಿತ್ತೊಗೆದರೇನು ಬಂತು
ಯಾರಿಗೆ
ಎಲ್ಲಿಗೆ
ಮತ್ತೆ… ಯಾತಕ್ಕೆ
ಬಂದತಾಯ್ತು ಅಸಂತುಷ್ಟ ಸ್ವಾತಂತ್ರ್ಯ?

ವಿಚ್ಛಿದ್ರ ಬದುಕಿನ ಮೃತಯಾಚನೆ
ಅಬ್ಬಾ!
ಈ ಹಬ್ಬ!
ಮಾಯದ ಅಮಾಯಕರ ಮರುಕ
ನಮಾಜ್‌
ವ್ರಣ, ಹೆಣಗಳುರುಳಿದ ಕಣದಲ್ಲಿ
ರಕ್ತಸಿಕ್ತ ಇಫ್ತಾರ್‌…
ಈ ಸಾರಿ
ಅಫ್ಘಾನಿಗೆ ಬನ್ನಿ ಇಫ್ತಾರ್‌ಗೆ
ಬೇಕಾದಷ್ಟು ಉಂಡು
ಸಾಧ್ಯವಾದರೆ
ಕೊಂಡೂ ಹೋಗಿ
ಈ ರೌರವ ಔತಣ!

ಅಫ್ಘಾನಿನ ಸುತ್ತಾ
ಈಗೆಲ್ಲಾ

ಗತ… ಗತ… ಗತ…

December 19, 2008

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ

diwali_2ನಿಜವಾಗಿಯೂ ಗೆಳೆತನ ಎಂದರೇನು? ಒಟ್ಟಿಗೆ ತಿರುಗಾಡುವುದೇ, ಐಸ್‌ಕ್ರೀಮ್‌ ತಿನ್ನುವುದೇ, ನೋಟ್ಸ್‌ ಕೇಳುವುದೇ, ದುಬಾರಿ ಉಡುಗೊರೆ ಕೊಡುವುದೇ? ಸ್ನೇಹ ಇರುವುದು ಪ್ರೀತಿಯಲ್ಲಾ, ನಿಕಟ ಒಡನಾಟದಲ್ಲಾ, ತ್ಯಾಗದಲ್ಲಾ, ಸ್ವಾರ್ಥದಲ್ಲಾ ನಿಃಸ್ವಾರ್ಥದಲ್ಲಾ? ಈ ಮಾತಿಗೆ ಕಾಲಮಾನಕ್ಕೊಂದು ವ್ಯಾಖ್ಯೆ ಬಂದುಹೋಗಿವೆ. ಸ್ನೇಹದಲ್ಲಿ ನಿಸ್ವಾರ್ಥ ಇರಬೇಕು ಎಂಬ ಹಳಸಲು ಮಾತುಗಳು ಸದಾ ನಮ್ಮ ನಡುವೆ ಹಾದು ಹೋಗಿವೆ. ಆದರೆ ಗೆಳೆತನ ಈ ಎಲ್ಲಾ ಹಂಗನ್ನೂ ತೊರೆದು ಎರಡು ಜೀವಗಳ ಮಧ್ಯೆ ಲಿಂಗ, ವಯಸ್ಸು, ಜಾತಿ, ವರ್ಚಸ್ತು, ಅಂತಸ್ತು, ಮತಾತೀತವಾಗಿ ಹುಟ್ಟಿಕೊಂಡಿದೆ. ಸ್ನೇಹ ಮತ್ತೊಬ್ಬನನ್ನು ಇತ್ಯಾತ್ಮಕ(ಪಾಸಿಟಿವ್‌)ವಾಗಿ ಬದಲಿಸಬೇಕು ಎಂಬ ಒಂದು ಹಿತ ನುಡಿಯ ಮೇಲೆ ಇಲ್ಲೊಂದು ಕತೆ ಇದೆ. ಅದು ಅತ್ಯಂತ ಜನಪ್ರಿಯ ಕತೆ. ಆದರೆ ಓದಿದ ಪ್ರತಿ ಸಲವೂ ಅದು ನಮ್ಮನ್ನು ಆರ್ದ್ರಗೊಳಿಸುತ್ತದೆ. ಪ್ರತಿ ಓದಿನಲ್ಲೂ ಅದು ನಿಮಗೆ ಏನೇನನ್ನೋ ಹೇಳುತ್ತದೆ. ನಿಮಗೇ ಗೊತ್ತು, ಅದು ಓ ಹೆನ್ರಿ ಕತೆ. ಹೆಸರು:  ಆಫ್ಟರ್‌  20 ಈಯರ್ಸ್‌ (ಇಪ್ಪತ್ತು ವರ್ಷಗಳ ನಂತರ). ಅನುವಾದ: ಚಿತ್ರಾಂಗದ.
ನಮ್ಮ `ತಿಳಿಯ ಹೇಳುವ ಇಷ್ಟಕತೆಯನು’ ಮಾಲಿಕೆಯಲ್ಲಿ ಈ ಬಾರಿ ಒಂದು ಅನುವಾದಿತ ಕತೆ. ಓದಿ, ಪ್ರತಿಕ್ರಿಯಿಸಿ.

ದೊಂದು ತಬ್ಬಲಿ ರಾತ್ರಿ. ಕರುಳು ಕೊರೆಯುವ ಚಳಿಗಾಲ. ಗಡಿಯಾರದ ಮುಳ್ಳು ಹತ್ತರ ಹತ್ತಿರ ಬರುತ್ತಿತ್ತು. ಜನ ಸಂದಣಿ ಕಡಿಮೆ. ಒಬ್ಬ ಪೊಲೀಸ್‌ ಪೇದೆಯ ಉಪಸ್ಥಿತಿಯಿತ್ತು. ಅವನಿಗೆ ರಾತ್ರಿ ಪಾಳಿ. ಗಸ್ತು ತಿರುಗುವುದು ಅಭ್ಯಾಸವಾಗಿತ್ತು. ಆದರೆ ಯಾರನ್ನೋ ತೃಪ್ತಿಪಡಿಸುತ್ತಿದ್ದೇನೋ ಎಂಬ ಛಾತಿಯಲ್ಲಿ ಅವನ ನೈಟ್‌ ಬೀಟ್‌ ನಡೆಯುತ್ತಿತ್ತು.
ಅಲ್ಲೊಂದು ಸಣ್ಣ ಕ್ಲಬ್‌. ಅದರ ನಿರ್ಜನತೆಗೆ ವಿರುದಾರ್ಥಕ ಪದವಾಗಿ ಒಬ್ಬ ಆಸಾಮಿ ನಿಂತಿದ್ದ. ಏನೋ ಚಡಪಡಿಕೆ, ಏನೋ ಆತಂಕ, ಯಾವುದೋ ನಿರೀಕ್ಷೆ ಆ ಆಫೀಸರನ ಮುಖದಲ್ಲಿ. ಅವನ ಕಣ್ಣುಗಳು ದೂರದ ನೀರವ ಬೀದಿಗಳತ್ತ ನೆಟ್ಟಿದ್ದವು. ಅಲ್ಲಿಗೆ ಪೊಲೀಸ್‌ ಪೇದೆ ಹೋಗುವುದಕ್ಕೂ ಆ ವ್ಯಕ್ತಿ ತನ್ನ ಸಿಗಾರ್‌ಅನ್ನು ಉರಿಸಲು ಹೊರಡುವುದಕ್ಕೂ ಸರಿ ಹೋಯ್ತು. ಅಷ್ಟರಲ್ಲಿ ಒಬ್ಬರನ್ನೊಬ್ಬರು ಹಾಯ್ದರು. ಪೇದೆ `ಸಾರಿ ಸರ್‌, ಕಾಣಲಿಲ್ಲ’ ಎಂದ. ಆತ ಪರವಾಗಿಲ್ಲ ಎಂಬಂತೆ ನೋಡಿ, ಪೇದೆಗೆ ಹೇಳತೊಡಗಿದ. `ನಾನು ನನ್ನೊಬ್ಬ ಗೆಳೆಯನಿಗಾಗಿ ಕಾಯ್ತಿದ್ದೇನೆ. ನಿಮಗೆ ಗೊತ್ತಾ, ಇದೊಂಥರ ವಿಚಿತ್ರ ಕೇಸ್‌’ . Keep reading →

December 15, 2008

ದೇವಿಸೂಕ್ತ: ಸಂಧ್ಯೆಯ ವ್ಯಕ್ತ, ಅವ್ಯಕ್ತ

cಸಂಧ್ಯಾದೇವಿ. ಐವತ್ತರ ಆಸುಪಾಸಿನಲ್ಲಿ ತಮ್ಮ `ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ’ ಎಂಬ ಕವಿತೆಗಳ ದೊಡ್ಡ ಹಣತೆ ಹಿಡಿದು ಕನ್ನಡ ಸಾಹಿತ್ಯ ಲೋಕವನ್ನು ಥಟ್ಟನೆ ಬೆಳಗಿಸಿದವರು.
ತಾವಿಬ್ಬ ಸ್ತ್ರೀಯಾಗಿ ಸ್ತ್ರೀಪರ ಕವಿತೆಯನ್ನೇ ಬರೆಯಬೇಕೆಂಬ ಹಠವಿಲ್ಲದ, ಹೆಣ್ಣು ಮಗಳ ಕವಿತೆಯಾದ ಕಾರಣ `ಸ್ವಲ್ಪ ರೋಚಕವಾಗಿರೋಣ, ಜನ ಓದುತ್ತಾರೆ’ ಎಂಬ ಲೋಲುಪತೆ ಇಲ್ಲದ, ಕವಿ ಎಂದ ಕೂಡಲೇ ಘೋಷಣೆ ನಡೆಯಲಿ ಎಂಬ ಹಪಾಹಪಿ ಇಲ್ಲದ, ಕನ್ನಡದ ಅಪರೂಪದ ಕವಯಿತ್ರಿ ಸಂಧ್ಯಾದೇವಿ. `ನಾದದ ಕಡಲಲ್ಲಿ ತೇಲುವ ನಾನೊಂದು ಹಡಗು’ ಎಂದು ಬರೆದ ಸಂಧ್ಯಾದೇವಿ ಅವರು ಇದೀಗ ಹೊಸ ಸಂಕಲನ `ಅಗ್ನಿದಿವ್ಯ‘ದೊಂದಿಗೆ ಹಾಜರಾಗಿದ್ದಾರೆ.
ಅವರ ಕವಿತೆಗಳನ್ನು ಹೆಚ್ಚು ಹೆಚ್ಚು ವಿಶ್ಲೇಷಿಸಿ ಮೂಗು ತೂರಿಸುವ ಬದಲು ಓದಿ, ಅನುಭವಿಸುವ ಕಾಯಕವಷ್ಟೇ ನಮ್ಮದಾಗಲಿ. ಇಲ್ಲಿ ಅವರ ಸಂಕಲನದ ಕೆಲವು ಸವಿ ಸಾಲುಗಳಿವೆ. ಪ್ರಕಟಿಸಿದ್ದು `ಅಭಿನವ’ದ `ಪಿ. ಪಿ. ಗೆಳೆಯರ `ಅಂಕಣ’ ಬಳಗ ಮಾಲೆ’. ಬೆಲೆ ಮೂವತ್ತು ರೂಪಾಯಿ. ಸಂಕಲನದ ಶಾಶ್ವತ ಆನಂದಕ್ಕಾಗಿ ಕೊಂಡು ಓದಿ:
*`…ಇದೀಗ ಇಲ್ಲಿದೆ ಅಚ್ಚರಿ:/ ಬಣ್ಣಗಳ ಮೇಳದಲ್ಲಿ/ ವೇಷ ಕಳಚಿದವ/ ಎಣ್ಣೆ ಹಚ್ಚಿ/ ಬಣ್ಣ ತೆಗೆದವ/ ಚೌಕಿಯಲ್ಲಿ ಒಬ್ಬನಾದರೂ ಇದ್ದೇ ಇದ್ದಾನು’
ಮತ್ತು
…`ಸತ್ತಂತಿದ್ದಾನೆ’ ಎನ್ನುತ್ತಾರೆ ಕೆಲವರು/ ಮೂಡರು/ `ಇಲ್ಲ ಇಲ್ಲ’/ ಈಗಷ್ಟೇ ಅಮೃತ ಕುಡಿದು/ ಕಣ್ಣು ಮುಚ್ಚಿ ಕೂತಿದ್ದಾನೆ/ ಎನ್ನುವರು ತಿಳಿದವರು’ (ಜಾತ್ರೆಯಲ್ಲಿ ಜ್ಞಾನಿ)

*…ಆಡಿ ಆಡಿ/ ಕಾಣದ ಆಟ/ ಬರೀ ಉಸಿರಾಟ/ ವ್ಯರ್ಥ ಹೋರಾಟ/ ಈ ಜಗವೊಂದು ತೆರೆದ ಕ್ರೀಡಾಂಗಣ/ ಸರ್ವಭೂತಾಂತರಾತ್ಮನಿಗೆ’ (ಉಸಿರು ಅಥವಾ ಪ್ರಾಣ)

*…ಸ್ಥಾವರ ಜಂಗಮ ವನಸ್ಪತಿ/ ಪಶುಪಕ್ಷಿ ಪಾಶಾಣ/ ಯಾವ ಯೋನಿಯಲ್ಲಿ ಯಾವ ಶರೀರ/ ಆಯ್ಕೆಯ ಸ್ವಾತಂತ್ರ್ಯ ಯಾರಿಗಿದೆ?/ ಸೃಷ್ಟಿ ಚಕ್ರದಲ್ಲಿ/ ನಮ್ಮನ್ನು ನಿಲ್ಲಿಸಿ/ ಗಿರ್ರನೆ ಒಮ್ಮೆ ಸುಮ್ಮನೆ ತಿರುಗಿಸಿ/ ಯಾವಾಗ ನಿಲ್ಲಿಸುವೆಯೋ ಯಾರಿಗೆ ಗೊತ್ತಿದೆ?/ ಮರಳಿ ಮತ್ತೆಲ್ಲಿ/ ಯಾವ ದೇಶದಲ್ಲಿ/ ಯಾವ ರೂಪದ ಯಾವ ದೇಹದಲ್ಲಿ/ ಯಾವಾಗ ಹುಟ್ಟಿಸುವೆಯೋ? (ಅಂತಿಮ ನಿರ್ಧಾರ)

*… ಕಂಡದ್ದು ಸುಳ್ಳಲ್ಲ/ ಕಾಣದಿದ್ದದ್ದು ಇಲ್ಲವೆಂದಲ್ಲ/ ಆತ್ಮನ ಅಸ್ತಿತ್ವ/ ಕಂಡೂ ಕಾಣದಂತಿರುವುದು…./ಬಿಂಬವಿದ್ದರೆ ಇದ್ದೇ ಇದೆ ಪ್ರತಿಬಿಂಬ/ ಅದಕ್ಕಾಗಿಯೇ ಇದೆ ಎನ್ನುವರು/ ದೇಹವೆಂಬ ಮಾಧ್ಯಮ (ಮಾಧ್ಯಮ)
***
ಅಂದಹಾಗೆ ಇಲ್ಲಿನ ಎಲ್ಲಾ ಕವಿತಾಪುಷ್ಪಗಳಿಗೆ ಇರುವ ಅಧ್ಯಾತ್ಮದ ಎಸಳಿಗೆ ಕಾರಣವೆಂದರೆ ಇಲ್ಲಿನ ಎಲ್ಲಾ ಕವಿತೆಯನ್ನೂ `ಕಠೋಪನಿಷತ್‌’ನ ಶ್ಲೋಕದ ಆಧಾರದಲ್ಲಿ ಬರೆಯಲಾಗಿದೆ. ಒಂದು ಲೆಕ್ಕದಲ್ಲಿ ಅದರ ಭಾವಾನುವಾದವಾದರೂ `ಕಠೋಪನಿಷತ್‌’ ಅನ್ನು ಕವಯಿತ್ರಿ ತಮ್ಮ ನೆಲೆಯಲ್ಲಿ, ಇಹ- ಪರದ ನಡುವಲ್ಲಿ ಗ್ರಹಿಸಿದ್ದನ್ನು ಕವಿತೆಯಾಗಿಸಿದ್ದಾರೆ. ಆ ಬಗ್ಗೆ ಅವರು ಪುಸ್ತಿಕೆಯ ಬೆನ್ನಿನಲ್ಲಿ ಬರೆದುಕೊಂಡಿರುವುದು ಹೀಗೆ:
`ಇದು ಕಠೋಪನಿಷತ್‌ ಮಂತ್ರಗಳ ಅಕ್ಷರಶಃ ಅನುವಾದವಲ್ಲ. ಮಂತ್ರಗಳ ಅರ್ಥವನ್ನು ಬಿಡಿಸಿಟ್ಟು ಪದ್ಯ ಕಟ್ಟುವುದು ನನ್ನ ಉದ್ದೇಶವೂ ಅಲ್ಲ. ಇದೇನೆಂದರೆ: ಮಂತ್ರಕ್ಕೆ ನನ್ನನ್ನು ನಾನು ಒಪ್ಪಿಸಿಕೊಂಡ ಬಗೆ.

December 14, 2008

ದಿವಂಗತ ಶ್ರೀಸಾಮಾನ್ಯ!

IND20109Bಸಿದಾಂತಗಳ ಕತ್ತಿಗೆ ಶ್ರೀಸಾಮಾನ್ಯ ಕತ್ತು ಕತ್ತರಿಸಿಹೋಗುತ್ತಿದೆ. ಭಯೋತ್ಪಾದಕ ದಾಳಿ, ನಕ್ಸಲೀಯ ವಾದ, ಎಲ್‌ಟಿಟಿಇ- ಎಂಬ ಹೆಸರಿನ, ರಕ್ತ ಹರಿಸುವುದೇ ಉದ್ದೇಶವಾದ ನಾನಾ ಸಿದಾಂತಗಳ ಜಗತ್ತಿನಲ್ಲಿ ಒಬ್ಬ ಮಾಮೂಲಿ ಮನುಷ್ಯ ಈಗ ನೆಮ್ಮದಿಯಾಗಿ ನಿದ್ರಿಸಲಾರ. ಹೊರಗೆ ಹೋದ ಗಂಡ, ಹೆಂಡತಿ, ಶಾಲೆಗೆ ಹೋದ ಕಂದಮ್ಮಗಳು ಸುರಕ್ಷಿತವಾಗಿ ವಾಪಾಸು ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. `ಕೊನೆಗೊಂಡಿತೋ ಓರ್ವೋರ್ವರ ಗರ್ವದ ಕಾಲ, ಇದು ಸರ್ವರ ಕಾಲ’ ಎಂದು ಕುವೆಂಪು `ಶ್ರೀಸಾಮಾನ್ಯಗೀತೆ’ಯನ್ನು ಬರೆದರು. ಆದರೆ ಶ್ರೀಸಾಮಾನ್ಯನ ಗೀತೆ ಇದೀಗ ವಿಷಾದ ರಾಗದಲ್ಲೇ ಕೇಳಿಬರಲು ಪ್ರಾರಂಭವಾಗಿದೆ.
(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ  14-12-2008ರಂದು ಪ್ರಕಟವಾದ ಲೇಖನ)

ಉಗ್ರವಾದ, ನಕ್ಸಲ್‌ ಸಿದಾಂತ ಎನ್ನುತ್ತಾ ಒಂದಿಷ್ಟು ವರ್ಗಗಳು ಕಂಬನಿಯ ಕುಯಿಲಿಗೆ ಹೊರಟಿವೆ. ಆ ಸಮಗ್ರ ಕುಯಿಲಿನ ಕುಡುಗೋಲಿಗೆ ಗೋಣಾಗುತ್ತಿರುವವನ ಹೆಸರು: ಶ್ರೀಸಾಮಾನ್ಯ. ಈತನದು ಯಾವ ದೇಶ, ಯಾವ ಭಾಷೆ, ಯಾವ ವರ್ಗ, ಯಾವ ಲಿಂಗ, ಯಾವ ಕೋಮು, ಯಾವ ಧರ್ಮ ಎಂಬ ಪ್ರಶ್ನೆಗಲ್ಲಿ ಅರ್ಥವಿಲ್ಲ, ಕುಡುಗೋಲು ಪಿಡಿದವಗೆ ಅದು ಮುಖ್ಯವೂ ಅಲ್ಲ. ಎಲ್ಲಾ ಸಿದಾಂತಕ್ಕೂ ತನ್ನನ್ನು ತಾನು ಪ್ರಯೋಗಿಸಿಕೊಳ್ಳಲು ಒಂದು ನವಿರಾದ, ಪ್ರತಿಭಟನೆ ಮಾಡದ, ಬೇರೆ ದಾರಿ ಕಂಡುಕೊಳ್ಳಲಾರದ ಗೋಣು ಬೇಕು.
ಈ ಗೋಣು ಯಾವಾಗಲೂ ಯಾವುದಕ್ಕೂ ಸುಲಭದಲ್ಲಿ ಶರಣು. ಆತನಿಗೆ ಈ ಸಿದಾಂತಗಳ್ಯಾವುದೂ ಗೊತ್ತಾಗುವುದಿಲ್ಲ. ಅಗ್ರಿಮೆಂಟ್‌ ಫಾರ್ಮ್‌ ಅನ್ನು ಓದದೇ ಸೈನ್‌ ಮಾಡಿಬಿಡುವಂತೆ ಈ ಸಿದಾಂತಗಳಿಗೂ ಆತ ಮುಗತೆಯಿಂದ ಬದ. Keep reading →

December 9, 2008

`ನನ್ನಪ್ಪ ಸಾಯದೇ ಇರುತ್ತಿದ್ದರೆ…’

princess02ಮುಂಬೈಯ ಎಷ್ಟು ಮನೆಗಳು ಯಜಮಾನರನ್ನು, ಯಜಮಾನರು ತಮ್ಮ ಹೆಂಗಸರನ್ನು, ಹೆಂಗಸರು ಮಕ್ಕಳನ್ನು, ಮಕ್ಕಳು ಅಪ್ಪ ಅಮ್ಮಂದಿರನ್ನು, ಅಮ್ಮಂದಿರು ಬಂಧು ಬಳಗವನ್ನು ಕಳೆದುಕೊಂಡಿವೆಯೋ- ಗೊತ್ತಿಲ್ಲ. ನಾವು ಸಿದಾಂತವನ್ನು, ನೀತಿಯನ್ನು, ಕ್ರೌರ್ಯವನ್ನೂ ಮಾತಾಡುತ್ತಾ, ಲೇಸ್‌ ತಿನ್ನುತ್ತಾ ಟೀವಿ ನೋಡುತ್ತಾ ಕುಳಿತಿದ್ದೇವೆ.
ಬ್ಲಾಗ್‌ಗೆ ಯಾವುದೇ ಹೊಸ ವಿಚಾರವನ್ನೂ ಹಾಕಲು ಮನಸ್ಸಾಗುತ್ತಿಲ್ಲ. ಏನೇ ವಿಚಾರ ಬಂದಾಗಲೂ ಮತ್ತೆ ಹೊಗೆಯಾಡುತ್ತಿರುವ ಮುಂಬೈ, ಓಡುತ್ತಿರುವ ಭಯಭೀತ ಕಾಲುಗಳು, ಸಂದೀಪ್‌ ಉನ್ನಿಕೃಷ್ಣನ್‌, ಆಸ್ಪತ್ರೆಯ ಹೆಣಗಳು, ಹರಿದುಕೊಂಡು ಬಿದ್ದ ಚಪ್ಪಲಿಗಳು ಕಣ್ಣಿಗೆ ಕಟ್ಟುತ್ತಿವೆ.
ಹಿಂದೆ ಅಮೆರಿಕಾ ಅವಳಿ ಕಟ್ಟದ ಮೇಲೆ ಆದ ಬಾಂಬ್‌ ದಾಳಿಯಲ್ಲೂ ಹೀಗೇ ಆಗಿತ್ತು, ಸುನಾಮಿಯಲ್ಲೂ ಹೀಗೇ. ಆದರೆ ಅದಕ್ಕೂ ಹಿಂದೆ ಹಿರೋಷೀಮಾ, ನಾಗಸಾಕಿಯಲ್ಲಿ ಹೀಗೇ ಆಗಿತ್ತಲ್ಲಾ? ಒಂದು ಕಾಲದ ಆ ದುರಂತ ಈಗಲೂ ಮತ್ತಷ್ಟು ಹತಭಾಗ್ಯರನ್ನು ಹಡೆಯುತ್ತಲೇ ಇದೆ. ಮಕ್ಕಳಿಗೆ ಅಪ್ಪ ಇಲ್ಲದೇ, ತಮ್ಮನಿಗೆ ತಂಗಿಯಿಲ್ಲದೇ ಈಗ ಹಿರೋಷಿಮಾದಲ್ಲಿ ಹಡೆದ ಮಕ್ಕಳ ಬಾಯಲ್ಲೆಲ್ಲಾ ಪ್ರಶ್ನೆಗಳೇ.
ಅಲ್ಲಿನ ಶಾಲಾ ಮಕ್ಕಳು ಬರೆದ ಒಂದಿಷ್ಟು ಕವಿತೆಗಳನ್ನು ಓದಿದರೆ ಕರುಳು ಕಿವುಚುತ್ತದೆ. ಅಂಥ ಮೂರು ಕವಿತೆಗಳ ಭಾವಾನುವಾದ ಇಲ್ಲಿವೆ, ಓದಿ.
Keep reading →

December 6, 2008

ಕಾಪಾಡು ಶ್ರೀ ಡಿಸೆಂಬರ್‌ ಮಾರಾಯನೇ

hands-folded-in-prayerಈ ಡಿಸೆಂಬರ್‌ ತಿಂಗಳು ಯಾರಿಗೂ ಸುಖಕರವಾಗಿಲ್ಲ. ಆರ್ಥಿಕ ಕುಸಿತದಿಂದ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಇಡೀ ದೇಶ ಬದುಕುತ್ತಿದೆ. ಭಯೋತ್ಪಾದಕ ಕೃತ್ಯಗಳಿಂದಾಗಿ ಯಾರೂ ನೆಮ್ಮದಿಯಾಗಿ ಆಫೀಸಿಗೆ, ಸಿನಿಮಾಕ್ಕೆ, ಶಾಪಿಂಗ್‌ಗೆ ಹೋಗುತ್ತಿಲ್ಲ. ಚಿತ್ರಮಂದಿರಗಳಿಗೆ, ಮಾಲ್‌ಗಳಿಗೆ ವ್ಯಾಪಾರವಿಲ್ಲ. ಜನ ಸಂಚಾರದಲ್ಲಿ ಒಂದು ಬಗೆಯ ದುಗುಡ.
ಎಲ್ಲಕ್ಕೂ ಮುಖ್ಯವಾಗಿ ಡಿಸೆಂಬರ್‌ ಮಹಾ ಚಳಿಯ ತಿಂಗಳು. ಬೆಂಗಳೂರಿನಲ್ಲಿ ಇರುವಷ್ಟು ಚಳಿ ಯಾವ ಮಲೆನಾಡಲ್ಲೂ ಇದ್ದಂತಿಲ್ಲ. ಬೆಳಿಗ್ಗೆ ಎದ್ದರೆ ಚಳಿಯಿಂದ ಹೊರ ಬರುವುದಕ್ಕೆ ಎರಡು- ಮೂರು ತಾಸಾದರೂ ಬೇಕು. ಆಮೇಲೆ ಬಿಸಿಲಿಗೆ ಮೈ, ಕೈ ಒಡೆದುಕೊಂಡು ಇಡೀ ದಿನ ದೂಡಬೇಕು. ಸಂಜೆಯಾಗುತ್ತಲೇ ಬಹಳ ಬೇಗ ಆವರಿಸಿಕೊಳ್ಳುತ್ತದೆ ಕತ್ತಲು. ಸಂಜೆ ರಾತ್ರಿಯಲ್ಲಿ ಸೇರಿಕೊಂಡು ಯಾವುದು ಸಂಜೆ, ಯಾವುದು ರಾತ್ರಿ ಎಂದೇ ಗುರುತಿಸುವುದು ಕಷ್ಟ. ಹೀಗಾಗಿ ಚಳಿ ನಮ್ಮೆಲ್ಲರನ್ನೂ ಮಂಕಾಗಿಸುತ್ತಿದೆ, ಮೂಡ್‌ ಹಾಳು ಮಾಡುತ್ತಿದೆ.
ಹಿಂದೊಮ್ಮೆ ನವೆಂಬರ್‌ ತಿಂಗಳಲ್ಲಿ ದೊಡ್ಡ ಭಯೋತ್ಪಾದಕ ಕೃತ್ಯ ನಡೆದದ್ದು ಅಮೆರಿಕಾದ ಅವಳಿ ಕಟ್ಟಡದ ಮೇಲೆ. ಅಲ್ಲಿಂದ ಶುರುವಾದ ಭಯ ಬೆಳೆಯುತ್ತಲೇ ಇದೆ. ಈ ನವೆಂಬರ್‌ನಲ್ಲಂತೂ ಮುಂಬೈ ಭಯೋತ್ಪಾದಕ ಕೃತ್ಯ ಇಡೀ ದೇಶವನ್ನು ನಡುಗಿಸಿದೆ. ಇನ್ನಷ್ಟು ದಾಳಿಯ ಭೀತಿ ಎಲ್ಲಾ ಕಡೆ ಇರುವುದರಿಂದ ಈ ಡಿಸೆಂಬರ್‌ ಆ ಭಯದಲ್ಲೇ ತಿಂಗಳು ದೂಡುವ ಅನಿವಾರ್ಯತೆ ಇದೆ. ಡಿಸೆಂಬರ್‌ ತಿಂಗಳಲ್ಲೇ ಬಾಬ್ರಿ ಮಸೀದಿ ಮೇಲೆ ದಾಳಿ ನಡೆದಿದ್ದರಿಂದ ಆ ಬಗ್ಗೆ ಭೀತಿ ಮುಂದುವರಿದಿದೆ. ಆ ಘಟನೆಯ ನೆನಪು ಸಹಜವಾಗಿ ಒಂದು ತಳಮಳವನ್ನು ಸಣ್ಣಗೆ ಹುಟ್ಟು ಹಾಕಿದೆ.
`ಆವುದೋ ಭಯ ಎಂಥದೋ ಭಯ’ ಎಂಬ ಸಾಲಿನ ಗೀತೆಯೊಂದು ಪು. ತಿ. ನರಸಿಂಹಾಚಾರ್‌ ಅವರ `ಗೋಕುಲ ನಿರ್ಗಮನ’ ಗೀತ ನಾಟಕದಲ್ಲಿ ಬರುತ್ತದೆ. ಹಾಗೆಯೇ ಈ ಡಿಸೆಂಬರ್‌ನಲ್ಲಿ ನಮ್ಮೆಲ್ಲರಿಗೂ ಕೂಡ ಆವುದೋ ಭಯ. ಮೇಲಕಾರಿಗಳು ಉದ್ಯೋಗಿಯನ್ನು ಚೇಂಬರ್‌ಗೆ ಕರೆದರೆ ಕೆಲಸ ಕಳೆದುಬಿಡುತ್ತಾರೋ ಎಂಬ ಭಯ. ನಮ್ಮ ಏರಿಯಾದಲ್ಲಿ ಯಾವುದೋ ಪಟಾಕಿ ಸಿಡಿದರೆ ಬಾಂಬ್‌ ಇಟ್ಟರೋ ಎಂಬ ಭಯ. ಬೆಂಗಳೂರಿನಲ್ಲಿರುವ ಮಗ/ ಮಗಳು ಊರಲ್ಲಿರುವವರ ಸಂಪರ್ಕಕ್ಕೆ ಎರಡು ದಿನ ಸಿಗಲಿಲ್ಲವೆಂದರೆ ಊರಲ್ಲಿ ಅಪ್ಪ, ಅಮ್ಮಂದಿರಿಗೆ ಆತಂಕ. ಆಫೀಸಿನಿಂದ ಗಂಡ ಬರುವುದು ಸ್ವಲ್ಪ ತಡವಾದರೆ ಹೆಂಡತಿಗೂ, ಮಗ/ಗಳು ಶಾಲೆ, ಕಾಲೇಜಿನಿಂದ ಬರುವುದು ಸ್ವಲ್ಪ ತಡವಾದರೂ ಅಪ್ಪ- ಅಮ್ಮನಿಗೆ ಜೀವವೇ ಬಾಯಿಗೆ ಬಂದ ಹಾಗೆ.
ಬಿವಿ ಕಾರಂತರು `ಗೋಕುಲ ನಿರ್ಗಮನ’ವನ್ನು ರಂಗ ರೂಪಕ್ಕಿಳಿಸಿದಾಗ ಕೊನೆಯಲ್ಲಿ ಒಂದು ದೃಶ್ಯ ತಂದಿದ್ದರು. ಗೋಕುಲ ತೊರೆದು ಹೋದ ಕೃಷ್ಣನಿಗಾಗಿ ಎಲ್ಲರೂ ದೀಪ ಇಟ್ಟುಕೊಂಡು ಕಾಯುತ್ತಾ ಮರಳಿ ಬರುವಂತೆ ಪ್ರಾರ್ಥಿಸಿ ಹಾಡುತ್ತಾರೆ. ಹಾಗೇ ನಾವೆಲ್ಲಾ ಹಾಡಬೇಕು, ನಮ್ಮನ್ನು ಕಾಪಾಡಲು ಬರಲಿರುವ ಆವುದಾದರೂ ಶಕ್ತಿಗಾಗಿ, ನಮ್ಮನ್ನು ಬಿಟ್ಟು ಹೋಗಲಿರುವ ಭೀತಿಗಾಗಿ, ನಮ್ಮನ್ನು ಮತ್ತೆ ಆವರಿಸಿಕೊಳ್ಳಲಿರುವ ನೆಮ್ಮದಿಗಾಗಿ, ನಮ್ಮವರು ರಾತ್ರಿ ಮನೆಗೇ ಬರಬೇಕೆಂಬ ಬೇಡಿಕೆಗಾಗಿ, ಕೆಲಸ ಕಳೆದು ನಿರ್ಗತಿಕರನ್ನಾಗಿ ಮಾಡಬಾರದೆಂಬ ಅಪೇಕ್ಷೆಗಾಗಿ, ರಸ್ತೆ, ಮನೆ, ಶಾಲೆ, ಹೊಟೇಲ್‌, ರೈಲ್ವೇ ನಿಲ್ದಾಣ, ರೈಲುಗಳು ರಕ್ತಸಿಕ್ತವಾಗಬಾರದೆಂಬ ಕಾಳಜಿಗಾಗಿ.

December 1, 2008

ಇದೀಗ ಬಂದ ಪ್ರತಿಕ್ರಿಯೆ

ಪ್ರಿಯ ವಿಕಾಸ,

IND2771Bಮುಂಬೈ ದುಷ್ಕೃತ್ಯದ ಹಿನ್ನೆಲೆಯಲ್ಲಿ ಹೃದಯದಿಂದ ಮಾತನಾಡಿದ್ದೀರಿ. ಹಾಗೆಂದೆ ನನ್ನ ಹೃದಯವೂ ಹಗರಾಗಿದೆ, ಆತಂಕದ ಸಂದರ್ಭದಲ್ಲಿ ಅಪ್ಪಿಕೊಳ್ಳುವಷ್ಟು. ಆ ಎರಡು ದಿನ ಒಳಗೊಳಗೆ ಅತ್ತವನು ನಾನು. ಇಸ್ಲಾಮಿನ ಹೆಸರಿನಲ್ಲಿ ಮನುಷ್ಯವಿರೋಧಿ ರಕ್ಕಸರು ಮಾಡಿದ ಹೇಯ ಕೃತ್ಯವದು. ಅವರು ತಮ್ಮನ್ನು ಇಸ್ಲಾಮಿಯರು ಎಂದು ಭ್ರಮಿಸಿಕೊಂಡಿದ್ದಾರೆ. ಅವರಷ್ಟೆ ಅಲ್ಲಾ, ಹಾಗೇ ಯೋಚಿಸುವ ಮತಾಂಧರು ಆಳದಲ್ಲಿ ಸೈತಾನರೇ ಆಗಿರುತ್ತಾರೆ. ಇಂತಹ ಕಲ್ಪಿತ
ಜೆಹಾದ್‌ನಲ್ಲಿ ಸತ್ತು ಸ್ವರ್ಗ ಸೇರುತ್ತೇನೆಂಬ ಭ್ರಮೆ ಅವರಿಗಿದ್ದರೆ ನಂಬದಿದ್ದರೂ ನಾನು ಹೇಳುತ್ತೇನೆ. ಅವರು ನರಕಕ್ಕೆ ಮಾತ್ರ ಯೋಗ್ಯರು. ಧರ್ಮದಮಲಿನ ಮತ್ತನ್ನು ನೆತ್ತಿಗೆರಿಸಿಕೊಂಡ ಹಿಂದೂ, ಮುಸ್ಲಿಂ ಇತ್ಯಾದಿ ಅತಿರೇಕಗಳೇ ಚರಿತ್ರೆಯಿಂದ ಇವರೆಗೂ ರಾಕ್ಷಸರನ್ನು ಸೃಷ್ಠಿಸಿರುವುದು. ದೇಶಭಕ್ತಿ, ಧರ್ಮ ಭಕ್ತಿಗಳ ತೋರುಗಾಣಿಕೆಯ ಹಿಂದಿನ ಅಧಿಕಾರ ರಾಜಕಾರಣ ಇಂತಹ ಮತಾಂಧ ಸಾಮಾಜಿಕತೆಯನ್ನು ಸೃಷ್ಠಿಸುತ್ತದೆ. ಜಿನ್ನಾ, ಗೊಲ್ವಾಲ್ಕರ ಮೊದಲಾದವರ
ಚಿಂತನೆಗಳಲ್ಲಿ ಇವತ್ತಿನ ಸಂದರ್ಭದ ಬೀಜಗಳಿವೆ. ಜಿನ್ನಾ ಧಾರ್ಮಿಕನಾಗಿರಲಿಲ್ಲ. ಆದರೆ ಧಾರ್ಮಿಕವೆಂಬ ದೇಶವನ್ನು ಸೃಷ್ಠಿಸಿದ, ಅದು ಶುದ್ಧ ಸ್ಮಶಾನದ ಮೇಲೆ. ಪಾಕಿಸ್ತಾನ ನಿಜಕ್ಕೂ ಬೇಯುತ್ತಿರುವುದೇ ಖಬರಸ್ತಾನ ಮೇಲೆ. ಇತ್ತ ಕಡೆ ಚಿಂತನಗಂಗಾದ ಮಾರ್ಗದರ್ಶನದಲ್ಲಿ ಹಿಂದೂ ಮತೀಯ ರಾಷ್ಟ್ರೀಯ ನಿರ್ಮಾಣಕ್ಕೆ ಗೊಡ್ಸೆ ಮಾಡಿದ್ದು ಅದನ್ನೆ.
ನನಗೀತ ಭಾರತದ ಧಾರ್ಮಿಕ ಭಯೋತ್ಪಾದನೆಯ ಸಂಸ್ಥಾಪಕನೆಂದು ಕಾಣುತ್ತಾನೆ. ಈ ಯಾವ ಅರಿವಿಲ್ಲದೆ ಭಯೋತ್ಪಾದನೆ ಎಂದರೆ ಮುಸ್ಲಿಂರು ಎನ್ನುವುದು. ಮಕ್ಕಳನ್ನು ಹಡೆದು ಜನಸಂಖ್ಯೆ ಹೆಚ್ಚುಸುತ್ತಿದ್ದಾರೆ ಎನ್ನುವುದು. ನೆಮ್ಮದಿಯಿಂದ ದುಡಿದು ಬದುಕುತ್ತಿರುವ ನಿಷ್ಪಾಪಿ ಮುಸ್ಲಿಂರನ್ನು ಸಾಮೂಹಿಕವಾಗಿ ಶಂಕಿಸುವಂತೆ ಹಿಂದೂ ದೇಶಭಕ್ತಿಯ ಸನ್ನಿ ಸೃಷ್ಠಿಯಾಗುತ್ತಿರುವುದು ಇದು ಇನ್ನೊಂದು ಬಗೆಯ ಅತಿರೇಕದ ಅಪಾಯ.
ಲದ್ದಿಜೀವಿಗಳೆಂದು ಲೇವಡಿ ಮಾಡುವುದು, ನಕಲಿ ಜಾತ್ಯಾತೀತರೆನ್ನುವುದು ಇಂತಹ ಬಳಕೆಗಳ ಹಿಂದೆ ವಿವೇಕವನ್ನು ಸಮೂಹ ಸನ್ನಿಯ ಕೈಗೆ ಒಪ್ಪಿಸಿದ ಆಪಾಯವಿದೆ. ಇಂತಹ ಸಂದರ್ಭದಲ್ಲಿ ಇಸ್ಲಾಂ ಕಾಫಿರರನ್ನು ಕೊಲ್ಲು ಎನ್ನುತ್ತದೆ ಇತ್ಯಾದಿ… ಇಸ್ಲಾಮಿನ ಅಪವ್ಯಾಖ್ಯಾನ ಓದಿನ ಕೊರತೆಗಿಂತ ರಾಜಕೀಯ ಅಪಪ್ರಚಾರವೇ ಆಗಿರುತ್ತದೆ.
ಕುರಾನ ಆಗಲಿ, ಭಗವದ್ಗೀತೆಯಾಗಲಿ ಇವತ್ತಿನ ಸಮಸ್ಯೆಗಳಿಗೆ ಉತ್ತರಿಸುತ್ತವೆ ಎನ್ನುವುದೇ ಮೂರ್ಖತನ. ಈ ಮೂರ್ಖರು ಎದರುಬದರು ನಿಂತು ಗುಜರಾತನ್ನು, ಮುಂಬೈಯನ್ನು ಭಯೋತ್ಪಾದಕ ನಕಾಶೆಯಲ್ಲಿ ಗುರುತಿಸಿದ್ದಾರೆ. ಮುಖ್ಯವಾದದ್ದನ್ನು ಹೇಳಿ ಮುಗಿಸುತ್ತೇನೆ. ಈ ಹೊತ್ತಿನ ದುರಂತ ಮತ್ತು ಆಪಾಯವೆಂದರೆ ಭಯೋತ್ಪಾದನೆಯ ವಿರೋಧದ ನೆಪದಲ್ಲಿ ಮುಸ್ಲಿಂ ಜನಸಮುದಾಯ ವಿರೋಧಿ, ಹಿಂದೂ ರಾಜಕಾರಣಕ್ಕೆ ಪೂರಕವಾಗಿ ನಮ್ಮ ಕೆಲ ಬರಹಗಾರ ಮಿತ್ರರು ಆವೇಶವನ್ನು
ಅಪವ್ಯಾಖ್ಯಾನವನ್ನು, ಸುಳ್ಳನ್ನು ಪರಿಣಾಮದಲ್ಲಿ ಅಮೇರಿಕಾದ ಸಾಮ್ರಾಜ್ಯಷಾಹಿ ಏಜೆಂಟರಾಗಿ ಬರಹಕ್ಕೆ ಇಳಿದಿರುವುದು. ಲಾಡೆನ ಬೆಳೆದಿದ್ದು ಹೀಗೆಯೇ, ಅಂತೆಯೇ ಇಂದಿನ ಇಂಡಿಯಾದ ಸೋಕಾಲ್ಡ ಹಿಂದೂ ದೇಶಭಕ್ತ (ನಿಜ ಹಿಂದೂವಲ್ಲದ) ಪತ್ರಕರ್ತರು ಇವರ ಅಪ್ರೋಚ ಬಗ್ಗೆ ನನಗೆ ಖೇದವಿದೆ. ಲಷ್ಕರೆ ಕ್ರಿಮಿಗಳಿಗೂ, ಗೊಡ್ಸೆ, ಮುತಾಲಿಕ ಮೊದಲಾಗಿ ಯಾವ ವ್ಯತ್ಯಾಸವೂ ಆಳದಲ್ಲಿ ಇಲ್ಲ.
ಥ್ಯಾಂಕ ಯೂ ವಿಕಾಸ. ಬರೆಯುತ್ತಾ ದೊಡ್ಡದಾಯಿತು. ನನ್ನದೆಯೂ ಕುದಿಯುತ್ತಿದೆ. ಈ ದೇಶ ತಣ್ಣಗಾಗಿಸಲು.
ಹಿಂದೂ, ಮುಸ್ಲಿಂ ಅತಿರೇಕಗಳಿಂದ ಹೊರ ಬಂದು ಯೋಚಿಸಲು ಸಾಕಷ್ಟು ಇದೆ. ಇಲ್ಲದಿದ್ದರೆ ಭಯೋತ್ಪಾದನೆಯನ್ನು ಖಂಡಿತ ನಿವಾರಿಸಲು ಆಗದು.
ಅಮೇರಿಕಾದ ಗಿಡುಗ ನಮ್ಮ ನೆತ್ತಿಯ ಮೇಲೆ ಹಾರುತ್ತಲೇ ಇದೆ. ಇಂಡಿಯಾದ ಅಸ್ತಿತ್ವದ ಸೂತ್ರವೇ ಇದರ ಪಂಜಿನಲ್ಲಿ ಸಿಕ್ಕು ಹಾಕಿಕೊಂಡಿರುವಾಗ ಕವಿ, ಪತ್ರಕರ್ತ, ಬರಹಗಾರರ ವಿವೇಕ ಸರಿದಾರಿಗೆ ಬರಬೇಕಿದೆ.
ನಿಮ್ಮೊಳಗಿನ ಪ್ರಾಮಾಣಿಕ ಮಿಡಿತಕ್ಕೆ, ಮಾನವೀಯತೆ ಜೊತೆ ನಾನಿದ್ದೇನೆ ವಿಕಾಸ ಕೈಚಾಚಿ ನನ್ನೊಂದಿಗೆ.
ನಿಜ ಹೇಳಲೇ ಆಸರೆಯೂ ಬೇಕಿದೆ ಈ ಹೊತ್ತು. ಬೀಸಿ ಬರುವ ಕಲ್ಲುಗಳಿಂದ ಮರೆಯಾಗಲು, ಮನುಷ್ಯತ್ವದ ತಾಣಬೇಕಿದೆ ನನ್ನಂತವರಿಗೆ.
- ಬಿ. ಪೀರಭಾಷ

December 1, 2008

ಬಾಂಬು, ಬುಲೆಟ್ಸ್‌, ಭಗವದ್ಗೀತೆ!

IND3092B`ಕಳ್ಳ ಕುಳ್ಳ’ನ ಮನೆಯಲ್ಲಿ ಎರಡು ದಿನಗಳ ಹಿಂದೆ ಬರೆದ `ತೊಳೆಯಲಿ ರಕ್ತ ತೊಡೆಯಲಿ ಕಣ್ಣೀರು’ ಲೇಖನಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆ ಎಲ್ಲಾ ಪ್ರತಿಕ್ರಿಯೆಯಲ್ಲೂ ಭಯೋತ್ಪಾದನೆಗೆ ಒಕ್ಕೊರಲಿನ `ಕ್ಕಾರ’ ವ್ಯಕ್ತವಾಗಿದೆ ಎನ್ನುವುದು ಸಮಾಧಾನಕರ. ಆದರೆ ಒಂದು ಮಾತು, ಮುಂಬೈ ಸೇರಿದಂತೆ ಅನೇಕ ಕಡೆ ಇಷ್ಟು ವರ್ಷಗಳಿಂದ ನಡೆದುಕೊಂಡೇ ಬಂದ ಭಯೋತ್ಪಾದಕ ದಾಳಿಗೆ ಆ ಲೇಖನ ಒಂದು ಪ್ರತಿಕ್ರಿಯೆಯಾಗಿತ್ತು ಅಷ್ಟೇ.
ಆದರೆ ಇಲ್ಲಿ ಕೆಲವು ಅಂಶಗಳನ್ನು ಸ್ಪಷ್ಟಪಡಿಸಬೇಕು. ಒಂದು, ಮುಸ್ಲಿಂ ಸಮುದಾಯದ ಮೇಲೆ ಇರುವ ಅನುಮಾನ ಅಮಾನವೀಯ ಎನ್ನುವುದು. ಈ ಮಾತುಗಳನ್ನು ಕೆಲವರ ಸಣ್ಣ ಆಕ್ಷೇಪದೊಂದಿಗೆ ನೋಡಿಯಾರು. ಆದರೆ ಒಂದಂತೂ ಸತ್ಯ. ಭಯೋತ್ಪಾದಕತೆಯನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಸಬೇಕು. ಭಯೋತ್ಪಾದನೆ ನಿಗ್ರಹಕ್ಕೆ ಕಾನೂನಿನ, ರಕ್ಷಣಾ ತಂತ್ರ ಮಟ್ಟದ ಪರಿಹಾರ ಸಿಗಬೇಕು. ಹಾಗಂತ ಭಯೋತ್ಪಾದನೆ ಎನ್ನುವ ಒಂದು `ಹಿಂಸಾನಿಲುವಿ’ಗೆ ಯಾವುದೇ ಕೋಮನ್ನು ಆರೋಪಿಸುವುದು ಸರಿಯಾದ ಅಭಿಪ್ರಾಯ ಅಲ್ಲ. ಒಂದು ಊರಲ್ಲಿ ಭ್ರೂಣ ಹತ್ಯೆ ಜಾಸ್ತಿ ಆಯಿತು ಎಂದ ಕೂಡಲೇ ಆ ಊರಲ್ಲಿರುವ ಹೆಂಗಸರೆಲ್ಲಾ `ಶಿಶುಹತ್ಯೆ’ ಮಾಡುವವರು, ಕಟುಕರು ಎಂದು ಅಭಿಪ್ರಾಯಪಡುವಂತಿಲ್ಲ. ಯಾಕೆಂದರೆ ಅಲ್ಲಿರುವ ಹೆಂಗಸರಲ್ಲಿ ನಿಮ್ಮ ಅಮ್ಮನೂ ಇರಬಹುದಲ್ಲಾ? Keep reading →

November 28, 2008

ತೊಳೆಯಲಿ ರಕ್ತ, ತೊಡೆಯಲಿ ಕಣ್ಣೀರು

IND2760Bಸಾಮಾನ್ಯ ಜನರ ಸಾವು, ಕಮಾಂಡೋಗಳ ವೀರ ಮರಣ ಮತ್ತು ಆತಂಕವಾದಿಗಳ ಹತ್ಯೆ.
`ಮೂರು ವರ್ಗ’ಗಳಾಗಿ ಹೀಗೆ ನಾವು ಸಾವನ್ನು ವಿಂಗಡಿಸಿ ನೋಡುತ್ತಿದ್ದರೂ ಮುಂಬಯಿಯಲ್ಲಿ ಎರಡೂವರೆ ದಿನಗಳ ಕಾಲ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಘಟಿಸಿದ ಎಲ್ಲಾ ಸಾವೂ ಒಂದೇ. ನಿಂತಿದ್ದು ಉಸಿರು, ಸ್ತಬವಾಗಿದ್ದು ಎದೆಬಡಿತ, ಚೆಲ್ಲಿದ್ದು ರಕ್ತ, ಮುಚ್ಚಿದ್ದು ಕಣ್ಣು. ಆತಂಕವಾದಿಗಳ ಹತ್ಯೆ ಆ ಕ್ಷಣಕ್ಕೆ ಮಾನ್ಯವಾದರೂ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತಾ ವ್ಯಾಪಿಸುತ್ತಿರುವ `ಆತಂಕವಾದಿತನ’ದ ಹತ್ಯೆಯಿಂದ ಮಾತ್ರ ಬಹುಶಃ ಎಲ್ಲವೂ ಸರಿಯಾಗಲು ಸಾಧ್ಯ.
ಈವರೆಗೆ ನೂರರೊಳಗೆ ಲೆಕ್ಕಕ್ಕೆ ಸಿಗುತ್ತಿದ್ದ ಭಯೋತ್ಪಾದಕ ಸಾವಿನ ಸಂಖ್ಯೆ ಇದೀಗ ನೂರನ್ನು ದಾಟಿದೆ. ಗಡಿಯಲ್ಲಿ ನಡೆಯುತ್ತಲೇ ಬಂದ ಯುದದ ಸಂಖ್ಯೆಯೂ ಹೀಗೇ ಸಣ್ಣ ಮಟ್ಟದಲ್ಲಿ ಪ್ರಾರಂಭವಾಗಿ ದೊಡ್ಡ ಸಂಖ್ಯೆಯಲ್ಲಿ ಯೋಧರನ್ನು, ಶ್ರೀಸಾಮಾನ್ಯರನ್ನು ಬಲಿ ತೆಗೆದುಕೊಳ್ಳುತ್ತಾ ಸಾಗಿತು. ಈಗ ಅದೂ ಮಾಮೂಲಿ ಸುದ್ದಿಗಳಲ್ಲಿ ಒಂದಾಗಿಬಿಟ್ಟಿದೆ. ಮುಂದೆ ಭಯೋತ್ಪಾದಕ ಕೃತ್ಯವೂ ಸಾರ್ವಜನಿಕರ ಮನಸ್ಸಲ್ಲಿ ಹೀಗೆ ನಿರ್ಭಾವುಕತೆಯನ್ನು ಬಿತ್ತಿಬಿಟ್ಟರೆ ಕಷ್ಟ.
IND27164Bಮುಂಬಯಿ, ಬೆಂಗಳೂರು, ದೆಹಲಿ, ಹೀಗೆ ದೊಡ್ಡ ದೊಡ್ಡ ನಗರಗಳಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಭಯೋತ್ಪಾದಕತೆ ಒಂದು ಲೆಕ್ಕದಲ್ಲಿ ಪರಸ್ಪರ ದ್ವೇಷದ ಕತೆ ಅಷ್ಟೇ. `ಮುಸ್ಲೀಮರಿಗೆ ಯಾವುದೇ ತೊಂದರೆಯಾಗಬಾರದು’ ಎಂದು ಎಚ್ಚರಿಕೆ ನೀಡಲು ಮೊನ್ನೆಯ `ಬ್ಲ್ಯಾಕ್‌ ವೆಡ್ನೆಸ್‌ಡೇ’ ಕಾರ್ಯಾಚರಣೆ ನಡೆಯಿತು ಎಂಬ ಮಾತನ್ನು ಭಯೋತ್ಪಾದಕ ಸಂಘಟನೆಗಳು ಹೇಳಿವೆ. ಇತ್ತೀಚಿನ ಸ್ವಾ ಪ್ರಕರಣ `ಹಿಂದೂ ಭಯೋತ್ಪಾದನೆ’ಯನ್ನು ಪ್ರತಿಪಾದಿಸಿತು. ಅಲ್ಲಿಗೆ ದ್ವೇಷಕ್ಕೆ ದ್ವೇಷದ, ಹಿಂಸೆಗೆ ಹಿಂಸೆಯ ಉತ್ತರವೇ ಸಾಗಬೇಕಾಗುತ್ತದೆ. ಇದೇ ತೀವ್ರಗೊಂಡರೆ ಮುಂದೊಂದು ದಿನ ಉಳಿಯುವುದು ಶಾಂತಿಯಲ್ಲ, ಹೊರತಾಗಿ ಅಲ್ಲಿ ಉಳಿಯುವುದು ದ್ವೇಷ ಮಾತ್ರ.
ಈಗ ನಾವಿಡುವ ಹೆಜ್ಜೆ ಎಷ್ಟು ಎಚ್ಚರಿಕೆಯಿಂದ ಕೂಡಿರಬೇಕು ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಹಿಂದೂ ಸಮುದಾಯದ ಮನಸ್ಸಲ್ಲಿ ಆಳವಾಗಿ (ಒಬ್ಬರಿಗೂ ತಮ್ಮ ಅರಿವಿಗೇ ಬಾರದಂತೆ) ಬೇರೂರಿರುವುದು ಮುಸ್ಲಿಂ ದ್ವೇಷ. ಹೀಗಾದರೆ ಶ್ರೀಸಾಮಾನ್ಯನಾಗಿ, ಇದಾವುದರ ಪರಿವೆ, ಹರಕತ್ತು ಇಲ್ಲದಂತೆ ಬದುಕುತ್ತಿರುವ ಅಸಂಖ್ಯ ಭಾರತೀಯ ಮುಸ್ಲಿಂ ಸಮುದಾಯ ಎಲ್ಲಿಗೆ ಹೋಗಬೇಕು? ನಮ್ಮ ನಿಮ್ಮ ಗೆಳಯ ಮುಸ್ಲಿಂ ಆಗಿದ್ದಾನೆ, ನಮ್ಮ ಅಕ್ಕ ಪಕ್ಕ ಅಂಥ ಅನೇಕ ನಿರುಪದ್ರವಿ ಮುಸ್ಲಿಂ ಕುಟುಂಬಗಳಿವೆ. ಭಯೋತ್ಪಾದಕ ಕೃತ್ಯ ಎಂದರೆ ಅದು ಮುಸ್ಲಿಂ ಸಮುದಾಯದ ಕೃತ್ಯ ಎಂದೇ `ಪ್ರತಿಪಾದನೆ’ ಆಗಿಬಿಟ್ಟರೆ ಅದಕ್ಕಿಂತ ದೊಡ್ಡ `ಭಾವನಾತ್ಮಕ ಭಯೋತ್ಪಾದನೆ’ ಇನ್ನೊಂದಿಲ್ಲ. ಅದನ್ನು ಬಹಳ ಸೂಕ್ಷ್ಮವಾಗಿ, ಹುಷಾರಾಗಿ ಹೋಗಲಾಡಿಸದೇ ಹೋದರೆ ಸ್ವಸ್ಥ ಸಮಾಜವೊಂದಕ್ಕೆ ದೊಡ್ಡ ಗಂಡಾಂತರ ಕಾದಿದೆ.
ಈ ನಡುವೆ ಮಾಧ್ಯಮಕ್ಕೂ ಕೂಡ ಜವಾಬ್ದಾರಿಯ ಅರಿವು ಇನ್ನಷ್ಟು ಹೆಚ್ಚಾಗಬೇಕು. ಹಿಂಸಾಚಾರ ಸುದ್ದಿಯ ಒಂದು ಸರಕಾಗುವುದು `ಭಯೋತ್ದಾದಕತೆ’ಗಿಂತ ದೊಡ್ಡ ದುರಂತ. ಒಂದು ಘಟನೆಯ ವರದಿ ಮಾಡುವ ಉತ್ಸಾಹದ ಮಧ್ಯೆಯೂ ಸುದ್ದಿಯನ್ನು ಸೋಸಿ, ಒಂದು ಸಮಾಜದ ಆರೋಗ್ಯಕ್ಕೆ ಯಾವುದನ್ನು ಹೇಳಿದರೆ ಹೆಚ್ಚು ಸರಿ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಆಲೋಚಿಸಿ ವರದಿಯನ್ನು ನೀಡಬೇಕು. `ಫ್ಲಾಷ್‌ ನ್ಯೂಸ್‌’ (ಸುದಿ ಸೋಟ) ಎನ್ನುವುದು `ಬ್ಲಾಸ್ಟ್‌ ನ್ಯೂಸ್‌’ ಆಗದಿದ್ದರೆ ಸಾಕು. ಸುದ್ದಿಯ ಹೇಳಿಕೆಯಲ್ಲಿ ರಂಜಕತೆಯನ್ನು ತೋರದೇ, ಸುದ್ದಿಯ ನಡುವೆಯೂ ಭಾವುಕತೆಯನ್ನು ಮರೆಯದೇ ಒಬ್ಬ ವರದಿಗಾರ ವ್ಯವಹರಿಸಬೇಕು. ಮಾಧ್ಯಮದ ಕಡೆಯಿಂದ ಸತ್ತ ಅಮಾಯಕರಿಗೆ ಸಲ್ಲಿಸಬಹುದಾದ ಅತಿ ಉತ್ತಮ ಶ್ರದಾಂಜಲಿ ಬಹುಶಃ ಇದೇ ಆಗಿದ್ದೀತು.
ಕಳೆದ ಮೂರು ದಿನಗಳಿಂದ ನಡೆದ ಮುಂಬಯಿ ಹಿಂಸಾಚಾರ ಒಂದು ಭಯೋತ್ಪಾದಕ ಕೃತ್ಯದ ಹಿಂಸೆಯ ವಿರಾಟ್‌ದರ್ಶನವನ್ನು ಇಡೀ ರಾಷ್ಟ್ರಕ್ಕೆ ರವಾನಿಸಿದೆ ಎಂದರೆ ಆ ಹೇಳಿಕೆ ಅಮಾನವೀಯವಾಗಿ ಕೇಳಬಹುದು. ಆದರೆ ಈ ಅಸೀಮ ಹಿಂಸೆ ಒಬ್ಬ ಭಯೋತ್ಪಾದಕನ ಮನಸ್ಸಲ್ಲೂ ವೇದನೆಯನ್ನು, ಕಳವಳವನ್ನು ತರಲಿ. ಒಬ್ಬ ಹಿಂಸಾಚಾರಿಗೇ ಆ ಹಿಂಸೆ ದುಃಖವನ್ನು ತರುವ ದಿನ ಬಂದರೆ ಜಗತ್ತು ಶಾಂತವಾದೀತು. ಕಂಠ ಬಿಗಿದು, ಸೆರೆಯುಬ್ಬಿ, ಕಣ್ಣುಗಳಲ್ಲಿ ನೀರುದುಂಬಿಕೊಂಡವರ ಅಳು ಅಲ್ಲೇ ನಿಲ್ಲಬಹುದು. ಬೋರ್ಗರೆವ ಎದೆಯ ಕಡಲು ಉಬ್ಬರ ಇಳಿಸಿಕೊಂಡು ನಿಶ್ಚಿಂತವಾಗಬಹುದು.

November 26, 2008

ಪತ್ರಕರ್ತನ ಪತ್ರಕತೆ

ಮನೋಹರ್‌

ಚಿತ್ರ: ಮನೋಹರ್‌

ಸುರೇಶ್‌ ಕೆ `ಉದಯವಾಣಿ’ಯ ಸಹೋದ್ಯೋಗಿ. ಶುಕ್ರವಾರದ `ಸುಚಿತ್ರ’ ಸಿನಿಪುರವಣಿಯನ್ನು ನಿರ್ವಹಿಸುವವರು. ಅಂದವಾದ ಮುಖಪುಟ ರೂಪಿಸುವಲ್ಲಿ, ವಿಶೇಷವಾಗಿ ಪುರವಣಿಗಳಿಗೆ ಅಂದ, ಆಕಾರವನ್ನು ನೀಡುವಲ್ಲಿ ನುರಿತಿರುವ ಲೇಔಟ್‌ ತಜ್ಞ. ಸಿನಿಮಾಗಳನ್ನು ಖಚಿತವಾಗಿ ವಿಮರ್ಶಿಸಬಲ್ಲ, ಮೊನಚಾಗಿ ಬರೆಯಬಲ್ಲ, ಯಾವುದೇ ಕಲೆಯನ್ನು ಸುಲಭವಾಗಿ ಗ್ರಹಿಸಿ, ಬರವಣಿಗೆಗೆ ಇಳಿಸಬಲ್ಲವರು ಸುರೇಶ್‌.
ಆದರೆ ಕತೆ, ಕವಿತೆಗಳ ಬರವಣಿಗೆಗೆ ಈವರೆಗೂ ತೊಡಗದೇ ಇದ್ದ ಸುರೇಶ್‌ ಅಚಾನಕ್‌ ಒಂದು ಕತೆ ಬರೆದು ಅಚ್ಚರಿ ಮೂಡಿಸಿದ್ದಾರೆ. ಕತೆಯ ಹೆಸರು: ಕಾಗದ ಬಂದಿದೆ. ಪತ್ರಲೇಖನ ಹೋಗಿ ಎಸ್ಸೆಮ್ಮೆಸ್‌ ಲೇಖನಕ್ಕೆ ಬಂದು ನಿಂತಿರುವ ನಮ್ಮ ಕುಶಲವಿನಿಮಯ ಪ್ರತಿಭೆ, ಸಂಬಂಧಗಳ ಅರ್ಥವನ್ನೇ ಸಂಕುಚಿತಗೊಳಿಸಿರಬಹುದಾದ ಸಾಧ್ಯತೆ ಇದೆ. `ಒಂದಿಷ್ಟು ವ್ಯಾವಹಾರಿಕ ಪತ್ರಗಳ ನಡುವೆ ಒಂದು ಹಸಿರು ಅಂತರ್ದೇಶಿ ಪತ್ರ ಇದ್ದರೆ ಒಣ ತರಗೆಲೆಯ ನಡುವೆ ಒಂದು ಹಸಿರು ಎಲೆ ಸಿಕ್ಕಷ್ಟು ಖುಷಿಯಾಗುತ್ತದೆ’ ಎಂದು ಲೇಖಕ ಜಯಂತ ಕಾಯ್ಕಿಣಿ ಬರೆದಿದ್ದರು.
ಅಂಥ ಅಂತರ್ದೇಶಿ ಪತ್ರಗಳ ಸಂಭ್ರಮದ ದಿನಗಳಲ್ಲೇ ಹುಟ್ಟಿ ಬೆಳೆದು ಬಂದ ಸುರೇಶ್‌, `ಕಾಗದ ಬಂದಿದೆ’ ಕತೆಯ ಮೂಲಕ ಸಂಬಂಧಕ್ಕಿರುವ ಅನೇಕ ಸೂಕ್ಷ್ಮಗಳನ್ನು ಹೇಳಲು ಪ್ರಯತ್ನಿಸಿದ್ದಾರೆ.
ನಾವು `ಕಳ್ಳಕುಳ್ಳ’ ಬ್ಲಾಗ್‌ನಲ್ಲಿ ಈಗಷ್ಟೇ ಪ್ರಾರಂಭಿಸಿರುವ `ತಿಳಿಯ ಹೇಳುವೆ ಇಷ್ಟಕತೆಯನು’ ಮಾಲಿಕೆಯಲ್ಲಿ `ಕಾಗದ’ ಕತೆಯನ್ನು ಪ್ರಕಟಿಸುತ್ತಿದ್ದೇವೆ. ಓದಿ.
Keep reading →