ಮಳೆಗಾಲ ಕಾಲಿಟ್ಟಿದೆ. ನಾವು ಸ್ವಲ್ಪ ಬದಲಾಗುತ್ತಿದ್ದೇವೆ. ಹೊಸ ವಿನ್ಯಾಸ, ಹೊಸ ಸ್ವರೂಪ, ಹೊಸ ಭರವಸೆಗಳೊಂದಿಗೆ ನಾವು ಅಡ್ರೆಸ್ ಬದಲಿಸಿಕೊಂಡು ಹೊರಟಿದ್ದೇವೆ. ಇನ್ನೇನಿಲ್ಲ, ನಾವು ಇಷ್ಟು ದಿನ ವರ್ಡ್ ಪ್ರೆಸ್ ನಲ್ಲಿದ್ದೆವು. ಇನ್ನುಮುಂದೆ ನಾವು ಬ್ಲಾಗ್ ಸ್ಪಾಟ್ ನಲ್ಲಿ ಕಾಣಿಸಿಕೊಳ್ಳಲಿದ್ದೇವೆ. ನಮ್ಮ ವಿಳಾಸ: kallakulla.blogspot.com

ಜಪಾನ್ ಸಾಹಿತ್ಯದ ಅತ್ಯಂತ ಪ್ರಮುಖ ಕವಯಿತ್ರಿ ರಿನ್ ಇಷಿಗಾಕಿ (Rin Ishigaki : 1920-2004). ಬ್ಯಾಂಕ್ ನಲ್ಲಿ ಕ್ಲಾರ್ಕ್ ಆಗಿ ಕೆಲಸ ನಿರ್ವಹಿಸುತ್ತಾ, ಶ್ರೇಷ್ಠ ಕವಿತೆಗಳಿಗೆ ಜನ್ಮನೀಡಿದ ಈಕೆ ಕಾರ್ಮಿಕ ಹೋರಾಟದಲ್ಲಿ ಸಕ್ರಿಯಳಾಗಿದ್ದವಳು. ನಾಲ್ಕು ಕವನ ಸಂಗ್ರಹಗಳನ್ನು ಹೊರತಂದು, ಪ್ರಬಂಧಗಾರ್ತಿಯಾಗಿಯೂ ಗುರುತಿಸುವಂಥ ಕೃತಿಗಳನ್ನು ಕೊಟ್ಟ ರಿನ್ 2004ರಲ್ಲಷ್ಟೇ ತೀರಿಕೊಂಡಳು. ಆಕೆಗೆ ಜಪಾನ್ ಸಾಹಿತ್ಯದ ಕೆಲವು ಮಹತ್ವದ ಪ್ರಶಸ್ತಿಗಳು ಸಂದಿವೆ. ಆಕೆಯ ‘Island’ ಕವಿತೆಯ ಭಾವಾನುವಾದ.

ರಿನ್ ಇಷಿಗಾಕಿ

ದೊಡ್ಡ ಕನ್ನಡಿಯಲ್ಲಿ ನಿಂತಿದ್ದೇನೆ, ನಾನು;

ತುಂಬ ಒಂಟಿ ಅನ್ನಿಸುವ

ಸಣ್ಣ ದ್ವೀಪ,

ಎಲ್ಲರಿಂದ ಬೇರ್ಪಟ್ಟಂಥ ಒಂದು ರೂಪ.

 

ನನಗೆ ಗೊತ್ತು ಈ ದ್ವೀಪದ ಚರಿತ್ರೆ,

ಈ ದ್ವೀಪದ ಆಯಾಮ,

ಅದರ ಸೊಂಟ, ಜಘನಗಳ ಸುತ್ತಳತೆ,

ಕಾಲಕಾಲಕ್ಕೆ ತೊಟ್ಟ ಬಟ್ಟೆಬರೆ,

ಹಕ್ಕಿಯ ಹಾಡು,

ಚ್ರೈತ್ರದ ಪಾಡು,

ಹೂ ಪರಿಮಳದ ಜಾಡು.

 

ನನ್ನ ಮಟ್ಟಿಗೆ ಹೇಳುವುದಾದರೆ

ನಾನು ದ್ವೀಪದಲ್ಲಿ ನಿಂತಿರುವೆ,

ನಾನೇ ಉತ್ತಿದ್ದು,

ನಾನೇ ಬಿತ್ತಿದ್ದು,

ನಾನೇ ಬೆಳೆದು ಬೆಳಗಿದ್ದು ಇಲ್ಲಿ.

ಇದರ ಬಗ್ಗೆ ತಿಳಿಯಲು ಸಾಧ್ಯವಿಲ್ಲ ಯಾರಿಗೂ,

ಒಂದು ಶಾಶ್ವತ ವಿಳಾಸ ಪಡೆಯಲಿಲ್ಲಿ

ಸಾಧ್ಯವಿಲ್ಲ ಎಂದಿಗೂ.

 

ಕನ್ನಡಿಯಲ್ಲಿರುವ ನಾನು

ದಿಟ್ಟಿಸುತ್ತಾ ನೋಡುತ್ತೇನೆ, ನನ್ನೇನ್ನೇ;

ಇಲ್ಲಿ ಕಾಣುವ,

ಅಲ್ಲೆಲ್ಲೋ ದೂರದ ಒಂದು ಸಣ್ಣ ದ್ವೀಪ.

ಅಮ್ಮನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಅಮ್ಮಂದಿರ ದಿನ ಅಂತ ಮೊನ್ನೆ ವೆಬ್ ಸೈಟ್ ಒಂದರಲ್ಲಿ ಬಾಲಿವುಡ್ ನ ಅಮ್ಮಂದಿರ ಇನ್ನೂ ಮಸುಕದ ಗ್ಲಾಮರ್ ಬಗ್ಗೆ ಫೋಟೋ ಸಹಿತ ಒಂದು ಸಾಲಿನ ಬರೆಹ ಇತ್ತು. ಅಮ್ಮಂದಿರ ದಿನಕ್ಕೆ ಮಾಧ್ಯಮಗಳೆಲ್ಲಾ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡಲು ಸಿದ್ಧವಾಗುತ್ತಿವೆ.

ಈ ಭಾನುವಾರ ಎಲ್ಲಾ ವ್ಯಾಪಾರ ಮಳಿಗೆ, ಎಲ್ಲಾ ಹೊಟೇಲ್, ಎಲ್ಲಾ ಮಾಲ್ ಗಳು ಶುಭಾಶಯಗಳಿಂದ, ಸಂಭ್ರಮಗಳಿಂದ ತುಂಬುತ್ತವೆ, ಮನೆ ಮನೆಯಲಿ ದೀಪ ಉರಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿದ ಅಮ್ಮನೆಂಬ ಕೈಗಳಿಗೆ ಹೂಗೊಂಚಲಿನ ಶುಭಕಾಮನೆ. ಆದರೆ ಇಲ್ಲೊಂದೆರಡು ಫ್ಯಾಮಿಲಿಗಳಿಗೆ ಹ್ಯಾಗೆ ಅಮ್ಮಂದಿರ ದಿನದ ಶುಭಾಶಯ ಹೇಳೋದು ಅಂತ ಗೊತ್ತೇ ಆಗುತ್ತಿಲ್ಲ. ನಿಮಗೇನಾದರೂ ಹೇಳುವುದಕ್ಕೆ ಸಾಧ್ಯವಾದರೆ ಅದಕ್ಕೆ ನನ್ನ ಕಡೆಯಿಂದ ಒಂದು ಥ್ಯಾಂಕ್ಸ್ ಸಲ್ಲುತ್ತದೆ.

1.

ಜನವರಿ 08, 2007

ಅಂದು ಸೋಮವಾರ. ಅನುರಾಧಾ ಹೆಸರಿನ ಆ ಅಮ್ಮ ಎಂದಿನಂತೆ ಗಡಿಬಿಡಿಯಲ್ಲೇ ಎದ್ದಳು. ಗಂಡನನ್ನು ಆಫೀಸಿಗೆ ರೆಡಿ ಮಾಡಿದಳು. ಗಂಡ ರೆಡಿ ಆಗುತ್ತಿದ್ದ ಹಾಗೇ ಮಗನನ್ನು ಶಾಲೆಗೆ ರೆಡಿ ಮಾಡಬೇಕಿತ್ತು. ಅದೂ ಎಂದಿನಂತೆ ನಿರಾತಂಕವಾಗಿ ಸಾಗಿತು. ಅವನು ಶಾಲೆ ಮುಗಿಸಿ ಬೇಗನೆ ಬಂದರೆ ಅವನಿಗೆ ಏನಾದರೂ ಮಾಡಿಡಬೇಕು ಅಂತ ಅದನ್ನೂ ಮಾಡಿದಳು. ಗಂಡ ಬೈದಿರಬಹುದು, ತಿಂಡಿಗೆ ಉಪ್ಪು ಜಾಸ್ತಿ, ಕಾಫಿಗೆ ಸಕ್ಕರೆ ಕಮ್ಮಿ ಅನ್ನುವುದೆಲ್ಲಾ ಅದಕ್ಕೆ ಕಾರಣ ಇರಲೂಬಹುದು. ಆದರೆ ಮಗ ಮಾತ್ರ ಅಮ್ಮನ ಗಡಿಬಿಡಿಯನ್ನು ಪ್ರೀತಿ, ಅಭಿಮಾನ ಮತ್ತು ಕನಿಕರದಿಂದ ನೋಡಿರಬಹುದು.

ಅನುರಾಧಾ ಶರ್ಮ

ಗಂಡ, ಮಗನನ್ನು ಅವರವರ ಕೆಲಸಕ್ಕೆ ಕಳಿಸಿಕೊಟ್ಟು ತನ್ನ ಕೆಲಸಕ್ಕಾಗಿ ರೆಡಿ ಆದಳು. ಓಡುತ್ತೋಡುತ್ತಾ ಬ್ಯಾಂಕ್ ಮೆಟ್ಟಿಲೇರಿದಳು. ಕ್ಯಾಶ್ ವಿಡ್ರಾ ಮಾಡಿಕೊಂಡಳು. ಉಳಕೊಂಡಿರುವ ತ್ಯಾಗರಾಜ ನಗರಿಂದ ಅಲಸೂರಿಗೆ ಹೋಗಬೇಕಿತ್ತು. ಅಲ್ಲಿ ತಾನು ಮಾಡುತ್ತಿರುವ ಅರೆಕಾಲಿಕ ಎಲ್ಲೈಸಿ ಏಜೆಂಟ್ ಉದ್ಯೋಗದ ಕೆಲಸಗಳೆಲ್ಲಾ ಬಾಕಿ ಇದೆ. ಬ್ಯಾಂಕ್ ನಲ್ಲಿ ಸಿಕ್ಕ ಒಂದೆರಡು ಪರಿಚಿತ ಮುಖವನ್ನೂ ನಗು ಹೊರತುಪಡಿಸಿ ಉಳಿದ ಯಾವ ಮಾತುಗಳಲ್ಲೂ ಭೇಟಿ ಮಾಡುವುದಕ್ಕೆ ವೇಳೆ ಇರಲಿಲ್ಲ.

ಅಷ್ಟರಲ್ಲಿ ಮೊಪೆಡ್ ಏರಿ ಆಗಿತ್ತು. ಮೊಪೆಡ್ ಸಾಗುತ್ತಿತ್ತು. ಬಹುಶಃ ಯಾರದೋ ಪಾಲಿಸಿ ಮೆಚೂರ್ ಆಗಿದ್ದು, ಯಾರದೋ ಹೊಸ ಪಾಲಿಸಿಗಾಗಿ ಅರ್ಜಿ ತುಂಬಿಸುವ ಕೆಲಸಗಳೆಲ್ಲಾ ಅವಳ ತಲೆಯೊಳಗೆ ತುಂಬಿಕೊಂಡಿದ್ದಾಗ ಅವಳ ಮೊಪೆಡ್ ಎಂಜಿ ರಸ್ತೆಯ ಸಿಗ್ನಲ್ ಒಂದರ ಎದುರು ನಿಂತಿತ್ತು, ಮಣಿಪಾಲ್ ಸೆಂಟರ್ ಪಕ್ಕ ಹೊರಳಿ ಹೋದರೆ ಸಿಗದೇ ಇರುವುದಕ್ಕೆ ಅಲಸೂರು ಯಾವ ಮಹಾ ದೂರವೂ ಅಲ್ಲ.

…05, 04, 03, 02, 01, 00

Read the rest of this entry »

ವಿಧಿವಶವಾಯಿತೇ ಪ್ರಾಣ ಹಾ!

Posted: ಏಪ್ರಿಲ್ 18, 2010 in vikas

(ಪದ್ಯ ಕೃಪೆ: ಸಂಚಯ ಪತ್ರಿಕೆ, ಚಿತ್ರಗಳು: clker.com ಮತ್ತು ಕೆಂಡಸಂಪಿಗೆ)

ಹೊಸ ಬೆಳಗಿನ ಕವಿ, ಕತೆಗಾರ ಎನ್ ಕೆ ಹನುಮಂತಯ್ಯ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಷಯ ಶನಿವಾರ ಸಂಜೆ ಮತ್ತು ತೀರಿಕೊಂಡ ವಿಷಯ ಮರುದಿನ ಬೆಳಿಗ್ಗೆ ಗೊತ್ತಾದಾಗ ಯಾಕೋ ಬೇಸರದ ಮಂಜು ಇಡೀ ದಿನ ಕವಿದುಕೊಂಡೇ ಇತ್ತು. ಹಾಗಂತ ಕವಿತೆಗಳ ಹೊರತಾಗಿ ಯಾವತ್ತೂ ಅವರನ್ನು ಭೇಟಿಯಾಗಿಲ್ಲ, ಫೋನ್ ನಲ್ಲೂ ಸಂಪರ್ಕಿಸುವ ಪ್ರಮೇಯ ಬಂದಿರಲಿಲ್ಲ. ಆದರೆ ವಿಶೇಷವಾಗಿ ಅವರ ಕವಿತೆಗಳ ಓದು ನಮ್ಮ ನಿಮ್ಮನ್ನು ವಿವಶರಾಗಿಸುತ್ತಿತ್ತು, ನಮ್ಮ ನೋವುಗಳು, ಸಣ್ಣ ಸಣ್ಣ ನಲಿವುಗಳು ಅವರ ಕವಿತೆಗಳಲ್ಲಿ ಸಶಕ್ತವಾಗಿ ಮೂಡುತ್ತಿದ್ದವು.

ಕವಿ ಎನ್ನುವ ಟ್ಯಾಗ್ ಗೂ ಮೀರಿ ಎನ್ ಕೆ ಹನುಮಂತಯ್ಯ ಎಂಬ ಒಬ್ಬ ವ್ಯಕ್ತಿಯ ಸಾವು ನಿಜಕ್ಕೂ ದಿಗಿಲು ಹುಟ್ಟಿಸುತ್ತದೆ. ಇತ್ತೀಚೆಗೆ ಕೇಳಿಬಂದ ಸಣ್ಣವಯಸ್ಸಿವರ ಸಾವಿನ ಸುದ್ದಿಗೆ ಇದು ಮೂರನೇ ಸೇರ್ಪಡೆ. ಮೊದಲು ಕೇಳಿದ ಅಂಥ ಸಾವು ಮಲೆನಾಡ ಕಡೆಯ ಜನಪ್ರಿಯ ಗಾಯಕ, ಪ್ರತಿಭಾವಂತ ಸುಭಾಷ್ ಹಾರೆಗೊಪ್ಪ. ಮೂವತ್ತೈದು ಮುಟ್ಟಿದ್ದ ಆ ಗಾಯಕ ಒಂದು ಬೆಳಿಗ್ಗೆ ಇದ್ದಕ್ಕಿದ್ದಂತೇ ತೀರಿಕೊಂಡ. ಪುಟ್ಟ ಮಗು ಮತ್ತು ಮುದ್ದಿನ ಮಡದಿಯರನ್ನು ಹಿಂದೆ ಬಿಟ್ಟು ಸಾವಿನ ಮನೆಗೆ ತೆರಳಿದ ಸುಭಾಷ್, ಕುಡಿತಕ್ಕೆ ಬಲಿಯಾದ ಎಂದು ಮಲೆನಾಡು ಮಾತಾಡಿತು, ಅದು ಆತ್ಮಹತ್ಯೆ ಎಂಬ ಅನುಮಾನದ ಮಾತೂ ತೂರಿ ಬಂತು. ಏನೇ ಮಾತಾದರೂ ಅದರೊಳಗೆಲ್ಲಾ ಇರುವ ಸಾಮಾನ್ಯ ಸಂಗತಿ ಒಂದೇ, ಸಾವು.

ಇನ್ನೊಂದು ಸಾವು ಖ್ಯಾತ ಚಿತ್ರ ಸಾಹಿತಿ, ಚಿತ್ರ ಕತೆಗಾರ ಬಿ. ಎ. ಮಧು ಎನ್ನುವ ಸಜ್ಜನರ ಪುತ್ರನ ಸಾವು. ಇನ್ನೂ ಇಪ್ಪತ್ತು ವರ್ಷದ ಆ ಹುಡುಗ ತೀರಿಕೊಂಡದ್ದು ಹೇಗೆ ಎಂಬ ಪ್ರಶ್ನೆಗೆ ಅದು ಸಹಜ ಸಾವಲ್ಲ, ಅಸಹಜ ಸಾವು ಎಂದಷ್ಟೇ ಹೇಳಬಹುದು. ಆದರೆ ಇದೀಗ ಮೈಸೂರಿನ ಮಧು ಮನೆಯಲ್ಲಿ ಸಾವಿನ ಸೂತಕ, ಇರುವ ಒಬ್ಬ ಮಗನನ್ನು ಕಳೆದುಕೊಂಡವನ ದುಃಖಕ್ಕೆ ಎಂಥ ಸಾಂತ್ವನವೂ ಸಾಲದೇ.

ಆ ಎರಡು ಸಾವಿಗೆ ಇನ್ನೊಂದು ದುಃಖಕರ, ಆಘಾತಕಾರಿ ಸೇರ್ಪಡೆ ಎಂದರೆ ಹನುಮಂತಯ್ಯ.

ಇಪ್ಪತ್ತರ ಹರೆಯದ ಸಾವು ಉಂಟುಮಾಡುವ, ಉಳಿಸಿ ಹೋಗುವ ನೋವು ಒಂದು ಥರ ಆದರೆ ಉಳಿದೆರಡು ಸಾವು ಉಂಟುಮಾಡುವ ಪರಿಣಾಮ ಇನ್ನೊಂದು ಥರ. ಮೂವತ್ತರ ಆಚೀಚೆಯ ವಯಸ್ಸು ಅಂದರೆ ಅವರನ್ನು ಸಂಸಾರವೊಂದು ಅವಲಂಬಿಸಿರುತ್ತದೆ. ಆ ಸಂಸಾರದ ಕುಡಿ, ಕವಲುಗಳು ಆಗಷ್ಟೇ ಒಡೆಯುವುದಕ್ಕೆ ಪ್ರಾರಂಭಿಸಿರುತ್ತವೆ. ಅವರನ್ನು ಹುಷಾರಾಗಿ ದಡ ಸೇರಿಸಬೇಕಾದ ಕುಟುಂಬವೊಂದರ ನಾವಿಕ ಹೀಗೆ ಸಾಗರ ಮಧ್ಯದಲ್ಲೇ ಅವಲಂಬಿತರನ್ನು ಬಿಟ್ಟು ಹೋದರೆ ಅವರ ಗತಿ ಏನು? ಎಲ್ಲಾ ಸಾವುಗಳಿಗೂ ಒಂದೇ ಥರದ ಪರಿಣಾಮ ಬೀರುವ ಸಾಮರ್ಥ್ಯ ಇರುವುದಿಲ್ಲವಾದರೂ ಇಂಥ ವಯಸ್ಸಿನ ಸಾವು ಉಂಟುಮಾಡುವ ಸಾವು ಘೋರ ನರಕ.

ಹನುಮಂತಯ್ಯ, ಸುಭಾಷ್ ಹಾರೆಗೊಪ್ಪ ಮತ್ತು ಹೆಸರು ತಿಳಿಯದ ಆ ಹುಡುಗನಿಗೆ ನಮ್ಮ ಅಕ್ಷರ ಶ್ರದ್ಧಾಂಜಲಿ. ಆ ಕುಟುಂಬಗಳಿಗೆಲ್ಲಾ ಸಾವು ಭರಿಸುವ ಶಕ್ತಿ ಬರಲಿ.

ತಪ್ಪಿ ಹೋಯಿತಲ್ಲೇ ಹಕ್ಕಿ

ತಣ್ಣಗೆ ಮತ್ತು ಅಷ್ಟೇ ಮೊನಚಾಗಿ ಬರೆಯುತ್ತಿದ್ದ ಎನ್ಕೆಎಚ್, ಅವರ ಕವನ ಸಂಕಲನಗಳಿಂದ, ಹತ್ತಿರದ ವಲಯದವರ ನೆನಪುಗಳಿಂದ, ಆಗಲೇ ಅರಳಿಸಿದ ಘಮಘಮ ಪ್ರತಿಭೆಯಿಂದ, ಹಾಯಾದ ಒಡನಾಟ ಮತ್ತು ಅವರ ಬಗ್ಗೆ ಇದ್ದ ಗೌರವ, ಪ್ರೀತಿಗಳಿಂದ ಹನುಮಂತಯ್ಯ ಯಾವತ್ತೂ ಬದುಕಿರುತ್ತಾರೆ ಪತ್ರಿಕೆಯಲ್ಲಿ ಓದಿದ್ದ, ಮೊನ್ನೆ ಮೊನ್ನೆ ‘ಸಂಚಯ’ ಸಂಚಿಕೆಯಲ್ಲಿ ಪ್ರಕಟವಾಗಿ ಮತ್ತೆ ಓದಲು ಅವಕಾಶವಾಗಿದ್ದ ‘ಹಕ್ಕಿ ಮತ್ತು ಬಲೆ’ ಎಂಬ ಹನುಮಂತಯ್ಯ ಕವಿತೆ ಇಲ್ಲಿ ತುಂಬ ನೆನಪಾಗುತ್ತಿದೆ. ಅದನ್ನು ಪ್ರಕಟಿಸಿ ಹನುಮಂತಯ್ಯ ಅವರನ್ನು ನೆನಯುವುದು ತರ.

ಹಕ್ಕಿ ಮತ್ತು ಬಲೆ

ಹಗಲು ಇರುಳಿನ ಬಲೆಯೊಳಗೆ

ಹಕ್ಕಿ ಸಿಲುಕಿದೆ

ಪಕ್ಕದಲ್ಲೇ ಬೇಟೆಗಾರರ ಬಲೆ

ಉರಿಯುತ್ತಿದೆ.

ಈಗ

ಹಾಡಲೇಬೇಕು

ಪುಟ್ಟ ಕೊಕ್ಕಿನಲ್ಲಿ

ಬೇಟೆಗಾರರು ನಿದ್ರಿಸುವಂತೆ

ಈಗ

ಈ ಪುಟ್ಟ ಕೊಕ್ಕನ್ನೇ

ಖಡ್ಗವಾಗಿಸಬೇಕು

ಬಲೆ ಹರಿದು ಬಯಲ ಸೇರುವಂತೆ.

ಲೇಖನ, ಕತೆ, ವಿಮರ್ಶೆ, ವಾದ, ವಿವಾದ, ಪ್ರಮಾದ, ವಿಷಾದ ಪತ್ರಗಳ ರಾಶಿಯ ಮಧ್ಯೆ ಮುಗ್ಧವಾಗಿ ಸಿಗುವುದು ಹಾಗೂ ಹಾಯಾಗಿ ನಗುವುದು ಎಂದರೆ ಅದು ಕವಿತೆ ಮಾತ್ರ. ಅಂಥ ಹೊಸ ಕವಿತೆ, ನಿಮಗಾಗಿ…

 

ನಾನು ನಾನಾಗಿಯೇ

ಈ ಬೀದಿಗಳಲ್ಲಿ ಓಡಾಡುವುದಿಲ್ಲ.

ನನ್ನ ಕಾಲ್ಗಳು ಒಂದೆಡೆ,

ನನ್ನ ಭಾವನೆ ಒಂದೆಡೆ

ನನ್ನ ಬುದ್ಧಿ ಒಂದು ಕಡೆ,

ನನ್ನ ಸಂಬಂಧ, ನನ್ನ ಪ್ರೀತಿ

 ನನ್ನ ದ್ವೇಷ, ನನ್ನ ರೋಷ,

ನನ್ನ ಅರ್ಧ ಕನಸು,

ನನ್ನ ಪಾಪಪ್ರಜ್ಞೆ ಒಂದೊಂದು ಬೀದಿಗಳಲ್ಲಿ

ರಾತ್ರೋರಾತ್ರಿ

ಅಥವಾ

ಹಾಡ ಹಗಲು ತಿರುಗುತ್ತಿರುತ್ತವೆ.

ನೀವು ಹೇಳುತ್ತೀರಿ: ನೋಡಲ್ಲಿ

ಅವನೊಬ್ಬನೇ ಹೋಗುತ್ತಿದ್ದಾನೆ

ಅಥವಾ

ಅರೆ, ಅವನು ಯಾರ ಜೋಡಿನೋ ಹೋಗ್ತಾ ಇದಾನೆ?

ಪ್ಯಾಂಟ್ ಜೇಬಲ್ಲಿ ಕೀಲಿಕೈ,

ಷರ್ಟ್ ಜೇಬಲ್ಲಿ ಪೆನ್ನು, ಪಾಸು,

ದೇಹದ ಸಕಲ ಸ್ಥಳಗಳಲ್ಲಿ ನಮ್ಮ ಅಸ್ತಿತ್ವದ ದಾಖಲೆ,

ಪತ್ರಗಳೊಡನೆ ಉಣ್ಣುವ, ಉಸುರುವ,

ಚೀರುವ, ಕಾರುವ, ನಗುವ,

ಸುಳ್ಳು, ಸತ್ಯಗಳ ಗೊತ್ತಾಗದಂತೆ

ಮಾತುಗಳ ಗ್ಲಾಸ್ ನಲ್ಲಿಟ್ಟು

ಮಿಶ್ರಣ ಮಾಡಿ ಕುಡಿವ, ಕುಡಿಸುವ

ನಮ್ಮನ್ನು ನೋಡಿ ನೀವ್ಯಾರಿಗೋ ಪರಿಚಯಿಸುತ್ತೀರಿ:

ನೋಡಿ, ಇವನು ಒಳ್ಳೆ ಹುಡುಗ,

ಒಳ್ಳೆ ಕಂಪನಿಯಲ್ಲಿದ್ದಾನೆ, ಕೈ ತುಂಬ ಸಂಬಳ.

 ಬಾಗಿಲು, ಕಿಟಕಿ, ಗೋಡೆ,

ಸೂರು, ಡೋರ್ ಲಾಕ್, ಗ್ರಿಲ್,

ಕರ್ಟನ್, ಸರಳು, ಅಡುಗೆ ಮನೆ ಹೊಗೆ ನಳಿಕೆ,

ಪೀಪ್ ಹೋಲ್, ಗೇಟುಗಳುಂಟು ಮನೆಗಳಿಗೆ,

ಅದಕ್ಕೇ ಈ ಜಗತ್ತಲ್ಲಿ ನಾನು ಒಳ್ಳೆಯವ,

ಅವರು ಉತ್ತಮರು, ಇವರು ದೇವರಂಥವರು,

ಮತ್ತವನು ಸಜ್ಜನ, ಸನ್ನಡತೆಯ ಸುಕುಮಾರ,

ಸುಸಂಸ್ಕೃತ, ಮುಗ್ಧ ನಗು, ವ್ಯಕ್ತಿತ್ವ ಸಾದಾಸೀದ,

ನೇರ ನಡೆನುಡಿಯ ಪ್ರೀತಿಪಾತ್ರ,

ಸನ್ಮಿತ್ರ.

ಓಟಲ್ ಲಿಸ್ಟ್, ಟೆಲಿಫೋನ್ ಡೈರೆಕ್ಟರ್

ತೆಗೆದರೆ ತಲೆ ತಿರುಗುತ್ತದೆ,

ಎಲ್ಲಾ ಹೆಸರುಗಳೂ ಅಂಗಿ, ಚೆಡ್ಡಿ ತೆಗೆದಂತೆ

ಬೆತ್ತಲಾಗಿ,

ಎಲ್ಲವನ್ನೂ ಒತ್ತೆಯಿಟ್ಟಂತೆ

ಕತ್ತಲಾಗಿ

ಒಂದಾದ ಮೇಲೆ ಒಂದು ಬರುತ್ತಾ ಹೋಗುತ್ತವೆ

ಅಕಾರಾದಿಯಾಗಿ.

ಟೇಬಲ್ ಮೇಲೆ ಅಕ್ಷಾಂಶ ರೇಖಾಂಶದ

ಭೂಗೋಳ ಸುತ್ತುತ್ತದೆ,

ಗೋಡೆಯಲ್ಲಿ ಅರಬ್ಬೀಸಮುದ್ರ, ಪೆಸಿಫಿಕ್ ಸಾಗರದ

ಭೂಪಟ ಗಾಳಿಗೆ ಹಾರುತ್ತಿದೆ,

ಅಪ್ಪ, ಅಜ್ಜ, ಮುತ್ತಜ್ಜನ ಫೋಟೋಗಳ

ಮೇಲೆಲ್ಲಾ ಧೂಳು ಹಿಡಿದು ಎಷ್ಟು ದಿನಗಳಾದವು?

ಕಳ್ಳ ಕುಳ್ಳ ಮತ್ತು ಈ ಬ್ಲಾಗರ್ ಗಳ ಕಳ್ಳುಬಳ್ಳಿ ಸಂಬಂಧ ಆಗಾಗ ತಪ್ಪುತ್ತದೆ, ಆಗಾಗ ಅಪ್ಪುತ್ತದೆ. ಅನೇಕ ಅಡೆತಡೆಗಳ ಮಧ್ಯೆಯೂ ಮತ್ತೆ ಬರೆಯುವ ಆಸೆ, ಉತ್ಸಾಹ, ಪ್ರೀತಿ ಕಾಡುತ್ತಲೇ ಇದೆ. ಸದ್ಯ ‘ಸುವರ್ಣ ನ್ಯೂಸ್’ ಚಾನೆಲ್ ನಲ್ಲಿ ಕೆಲಸದಲ್ಲಿರುವ ನಾವಿಬ್ಬರು, ಮತ್ತೆ ಏನಾದರೂ ಬರೆಯುವ ಆಸೆಯೊಂದಿಗೆ ಮರಳಿದ್ದೇವೆ. ಇತ್ತೀಚೆಗೆ ಕಾಡಿದ, ಕೆಣಕಿದ ಒಂದಿಷ್ಟು ಸಂಗತಿಗಳ ಬರೆವಣಿಗೆಯ ಫಲ, ಈ ಮೊದಲ ಪೋಸ್ಟ್. ಮುಂದೆ ನಿಮ್ಮ ಜೊತಂ ಕವಿತೆ, ಕತೆಗಳನ್ನೆಲ್ಲಾ ಹಂಚಿಕೊಳ್ಳಿಕ್ಕಿದೆ. ನಾವು ಮತ್ತೆ ಫೀಲ್ಡಿಗಿಳಿದಿದ್ದೇವೆ. ಇನ್ನು ನಿರಂತರ ಆಡುತ್ತೇವೆ. ರನ್, ರನ್ ಆಂಡ್ ರನ್ ಫಾರ್ ನಾಟ್ ಔಟ್!

1.

ಅಲ್ಲಿ ಇಡೀ ಗೋಕುಲವೇ ನೆರೆದಿದೆ. ಕೃಷ್ಣನ ಕೊಳಲನ್ನು ಆಲಿಸಿ ಮುಪ್ಪಿನ ಕೀಲುಗಳೂ, ದವಡೆಯ ಜೋಲುಗಳೂ ಉತ್ಸಾಹಗೊಂಡಿವೆ. ಮಗ್ಗುಲ ಹಸುಗೂಸ ಮರೆತ, ಪಕ್ಕದ ಗಂಡನ್ನ ತೊರೆದ ಗೋಪಿಕೆಯರೆಲ್ಲಾ ಕೃಷ್ಣನಿಗಾಗಿ ಹೊರಟು ಬಂದಿದ್ದಾರೆ. ಕೃಷ್ಣ ಮಥುರೆಗೆ ಹೋಗುವುದಕ್ಕೆ ಮುನ್ನ ಅವನನ್ನೊಮ್ಮೆ ಕಣ್ತುಂಬ ನೋಡತೊಡಗಿದ್ದಾರೆ. ಸಭೆಯ ಗೋಪಿಕೆಯರ ಮನಸ್ಸೂ ಆ ಕೃಷ್ಣನ ಪ್ರೀತಿಗೆ ಒಳಗೊಳಗೇ ಕೈಚಾಚುತ್ತದೆ, ಅವನ ಭಕ್ತಾನುಕಂಪೆಗೆ ಜೋಂಪಿನಂತೆ ಪ್ರತಿಕ್ರಿಯಿಸುತ್ತಿದೆ. ಆದರೆ ಆ ಗೋಕುಲದ,ಆ ಬೃಂದಾವನದ ಕೃಷ್ಣನನ್ನು ಕೂಡುವುದಕ್ಕೆ ಐಹಿಕವಾದ ಅಡ್ಡಿಗಳಿವೆ ಸಾಕಷ್ಟು. ಆ ಪಾರಮಾರ್ಥಿಕದ ಪ್ರೀತಿಗೆ ಸೋತು ಓಡಿಹೋಗುವುದಕ್ಕೆ ನಮ್ಮ ಪ್ರಾಪಂಚಿಕ ಅಡಚಣೆಗಳು ತಡೆಯುತ್ತಿವೆ. ಗೋಕುಲದ ಸುಖದಲ್ಲಿ ಮೈಮರೆತ ಅಂಥ ಜಗನ್ನಿಯಾಮಕ ಕೃಷ್ಣನನ್ನೇ ಮಧುರೆಯ ಬಿಲ್ಲಹಬ್ಬ ನೆಪವಾಗಿ ಕರೆಯಿತು, ನಮ್ಮ ಮನೆ, ಮಠ, ಮಗು, ಮೊಬೈಲು, ಸೀರಿಯಲ್ಲು ಇತ್ಯಾದಿ ಸಕಲ ಆಕರ್ಷಣೆಗಳು ಕೈ ಹಿಡಿದೆಳೆಯವೇ, ಚಕ್ಕಳಮಕ್ಕಳ ಕುಳಿತ ನಮ್ಮೀ ಆಸಕ್ತಿಯನ್ನು ವಿಚಲಿತಗೊಳಿಸವೇ?

ನಾವು ಹೊರಡುತ್ತೇವೆ, ಅರ್ಧಕ್ಕೇ. ತನ್ಮಯವಾಗಿ ಕೂತ ದೇಹಗಳ, ಏಕಾಗ್ರ ಮನಸ್ಸುಗಳ ಸಂದಣಿಯಿಂದ ಒಂದೊಂದೇ ದೇಹಗಳು, ಮನಸ್ಸುಗಳು, ಅರೆ ಮನಸ್ಸುಗಳು ಎದ್ದು ಹೋರಡುತ್ತವೆ. ಒಳ್ಳೆಯ ನಾಟಕ, ಒಳ್ಳೆಯ ಸಂಗೀತ ಕಚೇರಿ, ಒಳ್ಳೆಯ ಸಿನಿಮಾ, ಒಳ್ಳೆಯ ಯಕ್ಷಗಾನ, ಒಳ್ಳೆಯ ಸಭೆ, ಪುಸ್ತಕ ಬಿಡುಗಡೆ, ಉಪನ್ಯಾಸಗಳಿಂದ ಹೀಗೆ ಕಳಚಿಕೊಳ್ಳುವ ಕ್ರಿಯೆ, ದೇಹದಿಂದ ಪ್ರಾಣ ಕಳಚಿಕೊಂಡಷ್ಟೇ ದುಃಖಕರ, ವಿಷಾದಕರ. ಆದರೂ ನಾವು ಚಿಂತಿಸುತ್ತೇವೆ, ಅರ್ಧಕ್ಕೆ ಹೋಗುವುದು ಅವರವರ ಅರಸಿಕತೆಯ ದ್ಯೋತಕವೇ? ಮುಗಿದ ಮೇಲೆ ಹೋದರಾಗದೇ ಎಂದು ನಾವು ನೀವು ವಾದಿಸಿದರೆ ಮುಗಿಯುವ ಹೊತ್ತಿಗೆ ಆ ಜನಗಳಿಗೆ ಒಂದು ಮುಖ್ಯ ಕೆಲಸ ತಪ್ಪಬಹುದು. ಮನೆಗೆ ಹೋಗುವುದಕ್ಕೆ ಬಸ್ಸು, ಸರಿಯಾದ ಸಮಯಕ್ಕೆ ಹೋಗಬೇಕಾದಲ್ಲಿಗೆ ಹೋಗದಿದ್ದರೆ ಊಟ, ವಸತಿಗಳೆಲ್ಲಾ ತಪ್ಪಬಹುದು. ಇದೊಂದೇ ಕಾರಣಕ್ಕಾಗಿ ಅರಸಿಕತೆಯ ಪಟ್ಟ ಕಟ್ಟಬಾರದು, ಪಾಪ ಪಾಪ.

ಯಾಕೋ ಕಾಡುವುದಕ್ಕಾಗಿಯೇ ನಮಗೆ ಈ ಜಗತ್ತು ಒಂದಿಷ್ಟನ್ನ ಅರ್ಧವೇ ಉಳಿಸಿ ಹೋಗಿರುತ್ತದೆ. ಅರ್ಧಕ್ಕೇ ಹೊರಟು ಹೋಗುವುದರಲ್ಲಿ ಒಂದು ಕಲಾತ್ಮಕ ಅಪಚಾರ ಇದೆ. ನಾವು ನೋಡಿದಷ್ಟನ್ನೇ ಮನಸ್ಸಲ್ಲಿ ಮೆಲುಕು ಹಾಕುವುದಕ್ಕೆ ಪ್ರಾರಂಭ ಮಾಡುತ್ತೇವೆ. ನೋಡಿದ್ದಷ್ಟನ್ನೇ ಎಂದರೆ ಇನ್ನೂ ಇದೆ ಎಂದು ಗೊತ್ತಿರುವ, ಆದರೆ ಮುಂದೇನೆಂದು ಗೊತ್ತಿರದ ಸಂಗತಿಯನ್ನು. ಮನೆಗೆ ಹೋಗುವವರೆಗೂ ಆ ಒಂದು ಪ್ರಸಂಗ ನಮ್ಮ ಮನಸ್ಸಲ್ಲೇ ಕೊರೆಯತೊಡಗುತ್ತದೆ. ಯಾವುದೋ ಎಸ್ಸೆಮ್ಮೆಸ್ ಓದಿ ಮುಗಿದ ನಂತರವೂ, ಊಟ ಮಾಡಿದ ನಂತರವೂ, ಕಾರ್ಯಕ್ರಮದಿಂದ ತೆರಳಿ, ನಕ್ಕು, ಯಾವುದೋ ಸೀರಿಯಲ್ ನೋಡಿ, ಕಾಮಿಡಿ ದೃಶ್ಯಕ್ಕೆ ನಕ್ಕು ಮಲಗಿ, ನಿದ್ದೆ ತಿಳಿದು ಎದ್ದ ಮೇಲೂ ಆ ಕಾರ್ಯಕ್ರಮ ಮರು ಪ್ರಸಾರವಾಗುತ್ತಲೇ ಇರುತ್ತದೆ ಅನವರತ.

ಪ್ರತಿಯೊಬ್ಬರ ಬಾಲ್ಯದಲ್ಲೂ ಒಂದೊಂದು ಅರ್ಧವೇ ನೋಡಿದ ಕಲಾ ಪ್ರಕಾರಗಳಿವೆ. ಟೀವಿಯಲ್ಲಿ ಪ್ರಸಾರವಾಗುವ ಸಿನಿಮಾಗಳೆಲ್ಲಾ ಕರೆಂಟು ಕೈಕೊಟ್ಟ ಕಾರಣಕ್ಕಾಗಿ ಅರ್ಧ ಮಾತ್ರ ಗೊತ್ತಾಗಿದ್ದೆಷ್ಟೋ ಇವೆ. ಬಹಳ ಹಿಂದೆ ದೂರದರ್ಶನವೊಂದೇ ಮನರಂಜನೆಯ ಮಾಧ್ಯಮ ಆಗಿದ್ದಾಗ ದೂರದರ್ಶನದಲ್ಲೇ ಕರೆಂಟು ಹೋಗಿ, ಸಿನಿಮಾ ಪ್ರಸಾರವೇ ರದ್ದಾದ ಪ್ರಸಂಗಗಳಿವೆ. ನಿದ್ದೆಗಣ್ಣಲ್ಲೇ ಕಾಣುತ್ತಾ ಕುಳಿತ ಯಕ್ಷಗಾನ ಪ್ರಸಂಗದಿಂದ ಅಪ್ಪ ಬಲತ್ಕಾರದಿಂದ ಎಬ್ಬಿಸಿಕೊಂಡು ಬಂದು, ಹಾಸಿಗೆಗೆ ಹಾಕಿದ ಕಾರಣಕ್ಕಾಗಿ ಅಥವಾ ತನಗೇ ಗಾಢ ನಿದ್ದೆ ಹತ್ತಿ ಯಕ್ಷಗಾನ ಪ್ರಸಂಗವನ್ನು ಉಳಿದರ್ಧ ಮಿಸ್ ಮಾಡಿಕೊಂಡ ಹುಡುಗರು ಮಲೆನಾಡಿನಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದಾರೆ. ಸಂಗೀತ ಕಚೇರಿಗಳಲ್ಲಂತೂ ಎಷ್ಟು ಸಲ ಅರ್ಧ ಮಾತ್ರ ಕೂರುವುದಕ್ಕೆ ಸಾಧ್ಯವಾಗಿ, ಬಸ್ಸು ತಪ್ಪುವ ಕಾರಣಕ್ಕೆ, ತುಂಬ ಸಮಯ ಆಯಿತೆಂಬ ಸಬೂಬಿಗೆ ಅನ್ಯಾಯವಾಗಿ ಸಂಗೀತದ ಸವಿ ಅರ್ಧವೇ ಪ್ರಾಪ್ತವಾಗಿದೆ.

ಹಾಸ್ಟೆಲ್ ನಲ್ಲಿ ವಾಸ ಮಾಡುತ್ತಾ, ಕಾಲೇಜು ಪೂರೈಸಿದವರಿಗೆ ಹೀಗೆ ಅರ್ಧ ಮಾತ್ರ ನೋಡಲಿಕ್ಕೆ ಸಾಧ್ಯವಾದ ಕಾರ್ಯಕ್ರಮ, ಸಿನಿಮಾ, ಆರ್ಕೆಷ್ಟ್ರಾ, ನಾಟಕ, ಯಕ್ಷಗಾನಗಳು ಅದೆಷ್ಟೋ? ಇಂಥ ಸಮಯಕ್ಕೆ ಹಾಸ್ಟೇಲ್ ನಲ್ಲಿರಬೇಕೆಂಬ ಕಟ್ಟುನಿಟ್ಟಿನ ನಿಯಮ ಇದ್ದಾಗ, ನೋಡುತ್ತಿರುವ ಕಾರ್ಯಕ್ರಮ ಮುಗಿಯದೇ ಹೋದಾಗ ಸೀಟಿನಿಂದ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು, ಹಿಂದೆ ಹಿಂದೇ ನೋಡುತ್ತಾ, ನಿಂತು ಸ್ವಲ್ಪ ನೋಡುತ್ತಾ, ಆ ಕಾರ್ಯಕ್ರಮ ಕಣ್ಣ ಕೊನೆಗೆ ಕಾಣುವವರೆಗೂ ಆಸ್ವಾದಿಸುತ್ತಾ, ತನ್ನ ವಿಧಿಯನ್ನು ಹಳಿಯುತ್ತಾ ಹಾಸ್ಟೇಲ್ ಸೇರಿಕೊಂಡವರ ಸಂಖ್ಯೆ ಎಷ್ಟಿಲ್ಲ?

ಕ್ಷಣಕಾಲ ಕಣ್ಮುಚ್ಚಿ, ನೆನಪಿನ ಗಣಿಗೆ ಕಿವಿ ಹಚ್ಚಿ ಕೇಳಿಸಿಕೊಳ್ಳೋಣ, ಕಾಣಿಸಿಕೊಳ್ಳೋಣ.

Read the rest of this entry »

ಕಣ್ಣಿಗೆ ಬಟ್ಟೆ ಇರುವವರೆಗೆ

ಏನೇನೋ ನೋಡಬೇಕಿದೆ ಇನ್ನು ಮುಂದೆ,

ಹೊರಡುವ ಮೊದಲು

ಬಟ್ಟೆ ಕಟ್ಟಿಕೊಳ್ಳಿ ಕಣ್ಣಿಗೆ.

ಕಣ್ಣುಗಳಿಗೆ ಕಟ್ಟಿದ ಬಟ್ಟೆಗಾಗಿ

ತೆರಿಗೆ ತೆತ್ತ

ಜನ ಈ ಜಗತ್ತಿನಲ್ಲಿ ಯಾರೂ ಇಲ್ಲ.

ನೀರಿಗಿರುವ, ನೆಲಕ್ಕಿರುವ, ದುಡಿಮೆ, ಖರ್ಚಿಗಿರುವ

ತೆರಿಗೆ, ಬಟ್ಟೆಗಿಲ್ಲ…

ನಾವು ಎಲ್ಲರೂ ಹಾಕಿಕೊಂಡ

ಆ ಸಾಮೂಹಿಕ ಪಟ್ಟಿಯ ಹಿಂದೆ

ಎಲ್ಲ ಸತ್ಯಗಳೂ, ಎಲ್ಲಾ ಮಿತ್ಯಗಳೂ

ಅವರವರು ಅರಿತುಕೊಂಡಂತೆ.

ನಮ್ಮ ಅರಿವು, ನಮ್ಮ ಮರೆವು

ಜಗತ್ತಿನ ಸುಗಮ ನಡುಗೆಗೆ

ಧಕ್ಕೆ ಆಗದಿರಲಿ.

ಹೆಜ್ಜೆಗಳು ತಪ್ಪಬಹುದು, ಮನಸ್ಸುಗಳು ಜಾರಬಹುದು

ಎಲ್ಲೆಗಳನ್ನು ಮೀರಬಹುದು,

ಸಣ್ಣ ಸಣ್ಣ ಸಮಸ್ಯೆಗಳ ಮಧ್ಯೆ

ಸಿಲುಕುತ್ತಿದ್ದವ

ಈಗ ದೊಡ್ಡ ಸಮಸ್ಯೆಗಳನ್ನ ತಾನೇ

ಹುಟ್ಟುಹಾಕಿ ತನ್ನ ಇನ್ನೊಂದು ಆಕರ್ಷಕ

ತಪ್ಪುಗಳ ಮೂಲ ಅದನ್ನು ಗೆಲ್ಲಬಹುದು.

ಅಷ್ಟಕ್ಕೂ ಗೆಲುವೆಂಬುದು

ಯಾರ ಸೋಲಿನ ವಿರುದ್ಧಾರ್ಥಕ ಪದ

?

ಪಟ್ಟಿಗಳ ಕಟ್ಟಿಕೊಂಡ ಗಾಂಧಾರಿ ಇರುವವರೆಗೂ

ಅಲ್ಲೊಂದು ಕೌರವರ ಅಟ್ಟಹಾಸವಿರುತ್ತದೆ,

ಪಾಂಡವರ ವಿಜಯವಿರುತ್ತದೆ.

ದ್ರೌಪದಿಯ ಹೆರಳು, ಕುಂತಿಯ ನರಳು

ಕರ್ಣನ ಔದಾರ್ಯದ ಉರುಳು

ಸಾಗುತ್ತಿರುತ್ತದೆ.

ಗಾಂಧಾರಿಯ ಕಣ್ಣ ಸುತ್ತಾ ಬಟ್ಟೆಯ ಗುರುತು,

ಪಾಂಡವರ ಪಕ್ಷಪಾತಿ ಕೃಷ್ಣನ ಸುತ್ತ,

ದೃತರಾಷ್ಟ್ರನ ಕುರುಡಿನ ಸುತ್ತ

ಕೌರವರ ದುರಾದೃಷ್ಟದ ಸುತ್ತ

ಈ ಪಟ್ಟಿಯ ಕಲೆಗಳು ಇದ್ದೇ ಇದ್ದವು,

ಕಲೆಗಳಿಗೆ ಸಾಕ್ಷಿಪ್ರಜ್ಞೆ ಬರುವವರೆಗೆ

ಲಲಿತ ಕಲೆ,

ಕಣ್ಣಿಗೆ ಬಟ್ಟೆ ಇರುವವರೆಗೆ

ಕವಿಗೆ ಬೆಲೆ.

ಚಿತ್ರಕೃಪೆ: ಹಿಂದೂ

ಕಾಲೇಜು ಓದುತ್ತಿದ್ದ ಕಾಲ. ಅಶ್ವತ್ಥ್ ಅವರ ಸಂಗೀತದಲ್ಲಿರುವ ಹುರುಳನ್ನು ತಿಳಿಯದ, ಅದರ ಔಚಿತ್ಯ ಗೊತ್ತಿಲ್ಲದ ನಾನು ಸೇರಿದಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಾವೊಂದು ಎಂಟು ಮಂದಿ ಉಜಿರೆಯಿಂದ ಮಂಗಳೂರಿಗೆ ಹೋದೆವು.

ಅದು ಮುಂದೆ 2000 ಎಂಬ ಸಹಸ್ರಮಾನವನ್ನು ಆಹ್ವಾನಿಸಲು ಅಶ್ವತ್ಥ್ ಸಿದ್ಧಪಡಿಸಿದ್ದ ಒಂದು ಕಾರ್ಯಕ್ರಮ. ಅದರ ಪ್ರಕಾರ 1999ರ ಡಿಸೆಂಬರ್ 31ಕ್ಕೆ ರಾತ್ರಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಒಂದು ಸಾವಿರ ಮಂದಿ ಹಾಡಬೇಕು. ಅದಕ್ಕೆ ಹೆಸರು: ‘ಹೊಸ ಸಹಸ್ರಮಾನಕ್ಕೆ ಸಪಸ್ರ ಕಂಠದ ಗಾಯನ’. ಅದಕ್ಕಾಗಿ ಕರ್ನಾಟಕದ ಬೇರೆ ಬೇರೆ ಕಡೆ ಪೂರ್ವಭಾವಿ ತರಬೇತಿ. ಅದರಲ್ಲಿ ನಾನು ನನ್ನ ತಮ್ಮ ಹೋಗಿದ್ದೆವು.

ಒಂದು ದಿನವಿಡೀ ಅಶ್ವತ್ಥ್ ಅವರಿಂದ ತರಬೇತಿ ಪಡೆದುಕೊಳ್ಳುವ ಒಂದು ಅಪೂರ್ವ ಅವಕಾಶ ನಮಗಿತ್ತು. ಆದರೆ ಆ ಕಾಲಕ್ಕೆ ಅವರೊಬ್ಬ ಅಷ್ಟು ಮಹಾನ್ ಗಾಯಕ ಎಂಬ ಅಂಥ ದೊಡ್ಡ ಕಲ್ಪನೆ ನನ್ನ ಹುಡುಗುಬುದ್ಧಿಗೆ ಹೊಳೆದಿರಲಿಲ್ಲವೇನೋ?

ಆದರೂ ಅವರಿಂದ ಕಲಿತ ಹಾಡುಗಳು ಈಗಲೂ ಒಂದೊಂದೂ ಸ್ಮರಣೀಯ. ಕುವೆಂಪು ಅವರ ಕ್ರಾಂತಿ ಗೀತೆಗಳ ಅರಿವು, ಅದರ ಸ್ವಾದ, ಸಂಗೀತದ ಜೊತೆ ಅದನ್ನು ಉಣಬಡಿಸಿದ ರೀತಿ, ಅಶ್ವತ್ಥ್ ಕಲಿಸುವ ರೀತಿ… ಹೀಗೆ ಎಲ್ಲವೂ ಒಂದೊಂದೂ ನೆನಪಾಗುತ್ತದೆ ಈಗ.

ನಾನು, ನನ್ನ ಸಹೋದರ ವಿಶ್ವಾಸ್

ಆದರೆ ಒಂದು ಹಂತ ಎದುರಾಯಿತು. ನನ್ನ ಹಿಂದೆ ಯಾರೋ ಅಪಶ್ರುತಿ ತೆಗೆಯುತ್ತಿದ್ದರಂತ ಕಾಣಿಸುತ್ತದೆ. ಎರಡು ಮೂರು ಸಲ ನನ್ನ ಕಡೆ ನೋಡಿದರು ಅಶ್ವತ್ಥ್. ನಾನು ಅಷ್ಟೊಂದು ಗಮನ ಹರಿಸದೇ ನನ್ನ ಪಾಡಿಗೆ ಹಾಡುತ್ತಿದ್ದೆ. ಆದರೆ ಮತ್ತೊಂದು ಸಲ ನನ್ನ ಕಡೆಯಿಂದ ಅಪಶ್ರುತಿ ಬಂದಾಗ ಅಶ್ವತ್ಥ್ ಕೆರಳಿದರು.

‘ಅಯ್ಯೋ ಏನ್ರೀ ಹಾಗ್ ಅಪಶ್ರುತಿ ತೆಗೀತೀರಿ, ಸರಿಯಾಗ್ ಹಾಡೋಕ್ ಬರ್ದಿದ್ರೆ ಯಾಕ್ರೀ ಬರ್ತೀರಿ ಇಲ್ಗೆಲ್ಲಾ, ಸರಿಯಾಗ್ ಹಾಡೋಕ್ ಏನ್ ತೊಂದ್ರೆ ನಿಮ್ಗೆ?’

ಬೈಗಳವನ್ನೂ ತಾರಕದಲ್ಲೇ ಹೇಳಿದರು.

ಆದರೆ ನಾನು ಆ ದಿನ ನಿಜಕ್ಕೂ ಅಪಶ್ರುತಿಯಲ್ಲಿ ಹಾಡಿರಲಿಲ್ಲ. ಹಿಂದಿನವರು ಅಪಶ್ರುತಿ ತೆಗೆದಿದ್ದು ತಾವು ಎಂದು ಒಪ್ಪಿಕೊಳ್ಳಲಿಲ್ಲ.

ಅದಾದ ಮೇಲೆ ಅಲ್ಲಿ ಕಲಿತ ಹಾಡುಗಳನ್ನು ಮಂಗಳೂರಿನಲ್ಲಿ ಹಾಡಿದೆವು. ಹಾಡು ಚೆನ್ನಾಗಿ ಬಂದಾಗ ಅಶ್ವತ್ಥ್ ನಮ್ಮನ್ನು ಅಭಿನಂದಿಸಿದರು. ‘ಮಂಗಳೂರಿನವರು, ಚೆನ್ನಾಗ್ ಹಾಡ್ತೀರ್ರೀ’ ಅಂತ ಉಬ್ಬಿಸಿದರು ನಮ್ಮನ್ನು. ಮುಂದೆ ಬೆಂಗಳೂರಿಗೆ ಬಂದಾಗ, ನಮ್ಮ ಕಡೆ ಬಂದು. ‘ನೀವು ಮುಂದೆ ಬನ್ರೂ, ನೀವ್ ಮಂಗಳೂರಿನೋರು ಚೆನ್ನಾಗಿ ಹಾಡ್ತೀರಿ’ ಎಂದು ಹುರಿದುಂಬಿಸಿದರು.

ಅದು ಇವತ್ತಿಗೂ ಅಶ್ವತ್ಥ್ ಅವರಿಗೆ ಗೊತ್ತಿಲ್ಲ, ಅಪಶ್ರುತಿ ತೆಗೆದಿದ್ದು ನಾನಲ್ಲ ಅಂತ!

@#@ @#@

ಅದಾದ ಮೇಲೆ ನಾನು ಬಂದು, ಪತ್ರಿಕೋದ್ಯಮಕ್ಕೆ ಸೇರಿಕೊಂಡು, ಹಾಡು ಬಿಟ್ಟು ಎಲ್ಲಾ ಮುಗಿದಿದೆ. ಅದಾದ ಮೇಲೆ ಒಮ್ಮೆ ಕಲಾಕ್ಷೇತ್ರದಲ್ಲಿ ಅವರ ಬಳಿ ‘ನಿಮ್ಮ ತರಬೇತಿ ಪಡೆದು ಆ ದಿನ ಹಾಡಿದ್ದೆ’ ಎಂದು ಹೇಳಿಕೊಂಡು. ಅವರು ಆ ದಿನ ಅವರದೇ ಆದ ಶೈಲಿಯಲ್ಲಿ ನಕ್ಕು ಹೊರಟು ಹೋದರು.

ಅನಂತರ ಪತ್ರಿಕೋದ್ಯಮದಲ್ಲಿದ್ದ ಕಾರಣಕ್ಕೆ ಅವರನ್ನು ಭೇಟಿ ಆಗಬೇಕಾಗಿ ಬಂತು. ಸಂತೋಷದಿಂದ ಭೇಟಿ ಆದೆ. ಅವರ ಮನೆಯಲ್ಲಿ ಒಂದು ಸಲ ಸಿನಿಮಾ ಪತ್ರಕರ್ತನಾಗಿ ಅವರ ಆತಿಥ್ಯ ಸ್ವೀಕರಿಸಿದೆ. ತಡರಾತ್ರಿಯವರೆಗೆ ಅವರು ಆತಿಥ್ಯ ನೀಡಿ, ಅವರ ಹಾಡು ಕೇಳಿಸಿದ್ದು, ಯಾರಾದರೂ ಮಾತಾಡಿದರೆ ‘ಶ್ ಕೇಳಿ, ಹಾಡು ಕೇಳಿ ಮಾತಾಡ್ಬೇಡಿ’ ಎಂದು ಚಿಕ್ಕ ಮಕ್ಕಳಿಗೆ ಹಳುವಂತೆ ಕಣ್ಣು ಬಿಟ್ಟು ಹೆದರಿಸಿದ್ದು ಎಲ್ಲಾ ನೆನಪಿದೆ.

ಈಗ ಅವರು, ನಾನು ವಾಸಿಸುವ ಬೆಂಗಳೂರಿನ ಎನ್ ಆರ್ ಕಾಲೋನಿ ಭಣಭಣಗುಟ್ಟುತ್ತಿದೆ. ಯಾವತ್ತಾದರೂ ಒಮ್ಮೆ ಕಾಣಿಸಿಕೊಂಡು, ತರಕಾರಿಗೆ ಚೌಕಾಶಿ ಮಾಡುವ ಅವರು ಅಲ್ಲಿಲ್ಲ. ಅವರನ್ನು ಕೂರಿಸಿಕೊಂಡು ಹೋಗುವ ಮೊಪೆಡ್ ಕಾಣಿಸಿಕೊಳ್ಳುವುದಿಲ್ಲ. ಅವರ ಓರೆಯಾದ ಬಾಗಿಲೊಳಗೆ ಯಾವತ್ತಾದರೂ ಕಂಡಾರೇನೋ ಎಂದು ನಾನು ರಸ್ತೆಯಿಂದಲೇ ಇಣುಕುವ ಆಶಾವಾದ ಇನ್ನಿಲ್ಲ. ಯಾವುದೋ ಆಟೋವನ್ನು ನಿಲ್ಲಿಸಿ ‘ಅಲ್ಲಿಗೆ ಬರ್ತೀರಾ, ಇಲ್ಗೆ ಬರ್ತೀರಾ’ ಎಂದು ಕೇಳಲು ಅಶ್ವತ್ಥ್ ಇಲ್ಲ.

@#@ @#@

ಈಗ ಸಂಗೀತ, ಪ್ರಾಕ್ಟೀಸ್ ಬಿಟ್ಟು ನಿಜಕ್ಕೂ ನಾನು ಅಪಶ್ರುತಿ ತೆಗೆಯುತ್ತಿದ್ದೇನೆ. ಈಗ ಅಶ್ವತ್ಥ್ ಧಾರಾಳವಾಗಿ ನನ್ನನ್ನು ಬೈಯಬಹುದು. ‘ಯಾಕ್ರೀ ಸರಿಯಾಗ್ ಹಾಡೋಕಾಗಲ್ವೇನ್ರೀ’ ಅಂತ ಕಣ್ಣು ಕೆಂಪಗಾಗಿಸಬಹುದು.

ಆದರೆ ಅದಕ್ಕೀಗ ಅವರೇ ಇಲ್ಲ.

ವೈದೇಹಿ (ಚಿತ್ರಕೃಪೆ: ಕೆಂಡಸಂಪಿಗೆ)

ವೈದೇಹಿ ಅವರ ಕ್ರೌಂಚ ಪಕ್ಷಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದ ಸುದ್ದಿ. ಅವರ ಕತೆಗಳ ರುಚಿ ಹತ್ತಿದವರಿಗೆ ವೈದೇಹಿ ಅವರಿಗೆ ಸಂದ ಈ ಪ್ರಶಸ್ತಿ ದೊಡ್ಡ ಸಂತೋಷ ಕೊಡುವ ವಿಷಯ. ಎಲ್ಲಾ ಪಂಜರದ ಗಿಣಿಗಳಿಗೆ, ಹೊಸ ಕಾಲದ ಹಳೆ ಹಿಂಸೆಗಳಿಗೆ ಮೈ ಒಡ್ಡಿದ ಸ್ತ್ರೀ ಜಗತ್ತಿಗೆ ಇದರಿಂದ ಸಮಾಧಾನವಾದರೂ ಆದೀತೇನೋ? ಸುಮಾರು ಹದಿಮೂರು ವರ್ಷಗಳ ಹಿಂದೆ ತಮ್ಮ ಕಥಾ ಸಂಕಲನವೊಂದರಿಂದ ಪರಿಚಿತರಾದಾಗ, ಎಲ್ಲೋ ಯಾವ ಊರಲ್ಲೋ, ಯಾವ ಪುಸ್ತಕದ, ಯಾವ ಪುಟಗಳಲ್ಲೋ ಕತೆಗಳನ್ನು ತಮ್ಮ ಪಾಡಿಗೆ ಕಟ್ಟುತ್ತಿದ್ದ ವೈದೇಹಿ ಹೀಗೊಬ್ಬ ಅಜ್ಞಾತ ಅಭಿಮಾನಿಯ ಉತ್ಕಟ ಓದನ್ನು ಕಲ್ಪಿಸಿಯೂ ಇರಲಾರರಾಗಿದ್ದರೇನೋ? ಆದರೆ ಅಂಥ ಅಸಂಖ್ಯ ಓದುಗರನ್ನು ತಮ್ಮ ಸಂವೇದನೆಯಿಂದ ಮುಟ್ಟಿದರು. ಅವರ ಕತೆಗಳ ಪ್ರಪಂಚ ಹೆಣ್ಮಕ್ಕಳ ಸುತ್ತಲೇ ಸುತ್ತುತ್ತಿತ್ತಾದ್ದರೂ ಆ ಜಗತ್ತಿನಲ್ಲಿ ಏನಿತ್ತು, ಏನಿರಲಿಲ್ಲ? ಕ್ರೌರ್ಯ ತಣ್ಣಗೆ ಕೂತಿರುತ್ತಿತ್ತು, ನಗು ಗೊಳ್ಳನೆ ತಂಗಿರುತ್ತಿತ್ತು, ಜೀವನ ಪ್ರೀತಿ ತೋಳ್ತೆರೆದು ಕರೆಯುತ್ತಿತ್ತು, ಕಣ್ಣೀರು ಕಣ್ಣ ರೆಪ್ಪೆಯಲ್ಲಿ ಮೂಡಿದಾಗಲೇ ಅವರು ತಮ್ಮ ಕುಂದಾಪ್ರ ಕನ್ನಡದಿಂದ ಮತ್ತೆ ನಗುವಿನ ಬತ್ತಿಯನ್ನು ನಮ್ಮೆಲ್ಲರ ಗುಳಿಕೆನ್ನೆಯಲ್ಲಿಟ್ಟು ಹಚ್ಚುತ್ತಿದ್ದರು. ನಮ್ಮ ನಿಮ್ಮ ಮನಸ್ಸಲ್ಲಿ ಕಟ್ಟಳೆಗಳ ಸರಳುಗಳ ಮಧ್ಯೆ ಒಂದು ವಾಂಛೆ, ಕಾಮನೆ ಕಳ್ಳನಂತೆ ಕೂತಿದ್ದಾಗ, ಹೊರಬರಲು ಕಾದಿದ್ದಾಗ ಅವರು ತಮ್ಮ ಕತೆಗಳ ಪಾತ್ರಗಳಲ್ಲಿ ಅದನ್ನೆಲ್ಲಾ ದಿಕ್ಕರಿಸಿ ತೋರಿಸಿದರು (ಸೌಗಂಧಿಯ ಸ್ವಗತಗಳು). ಅವರ ಅಕ್ಕುವಿನ ಟುವಾಲು, ಪುಟ್ಟಮ್ಮತ್ತೆಯ ಕೈರುಚಿ, ಶಾಕುಂತಲೆಯ ಬಿಗಿದ ಎದೆ ವಸ್ತ್ರ, ಆಭಾಳ ಮೇಕಪ್ ಕಿಟ್, ಹೆಣ್ಮಕ್ಕಳ ಸಂದಣಿಯ ಗುಟ್ಟು ಹಡೆ ಮಾತು… ವೈದೇಹಿ ಅವರ ಈ ಪ್ರಶಸ್ತಿ ಸಂದರ್ಭದಲ್ಲಿ ಸುಮ್ಮನೆ ನೆನಪಾಗುತ್ತಿದೆ.  ‘ಕಳ್ಳ ಕುಳ್ಳ’ರ ಬ್ಲಾಗಂಗಡಿ ಮುಚ್ಚಿತ್ತು. ಒಂದು ಸುಂದರ ಸಂದರ್ಭದಲ್ಲಿ ಮತ್ತೆ ತೆರೆದುಕೊಳ್ಳಲು ಕಾಯುತ್ತಿತ್ತು. ಆದರೀಗ ನಮ್ಮ ವಸಂತಕ್ಕನ ಪ್ರಶಸ್ತಿ ಸಂಭ್ರಮದಿಂದಾಗಿ ಮತ್ತೆ ಈ ಬ್ಲಾಗ್ ಗೆ ಖುಷಿ ಮರಳಿದೆ. ಇಲ್ಲಸಲ್ಲದ ಮಾತುಗಳ, ಸಂದರ್ಭಕ್ಕೊದಗದ ಮೌನದ, ಬರಬಾರದ ಜಾಣ ಕಿವುಡಿರುವ ಈ ಕಾಲದಲ್ಲಿ ಮತ್ತೆ ಏನಾದರೂ ಮಾತಾಡುವ ತವಕ. ವೈದೇಹಿ ಅವರ ಅಕ್ಷರ ಹೊಲದಲ್ಲಿ ಪ್ರಶಸ್ತಿಯ ಪೈರು ಮೂಡಿದೆ. ಆ ಪೈರಿನ ಸುಗ್ಗಿಯನ್ನು ಸಂಭ್ರಮಿಸಲು ಮತ್ತಷ್ಟು ಅಕ್ಷರಗಳೇ ಮೊಳಕೆಯೊಡೆಯಬೇಕು. ಹಾಗಾದರೆ ಅದೇ ಅವರಿಗೆ ನಾವೆಲ್ಲಾ ಸಲ್ಲಿಸಬಹುದಾದ ಗೌರವ. ಜೋಗಿ ಪುಸ್ತಕ ಬಿಡುಗಡೆ(ಬೆಳಿಗ್ಗೆ ಹತ್ತಕ್ಕೆ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್), ಜಿಎಸ್ಎಸ್ ಅವರ ಕಾವ್ಯ ‘ಚೈತ್ರೋದಯ’(ಬೆಳಿಗ್ಗೆ ಹತ್ತೂವರೆಗೆ, ರವೀಂದ್ರ ಕಲಾಕ್ಷೇತ್ರ)ಗಳ ಜೊತೆ ಈ ಭಾನುವಾರ (27, ಡಿಸೆಂಬರ್, 2009) ಸಾಹಿತ್ಯ ಲೋಕದಲ್ಲಿ ಹಬ್ಬ. ವೈದೇಹಿ ಅವರ ಪ್ರಶಸ್ತಿಯನ್ನು ಅಲ್ಲೇ ನಾವೆಲ್ಲಾ ಸಂಭ್ರಮಿಸೋಣ, ಆಚರಿಸೋಣ.

 

chairs1ನಮ್ಮಜ್ಜಿ ನಾವು ಚಿಕ್ಕವರಿದ್ದಾಗ ಬೈಯುತ್ತಿದ್ದರು. ‘ಬಾಗಿಲ ಮೇಲೆ ಕುಳಿತುಕೊಳ್ಳಬೇಡ. ದೇವರು ಕೂರೋ ಜಾಗ’ ಅಂತ. ಆದರೆ ನಾವು ಅವಳ ಕಣ್ಣು ತಪ್ಪಿಸಿ ತಪ್ಪಿಸಿ, ಅವಳ ಮಾತನ್ನು ದಿಕ್ಕರಿಸುತ್ತಿದ್ದೆವು. ಮತ್ತದು ಅನಿವಾರ್ಯ ಕೂಡ ಆಗಿತ್ತು. ನಮ್ಮಂಥ ಮಧ್ಯಮವರ್ಗದ ಮನೆಗಳೂ, ಅದರ ಬಾಗಿಲುಗಳೂ ಅರಮನೆಯ ದಪ್ಪ ಬಾಗಿಲಂತೆ, ಗೋಡೆಗಳಂತೆ ವಿಸ್ತಾರ ಅಲ್ಲ. ಆದರೆ ಅದೇ ಕಿರಿದು ಬಾಗಿಲಲ್ಲಿ ನಾನು, ನನ್ನ ತಮ್ಮ, ಅಣ್ಣ, ಪಕ್ಕದ ಮನೆಗೆ ಬಂದ ಪುಟಾಣಿ ನೆಂಟ, ಅತ್ತೆ ಮಗಳು, ಮಾವನ ಮಗ….ಎಲ್ಲರೂ ಸೇರುತ್ತಿದ್ದೆವು. ಮನೆ ಕಿರಿದಾಗಿದ್ದಷ್ಟೂ ಮಂದಿ ಹೆಚ್ಚುತ್ತಾ, ಅವಕಾಶ ಸಣ್ಣದಾಗುತ್ತಾ ಕೇಕೆ ದೊಡ್ಡದಾಗುತ್ತಾ ಮನೆಯೆಲ್ಲಾ ಗಲಗಲ ಎನ್ನುತ್ತಿತ್ತು. ಅಮ್ಮ ಅಡುಗೆ ಮಾಡುತ್ತಾ, ಅಪ್ಪ ಕೆಲಸದ ನಡುವೆ ಆಗಾಗ ಸೇರಿಕೊಳ್ಳುತ್ತಾ ನಮ್ಮ ಈ ಬೇಸಿಗೆ ರಜೆಯನ್ನು ಇಪ್ಪತ್ತಮೂರು ವರ್ಷಗಳ ಹಿಂದೆ ಮಧುರ, ಸುಂದರ ಮಾಡಿತ್ತು.

ನಮ್ಮ ಕಿರು ಬಾಗಿಲು, ದೇವರಿಗೂ ಕೂರಲು ಜಾಗ ಇರದ ಆವಾಸವಾಗಿ ದೇವರಂಥ ಮಕ್ಕಳ ಜೊತೆ ಖುಷಿಯಾಗುತ್ತಿತ್ತು.

***         ***             ***        ***

ಬೇಸಿಗೆ ರಜೆಗೆ ಪೇಟೆಯ ಒಬ್ಬ ಮೊಮ್ಮಗ ಬರುತ್ತಾನೆ, ಬಂದವ ಅಷ್ಟೋ ಇಷ್ಟೋ ಆಡುತ್ತಾನೆ, ಕರೆಂಟ್ ಇಲ್ಲದೇ ಟಿ.ವಿ ಮುಂದೆ ಶತಪಥ ಹಾಕುತ್ತಾನೆ, ಕಂಪ್ಯೂಟರ್ ಗೇಮ್ ಇಲ್ಲವೆಂದು ಗಲಾಟೆ ಮಾಡುತ್ತಾನೆ, ನಾಲ್ಕು ದಿನಗಳ ‘ಸುದೀರ್ಘ’ ರಜೆ ಮುಗಿಸಿ, ರಾತ್ರಿ ಬಸ್ಸಿಗೆ ಹತ್ತಿ ಹಳ್ಳಿಯಿಂದ ಪಾರಾಗುತ್ತಾನೆ. ರಜೆಗೆಂದು ಪೇಟೆ ಸಂಸಾರ ವಾರಗಟ್ಟಲೆ ಹಳ್ಳಿಗೆ ದಾವಿಸುವುದಿಲ್ಲ. ಬಂದವರೂ ಎಲ್ಲಾ ಸೇರಿದರೂ ಒಂದು ಗುಂಪಾಗುವುದಿಲ್ಲ. ಒಂದೆರಡು ಸ್ವೀಟ್, ಹಲಸಿನಕಾಯಿ ಹುಳಿ, ಹಲಸಿನ ಹಪ್ಪಳಗಳನ್ನು ವಯಸ್ಸಾದ ಹೆಂಗಸು, ಪೇಟೆ ನೆಂಟರಿಗಾಗಿ ಮಾಡಲಾರಳು. ಮಾಡಿದರೂ ಕೊಂಡು ಹೋಗುವವರು ಎಷ್ಟು ಮಂದಿ?

ಈಗ ಬಾಗಿಲಲ್ಲಿ ಯಾವ ದಡಿಯ ದೇವರೂ ಕುಳಿತುಕೊಳ್ಳಬಹುದು!

***       ***                ***       ***

ಕಿರಿದಾಗಿದ್ದನ್ನು ಹಿರಿದು ಮಾಡುವುದಕ್ಕೆ ಎಲ್ಲರೂ ಮುಂದು. ಹಳ್ಳಿಯಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತಿರುವ ವೃದ್ಧ ಅಪ್ಪ-ಅಮ್ಮ ವಾಸ ಮಾಡುವ ಮನೆ ಕಿರಿದಾಯಿತು ಎಂದು ಲ್ಯಾಪ್ಟಾಪ್ ಲೋಲ ತನಯನಿಗೆ ಅನ್ನಿಸಿ ಅದನ್ನು ಜೀಣರ್ೋದ್ಧಾರ ಮಾಡುವ ಪ್ಲ್ಯಾನು ನಡೆಯುತ್ತಿದೆ. ಅಡಿಕೆ ರೇಟು ಕಡಿಮೆ ಕಡಿಮೆ ಆದರೆ ಇರುವ ಮನೆಯನ್ನು ಮಾರಿ ಹಾಕುವ ಆಲೋಚನೆ ಮಗರಾಯನದು.

ಕಿರಿ ಬಾಗಿಲು ಹಿರಿದು ಮಾಡಿ, ಕಿರು ಮನೆಯನ್ನು ಹಿರಿದಾಗಿ ಕಟ್ಟಿಸಿ, ಕಿರು ಕೆಲಸದಿಂದ ಹಿರಿ ಕೆಲಸಕ್ಕೆ ಹಾರಿ, ಕಿರು ಸಂಬಳದಿಂದ ಹಿರಿ ಸಂಬಳಕ್ಕೆ ನೆಗೆದು, ಕಡಿಮೆಯ ಮೊಬೈಲಿನಿಂದ ಜಾಸ್ತಿಯ ಮೊಬೈಲಿಗೆ ಜಿಗಿದು, ಕಾರು, ಸೈಟು, ಹೂಡಿಕೆ, ಸಾಲಗಳಲ್ಲೂ ಹಿರಿಯದಕೆ ಪ್ರಾಶಸ್ತ್ಯ.

ಈಗ ನಿಜಕ್ಕೂ ಎಂಥ ದೊಡ್ಡ ದೇವರೂ ಅವನ ಮನೆ, ಕಾರು, ಮೊಬೈಲುಗಳಲ್ಲಿ ಕುಳಿತುಕೊಳ್ಳಬಹುದು!

***        *****         ****

ಅಗಲ ಈಗ ಎಲ್ಲರ ಪ್ರಾಶಸ್ತ್ಯ. ಚಿಕ್ಕ ಜಾಗದ ಚೊಕ್ಕ ಸಂಸಾರದ ಅಚ್ಚು ಹಾಕಿದ ಫೋಟೋಗಳಿಗೆ ಎಲ್ಲಿದೆ ಜಾಗ?  ಬೆಂಗಳೂರಿನ ಗಲ್ಲಿಗಳ ವಿಸ್ತೀರ್ಣ ಈಗ ಹಿಗ್ಗುತ್ತಿದೆ. ನೃಪತುಂಗ ರಸ್ತೆ ಅಗಲವಾಗಿ, ಬನ್ನೇರುಘಟ್ಟ ರಸ್ತೆ ಅಗಲವಾಗಿ, ಅರಮನೆ ರಸ್ತೆ, ಆರ್.ಸಿ. ಕಾಲೇಜು ರಸ್ತೆಗಳು ವಿಸ್ತಾರವಾಗಿ ಮಹಾರಾಣಿ ಕಾಲೇಜು ರಸ್ತೆ ವಿಸ್ತಾರಕ್ಕೆ ಸಿದ್ಧವಾಗಿ ರಸ್ತೆ ರಸ್ತೆಗಳೂ, ಸಂದು ಗುಂಡಿಗಳೂ ‘ಅಗಲಿಕೆ’ಯ ಸಂಭ್ರಮಕ್ಕೆ ಸಂದಿವೆ.

ಪುಟ್ಟ ಇಕ್ಕಟ್ಟಿನ, ಬಿಕ್ಕಟ್ಟಿನ ಪ್ರಪಂಚದಲ್ಲಿ ಸಹಜವೂ ಸುಂದರವೂ ಆದ ಒಂದು ಸೌಂದರ್ಯ ಇತ್ತು ಎಂದು ಹಲುಬುವವರಿಗೆ ಇಲ್ಲಿ ವೇಕೆನ್ಸಿ ಇಲ್ಲ. ರಸ್ತೆ ಪಕ್ಕ ಬಿದ್ದ ಮರದಲ್ಲಿ ಚೆಲ್ಲಾಪಿಲ್ಲಿಯಾದ ಹಕ್ಕಿ ಗೂಡುಗಳಲ್ಲೂ ಒಂದು ಕಿರಿ ಬಾಗಿಲಿತ್ತು, ಆ ಬಾಗಿಲಲ್ಲೂ ದೇವರು ಕೂರದಂತೆ ಚಿಲಿಪಿಲಿ ತುಂಬಿತ್ತು. ಜಗದಗಲ, ಮುಗಿಲಗಲ, ಹೆದ್ದಾರಿಯಗಲ ಅಭಿವೃದ್ಧಿಯ ಕೊಡಲಿ, ಗುದ್ದಲಿ, ಪ್ರಹಾರ.

 ಈಗ ಎಂಥ ದಡಿಯ ದೇವರೂ ನಗರದ, ಅಭಿವೃದ್ಧಿ ಶಹರದ ಬಾಗಿಲ ಮೇಲೆ ಕುಳಿತುಕೊಳ್ಳಬಹುದು!