ಹೊಸರುಚಿ

Posted: ಆಗಷ್ಟ್ 11, 2008 in vikas
ಟ್ಯಾಗ್ ಗಳು:

ಮೂರ್ನಾಲ್ಕು ದಿನಗಳಿಂದ
ನಾವು ನಮ್ಮ ನೆಂಟರ
ಕಾಲು, ಕೈ, ಹೃದಯ, ಕರುಳುಗಳನ್ನು
ಬೇಯಿಸಿಕೊಂಡು ತಿನ್ನುತ್ತಿದ್ದೇವೆ.
ಬೇಯಿಸಿದ್ದನ್ನು ತಿನ್ನುವಾಗ ಆಗುವ
ಸಂಭ್ರಮ ಹ್ಯಾಗಿರುತ್ತದೆಂದು ನನಗೆ
ತಿಳಿದೇ ಇರಲಿಲ್ಲ, ನೋಡಿ.

ಎಲ್ಲರೂ ಹೊಸ ರುಚಿ
ಮಾಡುವುದು ಹೇಗೆ ಎಂದು
ಕೇಳುತ್ತಾರೆ,
ಪತ್ರಿಕೆ, ಚಾನಲ್‌ನವರು
ಮಾಡುವ ವಿಧಾನವನ್ನಷ್ಟೇ
ಹೇಳುತ್ತಾರೆ.
ಆದರೆ ತಿನ್ನುವುದು ಹೇಗೆ?
ಈ ಸಲದ ನಮ್ಮ ಸ್ಪೆಷಲ್‌;
ನಾವು ಕಂಡುಕೊಂಡ ಆ ಹೊಸ ರುಚಿಯನ್ನು
ತಿನ್ನುವುದು ಹೇಗೆ?

ಬೆಳಿಗ್ಗೆಯಿಂದ ಸಂಜೆಯವರೆಗೆ
ಮನೆಗೆ ಫೋನು ಮಾಡಿ
ತಯಾರಾಗುತ್ತಿರುವ
ಹೊಸ ರುಚಿಯ ಬಗ್ಗೆ,
ನೆಂಟರಿಷ್ಟರ ಅವಯವಗಳು
ಖಾದ್ಯಗಳಾಗಿ ತಯಾರಾಗುತ್ತಿರುವ ಬಗ್ಗೆ
ವಿವರವಾಗಿ ತಿಳಿದುಕೊಳ್ಳಿ.
ಎಸ್ಸೆಮ್ಮೆಸ್‌ ಮೂಲಕ
ತಕ್ಷಣದ ಬೆಳವಣಿಗೆಯನ್ನು
ರವಾನಿಸಲು ಹೇಳುತ್ತಿರಿ.

ಆನಂತರ ಆಫೀಸಿನಿಂದ ಬನ್ನಿ,
ಕೈಕಾಲು ತೊಳೆದುಕೊಳ್ಳಿ,
ಬಟ್ಟೆ ಬದಲಿಸಿಕೊಳ್ಳಿ,
ಹೆಂಡತಿ ಕೊಟ್ಟ ಕಾಫಿ, ಸುದ್ದಿ, ಗಾಳಿಮಾತಿನೊಂದಿಗೆ
ಟೀವಿ ಆನ್‌ ಮಾಡಿ.
ಸತ್ತ ನಿಮ್ಮ ನೆಂಟರಿಷ್ಟರು
ಕ್ಯಾಮರಾ ಬೆಳಕಿನ ಬೆಂಕಿಯಲ್ಲಿ
ಬೇಯುತ್ತಿರುತ್ತಾರೆ,
ಹೊಗೆಯ ಮಧ್ಯೆ, ಆಸ್ಪತ್ರೆಯ ಪಿನಾಯಿಲ್‌ ಮಧ್ಯೆ
ಬೆಯ್ದ ಸಾದಿಷ್ಟ ಮಾಂಸದ ಸುತ್ತ
ಆಕ್ರಂದನಗಳ ಹಿನ್ನೆಲೆ ಸಂಗೀತ.
ಆಗಾಗ ನಿಮ್ಮನ್ನು ರಂಜಿಸಲು
`ಹೇಗೆ ಕೈ ಬೆಂದಿತು, ಏನನಿಸಿತು’ ಎಂಬ
ಕ್ವಶ್ಚನ್‌ ಅವರ್‌.

ನಿಮ್ಮ ಕಣ್ಗಳನ್ನು ಬಾಯಂತೆ
ತೆರೆದುಕೊಳ್ಳಿ.
ಬೆಯ್ದ ದೇಹವನ್ನು
ಕೈ, ಕಾಲು, ಹೊಟ್ಟೆ, ಮೂಗು, ಬಾಯಿ
ರಕ್ತದ ಕಲೆ, ಮಣ್ಣಲ್ಲಿ ಮಿಂದ ತಲೆಗೂದಲು
ಎಂದು ಬೇರ್ಪಡಿಸಿ
ಎವೆಯಿಕ್ಕದೇ ತಿನ್ನತೊಡಗಿರಿ,
ತಿಂದು ತಿಂದು ಅನುಭವ ಆಗಿಹೋಗಿರುವ
ಮೈಕ್‌ಮನ್‌ಗಳು, ಗನ್‌ಮನ್‌ಗಳು
ಖಾಕಿ, ಖಾದಿ, ಕೈದಿಗಳ
ಕಣ್ಣುಗಳ ಯಾಂತ್ರಿಕ ಚಪ್ಪರಿಕೆಯ
ಕಡೆಗೂ ಆಗಾಗ ನಿಮ್ಮ ಗಮನವಿರಲಿ.

ತಿನ್ನುತ್ತಾ ತಿನ್ನುತ್ತಾ
ಚಪ್ಪರಿಸುತ್ತಾ ಸವಿಯುತ್ತಾ ಹೋದಹಾಗೇ
ಮುಂದೊಮ್ಮೆ ನಿಮ್ಮ ಮುಂದೆ
ನಿಮ್ಮ ಹೆಂಡತಿ, ಮಕ್ಕಳ
ಕೈಕಾಲುಗಳು ಬೇಯುತ್ತಿದ್ದರೂ
ನಿಮ್ಮ ಬಾಯಲಿ ನೀರೂರುತ್ತದೆ.

ಟಿಪ್ಪಣಿಗಳು
  1. karthikparadkar ಹೇಳುತ್ತಾರೆ:

    ಇವತ್ತಿನ ಬೆತ್ತಲೆ ಜಗತ್ತಿನ ಎದುರು ಕನ್ನಡಿ ಹಿಡಿದಂತಿದೆ.. ಅತ್ಯುತ್ತಮ ಕವನ

  2. Pramod ಹೇಳುತ್ತಾರೆ:

    ಅರ್ಥಗರ್ಭಿತ ಕವನ…ತು೦ಬಾ ಚೆನ್ನಾಗಿದೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s