ಅರ್ಧಕ್ಕೇ ಎದ್ದು ಬಂದಿರಾ, ಕತೆಯ ಒಳಗಿಂದ?

Posted: ಮಾರ್ಚ್ 16, 2010 in vikas

ಕಳ್ಳ ಕುಳ್ಳ ಮತ್ತು ಈ ಬ್ಲಾಗರ್ ಗಳ ಕಳ್ಳುಬಳ್ಳಿ ಸಂಬಂಧ ಆಗಾಗ ತಪ್ಪುತ್ತದೆ, ಆಗಾಗ ಅಪ್ಪುತ್ತದೆ. ಅನೇಕ ಅಡೆತಡೆಗಳ ಮಧ್ಯೆಯೂ ಮತ್ತೆ ಬರೆಯುವ ಆಸೆ, ಉತ್ಸಾಹ, ಪ್ರೀತಿ ಕಾಡುತ್ತಲೇ ಇದೆ. ಸದ್ಯ ‘ಸುವರ್ಣ ನ್ಯೂಸ್’ ಚಾನೆಲ್ ನಲ್ಲಿ ಕೆಲಸದಲ್ಲಿರುವ ನಾವಿಬ್ಬರು, ಮತ್ತೆ ಏನಾದರೂ ಬರೆಯುವ ಆಸೆಯೊಂದಿಗೆ ಮರಳಿದ್ದೇವೆ. ಇತ್ತೀಚೆಗೆ ಕಾಡಿದ, ಕೆಣಕಿದ ಒಂದಿಷ್ಟು ಸಂಗತಿಗಳ ಬರೆವಣಿಗೆಯ ಫಲ, ಈ ಮೊದಲ ಪೋಸ್ಟ್. ಮುಂದೆ ನಿಮ್ಮ ಜೊತಂ ಕವಿತೆ, ಕತೆಗಳನ್ನೆಲ್ಲಾ ಹಂಚಿಕೊಳ್ಳಿಕ್ಕಿದೆ. ನಾವು ಮತ್ತೆ ಫೀಲ್ಡಿಗಿಳಿದಿದ್ದೇವೆ. ಇನ್ನು ನಿರಂತರ ಆಡುತ್ತೇವೆ. ರನ್, ರನ್ ಆಂಡ್ ರನ್ ಫಾರ್ ನಾಟ್ ಔಟ್!

1.

ಅಲ್ಲಿ ಇಡೀ ಗೋಕುಲವೇ ನೆರೆದಿದೆ. ಕೃಷ್ಣನ ಕೊಳಲನ್ನು ಆಲಿಸಿ ಮುಪ್ಪಿನ ಕೀಲುಗಳೂ, ದವಡೆಯ ಜೋಲುಗಳೂ ಉತ್ಸಾಹಗೊಂಡಿವೆ. ಮಗ್ಗುಲ ಹಸುಗೂಸ ಮರೆತ, ಪಕ್ಕದ ಗಂಡನ್ನ ತೊರೆದ ಗೋಪಿಕೆಯರೆಲ್ಲಾ ಕೃಷ್ಣನಿಗಾಗಿ ಹೊರಟು ಬಂದಿದ್ದಾರೆ. ಕೃಷ್ಣ ಮಥುರೆಗೆ ಹೋಗುವುದಕ್ಕೆ ಮುನ್ನ ಅವನನ್ನೊಮ್ಮೆ ಕಣ್ತುಂಬ ನೋಡತೊಡಗಿದ್ದಾರೆ. ಸಭೆಯ ಗೋಪಿಕೆಯರ ಮನಸ್ಸೂ ಆ ಕೃಷ್ಣನ ಪ್ರೀತಿಗೆ ಒಳಗೊಳಗೇ ಕೈಚಾಚುತ್ತದೆ, ಅವನ ಭಕ್ತಾನುಕಂಪೆಗೆ ಜೋಂಪಿನಂತೆ ಪ್ರತಿಕ್ರಿಯಿಸುತ್ತಿದೆ. ಆದರೆ ಆ ಗೋಕುಲದ,ಆ ಬೃಂದಾವನದ ಕೃಷ್ಣನನ್ನು ಕೂಡುವುದಕ್ಕೆ ಐಹಿಕವಾದ ಅಡ್ಡಿಗಳಿವೆ ಸಾಕಷ್ಟು. ಆ ಪಾರಮಾರ್ಥಿಕದ ಪ್ರೀತಿಗೆ ಸೋತು ಓಡಿಹೋಗುವುದಕ್ಕೆ ನಮ್ಮ ಪ್ರಾಪಂಚಿಕ ಅಡಚಣೆಗಳು ತಡೆಯುತ್ತಿವೆ. ಗೋಕುಲದ ಸುಖದಲ್ಲಿ ಮೈಮರೆತ ಅಂಥ ಜಗನ್ನಿಯಾಮಕ ಕೃಷ್ಣನನ್ನೇ ಮಧುರೆಯ ಬಿಲ್ಲಹಬ್ಬ ನೆಪವಾಗಿ ಕರೆಯಿತು, ನಮ್ಮ ಮನೆ, ಮಠ, ಮಗು, ಮೊಬೈಲು, ಸೀರಿಯಲ್ಲು ಇತ್ಯಾದಿ ಸಕಲ ಆಕರ್ಷಣೆಗಳು ಕೈ ಹಿಡಿದೆಳೆಯವೇ, ಚಕ್ಕಳಮಕ್ಕಳ ಕುಳಿತ ನಮ್ಮೀ ಆಸಕ್ತಿಯನ್ನು ವಿಚಲಿತಗೊಳಿಸವೇ?

ನಾವು ಹೊರಡುತ್ತೇವೆ, ಅರ್ಧಕ್ಕೇ. ತನ್ಮಯವಾಗಿ ಕೂತ ದೇಹಗಳ, ಏಕಾಗ್ರ ಮನಸ್ಸುಗಳ ಸಂದಣಿಯಿಂದ ಒಂದೊಂದೇ ದೇಹಗಳು, ಮನಸ್ಸುಗಳು, ಅರೆ ಮನಸ್ಸುಗಳು ಎದ್ದು ಹೋರಡುತ್ತವೆ. ಒಳ್ಳೆಯ ನಾಟಕ, ಒಳ್ಳೆಯ ಸಂಗೀತ ಕಚೇರಿ, ಒಳ್ಳೆಯ ಸಿನಿಮಾ, ಒಳ್ಳೆಯ ಯಕ್ಷಗಾನ, ಒಳ್ಳೆಯ ಸಭೆ, ಪುಸ್ತಕ ಬಿಡುಗಡೆ, ಉಪನ್ಯಾಸಗಳಿಂದ ಹೀಗೆ ಕಳಚಿಕೊಳ್ಳುವ ಕ್ರಿಯೆ, ದೇಹದಿಂದ ಪ್ರಾಣ ಕಳಚಿಕೊಂಡಷ್ಟೇ ದುಃಖಕರ, ವಿಷಾದಕರ. ಆದರೂ ನಾವು ಚಿಂತಿಸುತ್ತೇವೆ, ಅರ್ಧಕ್ಕೆ ಹೋಗುವುದು ಅವರವರ ಅರಸಿಕತೆಯ ದ್ಯೋತಕವೇ? ಮುಗಿದ ಮೇಲೆ ಹೋದರಾಗದೇ ಎಂದು ನಾವು ನೀವು ವಾದಿಸಿದರೆ ಮುಗಿಯುವ ಹೊತ್ತಿಗೆ ಆ ಜನಗಳಿಗೆ ಒಂದು ಮುಖ್ಯ ಕೆಲಸ ತಪ್ಪಬಹುದು. ಮನೆಗೆ ಹೋಗುವುದಕ್ಕೆ ಬಸ್ಸು, ಸರಿಯಾದ ಸಮಯಕ್ಕೆ ಹೋಗಬೇಕಾದಲ್ಲಿಗೆ ಹೋಗದಿದ್ದರೆ ಊಟ, ವಸತಿಗಳೆಲ್ಲಾ ತಪ್ಪಬಹುದು. ಇದೊಂದೇ ಕಾರಣಕ್ಕಾಗಿ ಅರಸಿಕತೆಯ ಪಟ್ಟ ಕಟ್ಟಬಾರದು, ಪಾಪ ಪಾಪ.

ಯಾಕೋ ಕಾಡುವುದಕ್ಕಾಗಿಯೇ ನಮಗೆ ಈ ಜಗತ್ತು ಒಂದಿಷ್ಟನ್ನ ಅರ್ಧವೇ ಉಳಿಸಿ ಹೋಗಿರುತ್ತದೆ. ಅರ್ಧಕ್ಕೇ ಹೊರಟು ಹೋಗುವುದರಲ್ಲಿ ಒಂದು ಕಲಾತ್ಮಕ ಅಪಚಾರ ಇದೆ. ನಾವು ನೋಡಿದಷ್ಟನ್ನೇ ಮನಸ್ಸಲ್ಲಿ ಮೆಲುಕು ಹಾಕುವುದಕ್ಕೆ ಪ್ರಾರಂಭ ಮಾಡುತ್ತೇವೆ. ನೋಡಿದ್ದಷ್ಟನ್ನೇ ಎಂದರೆ ಇನ್ನೂ ಇದೆ ಎಂದು ಗೊತ್ತಿರುವ, ಆದರೆ ಮುಂದೇನೆಂದು ಗೊತ್ತಿರದ ಸಂಗತಿಯನ್ನು. ಮನೆಗೆ ಹೋಗುವವರೆಗೂ ಆ ಒಂದು ಪ್ರಸಂಗ ನಮ್ಮ ಮನಸ್ಸಲ್ಲೇ ಕೊರೆಯತೊಡಗುತ್ತದೆ. ಯಾವುದೋ ಎಸ್ಸೆಮ್ಮೆಸ್ ಓದಿ ಮುಗಿದ ನಂತರವೂ, ಊಟ ಮಾಡಿದ ನಂತರವೂ, ಕಾರ್ಯಕ್ರಮದಿಂದ ತೆರಳಿ, ನಕ್ಕು, ಯಾವುದೋ ಸೀರಿಯಲ್ ನೋಡಿ, ಕಾಮಿಡಿ ದೃಶ್ಯಕ್ಕೆ ನಕ್ಕು ಮಲಗಿ, ನಿದ್ದೆ ತಿಳಿದು ಎದ್ದ ಮೇಲೂ ಆ ಕಾರ್ಯಕ್ರಮ ಮರು ಪ್ರಸಾರವಾಗುತ್ತಲೇ ಇರುತ್ತದೆ ಅನವರತ.

ಪ್ರತಿಯೊಬ್ಬರ ಬಾಲ್ಯದಲ್ಲೂ ಒಂದೊಂದು ಅರ್ಧವೇ ನೋಡಿದ ಕಲಾ ಪ್ರಕಾರಗಳಿವೆ. ಟೀವಿಯಲ್ಲಿ ಪ್ರಸಾರವಾಗುವ ಸಿನಿಮಾಗಳೆಲ್ಲಾ ಕರೆಂಟು ಕೈಕೊಟ್ಟ ಕಾರಣಕ್ಕಾಗಿ ಅರ್ಧ ಮಾತ್ರ ಗೊತ್ತಾಗಿದ್ದೆಷ್ಟೋ ಇವೆ. ಬಹಳ ಹಿಂದೆ ದೂರದರ್ಶನವೊಂದೇ ಮನರಂಜನೆಯ ಮಾಧ್ಯಮ ಆಗಿದ್ದಾಗ ದೂರದರ್ಶನದಲ್ಲೇ ಕರೆಂಟು ಹೋಗಿ, ಸಿನಿಮಾ ಪ್ರಸಾರವೇ ರದ್ದಾದ ಪ್ರಸಂಗಗಳಿವೆ. ನಿದ್ದೆಗಣ್ಣಲ್ಲೇ ಕಾಣುತ್ತಾ ಕುಳಿತ ಯಕ್ಷಗಾನ ಪ್ರಸಂಗದಿಂದ ಅಪ್ಪ ಬಲತ್ಕಾರದಿಂದ ಎಬ್ಬಿಸಿಕೊಂಡು ಬಂದು, ಹಾಸಿಗೆಗೆ ಹಾಕಿದ ಕಾರಣಕ್ಕಾಗಿ ಅಥವಾ ತನಗೇ ಗಾಢ ನಿದ್ದೆ ಹತ್ತಿ ಯಕ್ಷಗಾನ ಪ್ರಸಂಗವನ್ನು ಉಳಿದರ್ಧ ಮಿಸ್ ಮಾಡಿಕೊಂಡ ಹುಡುಗರು ಮಲೆನಾಡಿನಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದಾರೆ. ಸಂಗೀತ ಕಚೇರಿಗಳಲ್ಲಂತೂ ಎಷ್ಟು ಸಲ ಅರ್ಧ ಮಾತ್ರ ಕೂರುವುದಕ್ಕೆ ಸಾಧ್ಯವಾಗಿ, ಬಸ್ಸು ತಪ್ಪುವ ಕಾರಣಕ್ಕೆ, ತುಂಬ ಸಮಯ ಆಯಿತೆಂಬ ಸಬೂಬಿಗೆ ಅನ್ಯಾಯವಾಗಿ ಸಂಗೀತದ ಸವಿ ಅರ್ಧವೇ ಪ್ರಾಪ್ತವಾಗಿದೆ.

ಹಾಸ್ಟೆಲ್ ನಲ್ಲಿ ವಾಸ ಮಾಡುತ್ತಾ, ಕಾಲೇಜು ಪೂರೈಸಿದವರಿಗೆ ಹೀಗೆ ಅರ್ಧ ಮಾತ್ರ ನೋಡಲಿಕ್ಕೆ ಸಾಧ್ಯವಾದ ಕಾರ್ಯಕ್ರಮ, ಸಿನಿಮಾ, ಆರ್ಕೆಷ್ಟ್ರಾ, ನಾಟಕ, ಯಕ್ಷಗಾನಗಳು ಅದೆಷ್ಟೋ? ಇಂಥ ಸಮಯಕ್ಕೆ ಹಾಸ್ಟೇಲ್ ನಲ್ಲಿರಬೇಕೆಂಬ ಕಟ್ಟುನಿಟ್ಟಿನ ನಿಯಮ ಇದ್ದಾಗ, ನೋಡುತ್ತಿರುವ ಕಾರ್ಯಕ್ರಮ ಮುಗಿಯದೇ ಹೋದಾಗ ಸೀಟಿನಿಂದ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು, ಹಿಂದೆ ಹಿಂದೇ ನೋಡುತ್ತಾ, ನಿಂತು ಸ್ವಲ್ಪ ನೋಡುತ್ತಾ, ಆ ಕಾರ್ಯಕ್ರಮ ಕಣ್ಣ ಕೊನೆಗೆ ಕಾಣುವವರೆಗೂ ಆಸ್ವಾದಿಸುತ್ತಾ, ತನ್ನ ವಿಧಿಯನ್ನು ಹಳಿಯುತ್ತಾ ಹಾಸ್ಟೇಲ್ ಸೇರಿಕೊಂಡವರ ಸಂಖ್ಯೆ ಎಷ್ಟಿಲ್ಲ?

ಕ್ಷಣಕಾಲ ಕಣ್ಮುಚ್ಚಿ, ನೆನಪಿನ ಗಣಿಗೆ ಕಿವಿ ಹಚ್ಚಿ ಕೇಳಿಸಿಕೊಳ್ಳೋಣ, ಕಾಣಿಸಿಕೊಳ್ಳೋಣ.

ಅಲ್ಲಿ ಆ ಹಿಂದೆ ಸಂಪೂರ್ಣ ನೋಡಿ ಇವತ್ತು ಸಂಪೂರ್ಣ ಮರೆತ ಸಿನಿಮಾಗಳು ಎಷ್ಟೋ ಇವೆ. ಅವುಗಳೆಲ್ಲಾ ನಮ್ಮ ಪಾಲಿಗೆ ಆಗಲೇ ಸಂಪೂರ್ಣ ಮನರಂಜನೆ ಕೊಟ್ಟು, ಕೊಂಚ ಕೂಡ ಕುತೂಹಲವನ್ನು ಉಳಿಸದೇ ಅಳಿದಿವೆ. ಯಾವುದೋ ಸಿನಿಮಾವನ್ನು ಇವತ್ಯಾರೋ ನೆನಪಿಸಿದರೆ ಓಹೋ ನೋಡಿದ್ದೇನೆ ಎಂಬ ಉತ್ತರದ ಹೊರತಾಗಿ ಉಳಿದ ವಿವರಣೆಗಳು ನೆನಪಿಲ್ಲ. ನೆನಪಿದ್ದರೂ ಅದರ ಆರಂಭ ಮರೆತಿದೆ ಅಥವಾ ಕೊನೆ ನೆನಪಿಲ್ಲ. ಆದರೆ ನಿಮ್ಮ ಒಳಗೆ ಅರ್ಧವೇ ಉಳಿದ ಸಂಗತಿಗಳಿಗೆ ನಿಮ್ಮ ಭಾವಕೋಶದಲ್ಲಿ ಈಗಲೂ ಜಾಗ ಇದೆ. ಅದು ನಮ್ಮ ಅದೆಷ್ಟೋ ಕನಸಿನಂತೆ ಅಸ್ಪಷ್ಟ, ಬಣ್ಣಿಸದಸದಳ, ಏನೋ ಸರಿದಾಡಿದ, ಎದೆಯ ಒಳಗೆ ಮಿಸುಕಾಡಿದ ಚಿತ್ರ. ಯಾರೋ ಎಳೆದ ಆ ಗೆರೆಗೆ ಅಸ್ಪಷ್ಟ ಆಕಾರವಿದೆ, ಆದರೆ ಆ ಆಕಾರ ನೆನಪಿಲ್ಲ. ಅದಕ್ಕೆ ನೀವೇ ಬಣ್ಣ ತುಂಬಿದ್ದೀರಿ, ಆದರೆ ಅದ್ಯಾವ ಬಣ್ಣ ಎಂಬುದು ನೆನಪೇ ಆಗುತ್ತಿಲ್ಲ. ಆದರೆ ಯಾರದೋ ಗೆರೆಯೊಳಗೆ ತುಂಬಿಕೊಂಡ ನಿಮ್ಮದೇ ಬಣ್ಣ ಕೊಡುವ ಪುಳಕ ಬೇರೆ. ಅದೇ ಯಾರೋ ಬರೆದ ಚಿತ್ರಕ್ಕೆ ಯಾರದೋ ಸ್ಪಷ್ಟ ಆಕಾರ, ಯಾರದೋ ಸ್ಪಷ್ಟ ಬಣ್ಣ ಉಳಿಸಿಹೊಗುವ ನಿರಾಳತೆಗೆ ಸೌಂದರ್ಯವಿಲ್ಲ.

ಅದಕ್ಕೇ ಅರ್ಧವೇ ನೋಡಿದ ‘ಗಂಧದಗುಡಿ’ ಅನಂತರ ಸಂಪೂರ್ಣ ನೋಡಿದ ‘ಗಂಧದಗುಡಿ’ಗಿಂತ ಭಿನ್ನ, ಪೂರ್ಣಗೊಳ್ಳದ ಆ ಸಿನಿಮಾವೇ ಹೆಚ್ಚು ಆಪ್ತ. ಹಲವು ಪವರ್ ಕಟ್ ಗಳ ನಡುವೆ ತುಂಡು ತುಂಡಾಗಿ ನೋಡಿದ ‘ಶೋಲೆ’ಯೇ, ಇವತ್ತಿನವರೆಗೂ ನೋಡದ ಸಂಪೂರ್ಣ ಶೋಲೆ ಚಿತ್ರಕ್ಕಿಂತ ಕುತೂಹಲ. ವಾರ್ತಾ ಪ್ರಸಾರದ ನಂತರ ಕೇವಲ ಇಪ್ಪತ್ತು ನಿಮಿಷ ಮಾತ್ರ ನೋಡಲು ಸಾಧ್ಯವಾದ ‘ಬೆಂಗಳೂರ್ ಮೇಲ್’ ಸಿನಿಮಾ, ಅದರ ಪ್ರಾರಂಭ ಗೊತ್ತಿಲ್ಲದ ಕಾರಣಕ್ಕಾಗಿಯೇ ನಿಗೂಢ, ಪವಾಡ. ‘ಜೇಡರ ಬಲೆ’ಯಂತೆ ಸಂಭ್ರಮ, ‘ಹೊಸನೀರು’ನಂತೆ ವಿಭ್ರಮ. ಈ ಜಗತ್ತಿನ ಹಲವು ಸಂಗತಿಗಳು ಅರ್ಧವಷ್ಟೇ ಗೊತ್ತಾಗಿ ನಮ್ಮನ್ನು ಸಮಾಧಾನಗೊಳಿಸಿವೆ, ನಮ್ಮ ನಿದ್ದೆಗೆ ನೆಮ್ಮದಿಯ ನಿಟ್ಟುಸಿರನ್ನು ತಂದಿವೆ.

2.

ಇತ್ತೀಚೆಗೊಂದು ಬೆಳಿಗ್ಗೆ ಶಿರಸಿಯ ಹೆರಿಗೆ ಆಸ್ಪತ್ರೆಯೊಂದರಲ್ಲಿ ಒಂದು ಹೆರಿಗೆ ಕೇಸ್ ಚರ್ಚೆಗೊಳಗಾಗಿತ್ತು.

ಅದು ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರ ಹೆರಿಗೆ ಕತೆ. ಆಕೆಗೆ ಎರಡು ದಿನದ ಹಿಂದೆ ಹೆರಿಗೆ ಆಗಿದೆ. ನಾಲ್ಕಾರು ಬಾರಿ ಸ್ಕ್ಯಾನ್ ಮಾಡಿಸಿ, ಎಲ್ಲ ಸರಿ ಇದೆ ಎಂಬ ಡಾಕ್ಟರ್ ಅಭಯದ ಅಡಿಯಲ್ಲಿ ಆದ ಹೆರಿಗೆ. ಹುಟ್ಟಿದ್ದು ಮುದ್ದಾದ ಹೆಣ್ಣು ಮಗು. ಬೆಳ್ಳಗಿನ ಆ ಪುಟಾಣಿ ಪಾಪು ಹುಟ್ಟುತ್ತಲೇ ಹೆತ್ತವರನ್ನಷ್ಟೇ ಅಲ್ಲ ವೈದ್ಯರನ್ನೂ ದಂಗುಗೊಳಿಸಿತು. ಆ ಮಗುವಿಗೆ ಸೊಂಟದವರೆಗಿನ ಅವಯವಗಳೆಲ್ಲಾ ಸರಿ ಇವೆ. ಆದರೆ ಸೊಂಟದ ಕೆಳಗಿನ ಭಾಗಗಳೆಲ್ಲಾ ಒಂದಕ್ಕೊಂದು ಹಗ್ಗದಂತೆ ಗಂಟಿಕ್ಕಿಕೊಂಡಿವೆ. ಅಂದರೆ ಉಣ್ಣಬಹುದು, ಆದರೆ ವಿಸರ್ಜನೆಗೆ ಧ್ವಾರಗಳೇ ಇಲ್ಲ! ಇಂಥ ವಿಚಿತ್ರವಾದ, ವೈದ್ಯಕೀಯ ಲೋಕವೇ ಪವಾಡದಂತೆ ನೋಡುವ ಕೇಸ್, ಆ ಹೆತ್ತವರ ಪಾಲಿಗೆ ಮಾತ್ರ ನರಕಸದೃಶ.

ಮಗುವನ್ನು ತಾಯಿಗೆ ಗೊತ್ತಾಗದಂತೆ ಬೇರ್ಪಡಿಸಲಾಯಿತು. ಮಗುವನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿನ ವೈದ್ಯಕೀಯ ಅಭಿಪ್ರಾಯವೂ ಬೇರೆ ಆಗಿರಲಿಲ್ಲ. ಇದಕ್ಕೆ ಆಪರೇಷನ್ ಸಾಧ್ಯ ಇಲ್ಲವೆಂಬ ಮಾತು ಬಂತು. ಗಂಡುಮಗು ಆಗಿದ್ದರೆ ಏನಾದರೊಂದು ಮಾಡಿ, ಗಾಲಿ ಕುರ್ಚಿಯಲ್ಲೋ ಮತ್ತೊಂದರಲ್ಲೋ ಓಡಾಡುವಂತೆ ಮಾಡಬಹುದಾಗಿತ್ತು. ಆದರೆ ಇದು ಹೆಣ್ಣು ಮಗು. ಅದರ ಸೊಂಟದ ಕೆಳಗಿನ ನರ, ಅಂಗ ವ್ಯವಸ್ಥೆ ತುಂಬ ಕ್ಲಿಷ್ಟಕರ. ಮುಂದೆ ಅದು ತಾಯ್ತನವನ್ನು ಕಾಣಬೇಕಾಗಿರುವ ಕೂಸು. ಹಾಗಾಗಿ ಇದನ್ನೇನೂ ಮಾಡಲಾಗುವುದಿಲ್ಲ ಎಂದು ಹೇಳಿತು ವೈದ್ಯಸಮೂಹ.

ಮಗು ಮತ್ತೆ ಅದೇ ಸ್ಥಿತಿಯಲ್ಲಿ ಶಿರಸಿಗೆ ಬಂತು.

ಅಮ್ಮನ ಮಡಿಲಿನಲ್ಲಿರಲು ಸಾಧ್ಯ ಇರದ ಕಾರಣ ಇನ್ ಕ್ಯೂಬೇಡರ್ ನಲ್ಲಿ ಇರತೊಡಗಿತು. ದಿನಕ್ಕೊಮ್ಮೆ ಒಂದು ತೊಟ್ಟೋ, ಎರಡು ತೊಟ್ಟೋ ಹಾಲನ್ನು ಆ ಕೂಸಿಗೆ ಹೊಯ್ಯುವುದು. ಅದನ್ನು ಪೈಪ್ ಮೂಲಕ ಹೊರ ಹಾಕಿಸುವುದು.

ಇಂಥ ವೈದ್ಯಕೀಯ ಪ್ರಯತ್ನವನ್ನು ಇನ್ ಕ್ಯೂಬೇಟರ್ ಹೊರಗೆ ಹಲವು ಹೃದಯಗಳು ಮಮ್ಮಲ ಮರುಗುತ್ತಾ ವೀಕ್ಷಿಸಿದವು. ಅತ್ತವು, ಹೊರಳಾಡಿದವು, ಅಯ್ಯೋ ದೇವರೇ ಎಂದು ಹರಕೆ ಹೊತ್ತವು. ನೆಂಟರಿಷ್ಟರೆಲ್ಲಾ ಬಂದರು, ನಿಂದರು, ಸಮಾಧಾನಿಸಿ ತೆರಳಿದರು.

ಆ ಕೂಸನ್ನು ವೈದ್ಯಕೀಯ ನಿಗಾದಲ್ಲೇ ಇಡಬೇಕಾ? ತಾಯಿ ಜೊತೆ ಮನೆಗೆ ಕರೆದೊಯ್ಯಬೇಕಾ? ಗೊತ್ತಿಲ್ಲ, ಇದೀಗ ಆ ಮಗುವಿನ ಬಗ್ಗೆ ಏನೂ ತಿಳಿಯದು.

ನಿಜಕ್ಕೂ ಆಮೇಲೆ ಏನಾಯಿತೆಂಬ ವಿಷಯ ಗೊತ್ತೇ ಆಗಿಬಿಟ್ಟಿದ್ದರೆ ಅದಕ್ಕಿಂತ ನೋವು ಇನ್ನೊಂದಿಲ್ಲ. ಆದರೆ ಈ ಜಗತ್ತಿನ ಎಷ್ಟೋ ಸಂಗತಿಗಳಿಗೆ ಪೂರ್ಣ ಗೊತ್ತಾಗದೇ ಹೋಗುವ ಒಂದು ಮಾರ್ಗವಿದೆ. ಅದು ನಮ್ಮನ್ನು ಇನ್ನೂ ಸಮಾಧಾನದಲ್ಲಿಟ್ಟಿದೆ.

ಆ ಕೂಸು ಇನ್ ಕ್ಯೂಬೇಟರ್ ನಿಂದ ನೇರ ತಾಯಿಗೆ ಮನೆಗೇ ಹೋಗಿರಬಹುದು. ಆಕೆಯ ಗಂಡ ಡ್ರೈವರ್. ಅವನ ಸಂಬಳ, ಸಾಲ ಸಾಮರ್ಥ್ಯಗಳಿಂದಾಗಿ ಆ ಮಗುವನ್ನು ದೊಡ್ಡ ಡಾಕ್ಟರ್ ಬಳಿ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಾ ಇರಬಹುದು. ಎಂಥದ್ದಕ್ಕೂ ಟ್ರೀಟ್ ಮೆಂಟ್ ಗಳಿರುವ ಈ ಆಧುನಿಕ ಜಗತ್ತಿನಲ್ಲಿ ಆ ಶಿಶುವೊಂದರ ಜೀವ ಉಳಿವಿಗೆ ಮಾರ್ಗ ಇದ್ದೇ ಇರಬಹುದು, ಯಾವುದಾದರೂ ನುರಿತ ಡಾಕ್ಟರ್ ಒಬ್ಬರು ಆ ಮಗುವನ್ನು ತಮ್ಮ ಜವಾಬ್ದಾರಿಯಾಗಿ ತೆಗೆದುಕೊಂಡು ಅದನ್ನುಳಿಸಲು ಮುಂದೆ ಬಂದಿರಬಹುದು. ಪವಾಡದಂತೆ ಯಾವುದೋ ವೈದ್ಯಕೀಯ ಮಾರ್ಗ ಬಳಸಿ, ಆ ಮಗು ಎಲ್ಲಾ ಮಗುವಿನಂತೆ ಆಗಿರಬಹುದು. ಇಷ್ಟರಲ್ಲಿ ಎರಡು ತಿಂಗಳಷ್ಟು ದೊಡ್ಡದಾಗಿರಬಹುದಾದ ಮಗು ಅಮ್ಮನನ್ನು ನೋಡಿ ನಗಬಹುದು, ಎತ್ತಿಕೊಂಡವರ ಮಡಿಲಲ್ಲಿ ಉಚ್ಚೆ, ಹೇಲು ಮಾಡುತ್ತಾ ಮನೆಯವರ ಹೆಮ್ಮೆಯನ್ನು ಹೆಚ್ಚಿಸುತ್ತಿರಬಹುದು, ತಡರಾತ್ರಿ ಎದ್ದು ಅಳುತ್ತಾ, ಬೆಚ್ಚಿಬೀಳಿಸುತ್ತಾ, ಅಮ್ಮನೂ ಸೇರಿದಂತೆ ಮನೆಯವರ ನಿದ್ದೆಯನ್ನು ಹಿತವಾಗಿ ಹಾಳು ಮಾಡುತ್ತಿರಬಹುದು….

-ಆ ಮಗು ಉಳಿದರ್ಧ ನಮ್ಮೊಳಗೆ ಬೆಳೆಯುತ್ತಿರಲಿ.

ಟಿಪ್ಪಣಿಗಳು
  1. shreenidhids ಹೇಳುತ್ತಾರೆ:

    nice kanree. kaduvante maditu.

  2. ಶೆಟ್ಟರು (Shettaru) ಹೇಳುತ್ತಾರೆ:

    ಏನೋ ಮನಸಿನ ತಂತು ಮಿಟಿದಂತಾಗಿದೆ

  3. leela ಹೇಳುತ್ತಾರೆ:

    ವಿಕಾಸ್
    ನನ್ನ ಮೇಲಿನ ಇ-ಮೇಲ್‌ಗೆ ಸಂಪರ್ಕಿಸಿ. ೨೦೦೯ ಡಿಸೆಂಬರ್‌ನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಬಂದ ‘ಓ ಮೈ ಗಾಡ್… ದೇವ ಬಂದ… ನಮ್ಮ ಸ್ವಾಮಿ ಬಂದಾನಾ? ಬಗ್ಗೆ ಕೇಳುವುದಿತ್ತು. ಲೀಲಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s