ಅಮ್ಮಂದಿರ ದಿನ ಅಂತ ಮೊನ್ನೆ ವೆಬ್ ಸೈಟ್ ಒಂದರಲ್ಲಿ ಬಾಲಿವುಡ್ ನ ಅಮ್ಮಂದಿರ ಇನ್ನೂ ಮಸುಕದ ಗ್ಲಾಮರ್ ಬಗ್ಗೆ ಫೋಟೋ ಸಹಿತ ಒಂದು ಸಾಲಿನ ಬರೆಹ ಇತ್ತು. ಅಮ್ಮಂದಿರ ದಿನಕ್ಕೆ ಮಾಧ್ಯಮಗಳೆಲ್ಲಾ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡಲು ಸಿದ್ಧವಾಗುತ್ತಿವೆ.
ಈ ಭಾನುವಾರ ಎಲ್ಲಾ ವ್ಯಾಪಾರ ಮಳಿಗೆ, ಎಲ್ಲಾ ಹೊಟೇಲ್, ಎಲ್ಲಾ ಮಾಲ್ ಗಳು ಶುಭಾಶಯಗಳಿಂದ, ಸಂಭ್ರಮಗಳಿಂದ ತುಂಬುತ್ತವೆ, ಮನೆ ಮನೆಯಲಿ ದೀಪ ಉರಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿದ ಅಮ್ಮನೆಂಬ ಕೈಗಳಿಗೆ ಹೂಗೊಂಚಲಿನ ಶುಭಕಾಮನೆ. ಆದರೆ ಇಲ್ಲೊಂದೆರಡು ಫ್ಯಾಮಿಲಿಗಳಿಗೆ ಹ್ಯಾಗೆ ಅಮ್ಮಂದಿರ ದಿನದ ಶುಭಾಶಯ ಹೇಳೋದು ಅಂತ ಗೊತ್ತೇ ಆಗುತ್ತಿಲ್ಲ. ನಿಮಗೇನಾದರೂ ಹೇಳುವುದಕ್ಕೆ ಸಾಧ್ಯವಾದರೆ ಅದಕ್ಕೆ ನನ್ನ ಕಡೆಯಿಂದ ಒಂದು ಥ್ಯಾಂಕ್ಸ್ ಸಲ್ಲುತ್ತದೆ.
1.
ಜನವರಿ 08, 2007
ಅಂದು ಸೋಮವಾರ. ಅನುರಾಧಾ ಹೆಸರಿನ ಆ ಅಮ್ಮ ಎಂದಿನಂತೆ ಗಡಿಬಿಡಿಯಲ್ಲೇ ಎದ್ದಳು. ಗಂಡನನ್ನು ಆಫೀಸಿಗೆ ರೆಡಿ ಮಾಡಿದಳು. ಗಂಡ ರೆಡಿ ಆಗುತ್ತಿದ್ದ ಹಾಗೇ ಮಗನನ್ನು ಶಾಲೆಗೆ ರೆಡಿ ಮಾಡಬೇಕಿತ್ತು. ಅದೂ ಎಂದಿನಂತೆ ನಿರಾತಂಕವಾಗಿ ಸಾಗಿತು. ಅವನು ಶಾಲೆ ಮುಗಿಸಿ ಬೇಗನೆ ಬಂದರೆ ಅವನಿಗೆ ಏನಾದರೂ ಮಾಡಿಡಬೇಕು ಅಂತ ಅದನ್ನೂ ಮಾಡಿದಳು. ಗಂಡ ಬೈದಿರಬಹುದು, ತಿಂಡಿಗೆ ಉಪ್ಪು ಜಾಸ್ತಿ, ಕಾಫಿಗೆ ಸಕ್ಕರೆ ಕಮ್ಮಿ ಅನ್ನುವುದೆಲ್ಲಾ ಅದಕ್ಕೆ ಕಾರಣ ಇರಲೂಬಹುದು. ಆದರೆ ಮಗ ಮಾತ್ರ ಅಮ್ಮನ ಗಡಿಬಿಡಿಯನ್ನು ಪ್ರೀತಿ, ಅಭಿಮಾನ ಮತ್ತು ಕನಿಕರದಿಂದ ನೋಡಿರಬಹುದು.
ಗಂಡ, ಮಗನನ್ನು ಅವರವರ ಕೆಲಸಕ್ಕೆ ಕಳಿಸಿಕೊಟ್ಟು ತನ್ನ ಕೆಲಸಕ್ಕಾಗಿ ರೆಡಿ ಆದಳು. ಓಡುತ್ತೋಡುತ್ತಾ ಬ್ಯಾಂಕ್ ಮೆಟ್ಟಿಲೇರಿದಳು. ಕ್ಯಾಶ್ ವಿಡ್ರಾ ಮಾಡಿಕೊಂಡಳು. ಉಳಕೊಂಡಿರುವ ತ್ಯಾಗರಾಜ ನಗರಿಂದ ಅಲಸೂರಿಗೆ ಹೋಗಬೇಕಿತ್ತು. ಅಲ್ಲಿ ತಾನು ಮಾಡುತ್ತಿರುವ ಅರೆಕಾಲಿಕ ಎಲ್ಲೈಸಿ ಏಜೆಂಟ್ ಉದ್ಯೋಗದ ಕೆಲಸಗಳೆಲ್ಲಾ ಬಾಕಿ ಇದೆ. ಬ್ಯಾಂಕ್ ನಲ್ಲಿ ಸಿಕ್ಕ ಒಂದೆರಡು ಪರಿಚಿತ ಮುಖವನ್ನೂ ನಗು ಹೊರತುಪಡಿಸಿ ಉಳಿದ ಯಾವ ಮಾತುಗಳಲ್ಲೂ ಭೇಟಿ ಮಾಡುವುದಕ್ಕೆ ವೇಳೆ ಇರಲಿಲ್ಲ.
ಅಷ್ಟರಲ್ಲಿ ಮೊಪೆಡ್ ಏರಿ ಆಗಿತ್ತು. ಮೊಪೆಡ್ ಸಾಗುತ್ತಿತ್ತು. ಬಹುಶಃ ಯಾರದೋ ಪಾಲಿಸಿ ಮೆಚೂರ್ ಆಗಿದ್ದು, ಯಾರದೋ ಹೊಸ ಪಾಲಿಸಿಗಾಗಿ ಅರ್ಜಿ ತುಂಬಿಸುವ ಕೆಲಸಗಳೆಲ್ಲಾ ಅವಳ ತಲೆಯೊಳಗೆ ತುಂಬಿಕೊಂಡಿದ್ದಾಗ ಅವಳ ಮೊಪೆಡ್ ಎಂಜಿ ರಸ್ತೆಯ ಸಿಗ್ನಲ್ ಒಂದರ ಎದುರು ನಿಂತಿತ್ತು, ಮಣಿಪಾಲ್ ಸೆಂಟರ್ ಪಕ್ಕ ಹೊರಳಿ ಹೋದರೆ ಸಿಗದೇ ಇರುವುದಕ್ಕೆ ಅಲಸೂರು ಯಾವ ಮಹಾ ದೂರವೂ ಅಲ್ಲ.
…05, 04, 03, 02, 01, 00
ಸಿಗ್ನಲ್ ಬಿಟ್ಟಿತು. ನೇರ ಹೋಗುವುದಕ್ಕೆ ಅಂತ ಆಕೆ ಹೊರಟಳು. ಪಕ್ಕದಲ್ಲೇ ಒಂದು ಮಿಲಿಟರಿ ಟ್ರಕ್. ಅದು ಲೆಫ್ಟ್ ಟರ್ನ್ ತೆಗೆದುಕೊಂಡಿತು. ಲೆಫ್ಟ್ ತೆಗೆದುಕೊಳ್ಳುವಾಗ ಅದರ ಹಿಂಭಾಗ ಆಕೆಯ ಮೊಪೆಡ್ ನ ಹಿಂಭಾಗಕ್ಕೆ ತಗುಲಿತು.
ನೋಡುನೋಡುತ್ತಿದ್ದಂತೇ ಮಗನಿಗೆ ಮಾಡಿಟ್ಟಿರುವ ಅನ್ನ ಮಧ್ಯಾಹ್ನದ ಹೊತ್ತಿಗೆ ಬಿಸಿಯಾಗಿರುತ್ತದೋ, ತಣ್ಣಗಾಗಿ ಹೋಗಿರುತ್ತದೋ, ಕರೆಂಟ್ ಬಿಲ್ ಕಟ್ಟದಿದ್ದರೆ ಸಂಜೆ ಗಂಡನ ಹತ್ತಿರ ಬೇಸಿಕೊಳ್ಳಬೇಕಾಗುತ್ತದೋ ಏನೋ ಎಂದು ಆಲೋಚಿಸುತ್ತಿರಬಹುದಾದ ಆಕೆ ಆಯತಪ್ಪಿ ಬಿದ್ದಳು. ಬಿದ್ದಿದ್ದೇ ತಲೆಗೆ ಬಲವಾದ ಏಟು ಬಿತ್ತು. ಟಿಪಿಕಲ್ ಅಮ್ಮನ ಆಲೋಚನೆಯಲ್ಲೇ ಆಕೆ ಅಸುನೀಗಿದಳು.
ಯಾರೂ ಬ್ರೇಕಿಂಗ್ ನ್ಯೂಸ್ ಹೊಡೆಯಲಿಲ್ಲ, ಟೀವಿಯ ಸ್ಕ್ರೋಲ್ ನಲ್ಲಿ ಸುದ್ದಿ ಓಡಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಈ ಜಗತ್ತಿನ ಅಸಂಖ್ಯ ಅಮ್ಮಂದಿರಲ್ಲೊಬ್ಬಳು ಹೀಗೆ ತೀರಿಕೊಂಡಳು.
-ಎಷ್ಟೋ ಆಕ್ಸಿಡೆಂಟ್ ಸಾವುಗಳಂತೆ ಇದನ್ನೂ ಕಂಡ ಸರ್ಕಲ್ ಇನಿಸ್ಪೆಕ್ಟರ್ ಒಂದು ಗಂಟೆ ಕಾಲ ಅದನ್ನು ಸುತ್ತಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದ. ಆಮೇಲೆ ಅದು ಬೋರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಗೊಂಡಿತು. ಗಂಡನಿಗೆ ಸುದ್ದಿ ಹೋಯಿತು. ಶಾಲೆಯಿಂದ ಬಂದ ಮಗ ಅಮ್ಮ ಇನ್ನೇನು ಬರುತ್ತಾಳೆ, ಬಂದೇಬಿಟ್ಟಳು ಅಂತ ಕಾಯುತ್ತಿದ್ದ.
ಇಲ್ಲಿ ಗಂಡ ಶವಾಗಾರದ ಎದುರು ಹತಾಶನಾಗಿ ಕುಳಿತಿದ್ದ. ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ನಡುಗುತ್ತಾ ಹಲವು ದನಿಗಳು ಉತ್ತರ ಕೊಡುತ್ತಿದ್ದವು. ಕಣ್ಣು ಮಂಜಾಗಿ ಅಧಿಕಾರಿಗಳೆಲ್ಲಾ ಮಬ್ಬಾಗಿ ಗೋಚರಿಸುತ್ತಿದ್ದರು. ‘ಬಾಡಿ’ಯಿಂದ ತೆಗೆಯಲಾದ ಆಭರಣ, ವಾಚು, ವಸ್ತು, ವಗೈರೆಗಳನ್ನೊನ್ನೊಂದನ್ನೇ ತೋರಿಸುತ್ತಾ ಇದು ನಿಮ್ಮ ಹೆಂಡತಿಯದಾ ಎಂದು ಕೇಳುತ್ತಿದ್ದರು ಸಿಬ್ಬಂದಿಗಳು. ಕಾಗದದಲ್ಲಿ ಈ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಅಂತ ಡೀಟೇಲ್ ಆಗಿ ಬರೆದು ಸೈನ್ ಮಾಡಿ ಅಂತ ನಿರ್ಭಾವುಕವಾಗಿ ತಾಕೀತು ಮಾಡುತ್ತಿದ್ದರು. ಗಂಡನ ಕೈಯಷ್ಟೇ ಅಲ್ಲ, ಅಲ್ಲಿ ಸೇರಿದ ನೆಂಟರಿಷ್ಟರ ಕೈಗಳೂ ಏನನ್ನೂ ಬರೆಯಲಾಗದಷ್ಟು ನಡುಗುತ್ತಿದ್ದವು.
ಅತ್ತ ಅಮ್ಮ ಬರುವುದು ತಡವಾಗುತ್ತದೆ ಅಂತ ಸುಳ್ಳು ಹೇಳಿ, ಪಕ್ಕದ ಮನೆಯಲ್ಲಿ ಆ ಹುಡುಗನ್ನು ಬಿಡಲಾಯಿತು. ಇನ್ನೇನು ಬರುತ್ತಾಳೆ, ಬಂದೇ ಬಿಟ್ಟಳು ಅಂತ ನಂಬಿಸಲಾಗುತ್ತಿತ್ತು. ಅವನ ಆಟ ಮತ್ತು ಹುಡುಗಾಟಿಕೆಯ ಬುದ್ಧಿಯ ನಡುವೆ ಒಂದೇ ಕ್ಷಣದಲ್ಲಿ ಅಮ್ಮ ಇನ್ನಿಲ್ಲವಾದ ಸುದ್ದಿ ಅವನ ಕಲ್ಪನೆಯಲ್ಲಿ ಅನುಮಾನವಾಗಿಯೂ ಮೂಡುವುದಕ್ಕೆ ಸಾಧ್ಯವಿರಲಿಲ್ಲ.
ಕೊನೆಗೂ ಅಮ್ಮ ಬಂದಳು, ಹೆಣವಾಗಿ. ಪೋಸ್ಟ್ ಮಾರ್ಟಂ ಮುಗಿಸಿ ತಂದ ದೇಹ, ದೇಹದ ಆಕಾರ ಮಾತ್ರ ಕಣ್ಣಳೆತೆಗೆ ಸಿಗುವ ಬಿಳಿವಸ್ತ್ರದಲ್ಲಿ ಕಟ್ಟಿಕೊಟ್ಟ ಭಯಾನಕ ವಸ್ತು. ಆ ಏರಿಯಾದ ಕಿರಿದಾದ ಓಣಿಯಲ್ಲಿ ಅಂಬುಲೆನ್ಸ್ ಸದ್ದು, ಆಸ್ಪತ್ರೆಯ ಬಟ್ಟೆಯೊಳಗೆ ಹೆಣ ಇಳಿಸುತ್ತಿರುವ ಕರ್ತವ್ಯನಿರತ ಆಳುಗಳು. ಆಸ್ಪತ್ರೆಯಲ್ಲಿ ಅಮ್ಮನ ಕೈಗೆ ಆಗತಾನೇ ಹುಟ್ಟಿದ ಮಗನನ್ನು ಡಾಕ್ಟರ್ ಬಟ್ಟೆಯಲ್ಲಿ ಸುತ್ತಿ ಹೀಗೇ ಕೊಟ್ಟಿದ್ದರೇನೋ, ಈಗ ಮಗನ ಎದುರು ಹಾಗೇ ಬಟ್ಟೆಯಲ್ಲಿ ಸುತ್ತಿಕೊಟ್ಟ ಅಮ್ಮನ ದೇಹ.
ಆದರೆ ಒಂದೇ ವ್ಯತ್ಯಾಸವೆಂದರೆ ಆ ಬಟ್ಟೆಯೊಳಗಿನ ಜೀವ ಇನ್ನು ಯಾವತ್ತೂ ಮಿಸುಕಾಡುವುದಿಲ್ಲ, ಬೆಳೆಯುವುದಿಲ್ಲ, ನಗುವುದಿಲ್ಲ, ಅಳುವುದಿಲ್ಲ, ಮುದ್ದಿಸುವುದಿಲ್ಲ, ಮಾತಾಡುವುದಿಲ್ಲ. ಆ ದಿನ ಅಮ್ಮನ ಹೆಣ ಕಂಡು ಅಳುವುದಕ್ಕೂ ಸಾಧ್ಯವಾಗದೇ, ಅಳದೇ ಇರುವುದಕ್ಕೂ ಸಾಧ್ಯವಾಗದೇ ಮನಸ್ಸೊಳಗೇ ನೊಂದ, ಈಗಲೂ ಮನಸ್ಸೊಳಗೇ ಕೊರಗು ಉಳಿದೇ ಬಿಟ್ಟಿದೆ ಎಂದು ಅನುಮಾನ ಬರುವಷ್ಟು ಮೌನಿಯಾಗಿ ಕಾಣುವ ಆ ಹುಡುಗ ಈಗ ಎರಡನೇ ವರ್ಷದ ಪಿಯುಸಿ ವಿದ್ಯಾರ್ಥಿ. ಅವನಿಗೆ ಅಪ್ಪನೇ ಅಮ್ಮ, ಅಪ್ಪನಿಗೆ ಮಗನೇ ಅಮ್ಮ.
ಮೂರು ವರ್ಷಗಳ ಹಿಂದೆ ತೀರಿಕೊಂಡ ಆ ಅಮ್ಮ ನನ್ನತ್ತೆ. ನನ್ನಮ್ಮನ ತಮ್ಮನ ಹೆಂಡತಿ.
**
2.
ಮೇ 06, 2010
ಅವತ್ತು ಗುರುವಾರ. ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ನೇಗಿಲೋಣಿ ಎಂಬ ಊರಲ್ಲೂ ಆ ದಿನ ಬೆಳಗಾಯಿತು. ಎಲ್ಲಾ ಕೃಷಿ ಕುಟುಂಬಗಳ ದಿನಚರಿಯಂತೆ ಶ್ರೀಮತಿ ಎಂಬ ಆ ಅಮ್ಮ ಕಾಫಿ ಕೊಟ್ಟಳು, ತಿಂಡಿ ರೆಡಿ ಆಗಿದೆ ಬನ್ನಿ ಅಂತ ಮಗನನ್ನೂ, ಗಂಡನ್ನೂ ಕೂಗಿದಳು. ಹಸು ಕರೆದಳು, ಮನೆಚಾಕರಿ ಮುಗಿಸುತ್ತಿದ್ದಳು.
ಇಪ್ಪತ್ಮೂರೋ ಇಪ್ಪತ್ನಾಲ್ಕೋ ವರ್ಷದ ಮಗ ಆದರ್ಶ ಪೇಟೆಗೆ ಹೊರಟ. ಅವನ ತಮ್ಮ ಬೆಂಗಳೂರಲ್ಲಿ ಇದ್ದಾನೆ. ಅವನಿಗೆ ಏನನ್ನೋ ಕೊರಿಯರ್ ಮಾಡಲಾಗಿದೆ. ಆದರೆ ಒಂದು ವಾರ ಆಗುತ್ತಾ ಬಂದರೂ ಇನ್ನೂ ಅದು ಸಿಕ್ಕಿಲ್ಲ. ಹೊಸನಗರಕ್ಕೆ ಹೋಗಿ ವಿಚಾರಿಸಿಕೊಂಡು ಬರುವುದಕ್ಕೆ ಆದರ್ಶ ಬೈಕ್ ಏರಿದ.
ಕೈಲಿ ದುಡ್ಡಿಲ್ಲ, ಬೈಕ್ ನಲ್ಲಿ ಪೆಟ್ರೋಲ್ ಇಲ್ಲ ಎಂಬ ಸಂಕಟದಲ್ಲೇ ಹೊರಟಿತ್ತು ಅವನು ಬೈಕ್. ಅಲ್ಲಿಂದ ಹದಿಮೂರು ಕಿ.ಮೀ. ಹೋಗುವ ಹೊತ್ತಿಗೆ ಅಲ್ಲಿ ಆ ಊರಿನವರ್ಯಾರೋ ಸಿಕ್ಕರು, ಹರಟೆ ಹೊಡೆದ. ಇಲ್ಲದ ದುಡ್ಡು, ಖಾಲಿಯಾಗುತ್ತಿರುವ ಪೆಟ್ರೋಲ್ ಬಗ್ಗೆ ಹೇಳಿಕೊಂಡ. ಕಂಡ ಗುರುತಿನವರ ಕಡೆ ಬಹುಶಃ ನಗು ಬೀರಿದ, ಕೈ ಬೀರಿದ.
ಚಿಕ್ಕೋಡಿ ಅನ್ನುವ ಗ್ರಾಮದ ಹತ್ತಿರ ಹೋಗುವಾಗಲೋ ಏನೋ ಇರಬೇಕು. ಎದುರಿನಿಂದ ಬಲಾಢ್ಯ ವಾಹನವೇನೋ ಬಂದಿದೆ, ತಿರುವಿನಲ್ಲಿ ಇದ್ದವನಿಗೆ ಆ ವಾಹನದ ಬರುವಿಕೆ ಗೊತ್ತಾಗಲಿಲ್ಲವೋ, ಕಿರಿದಾದ ದಾರಿಯಲ್ಲಿ ಎದುರು ಹಠಾತ್ ಭಾರೀ ವಾಹನವೊಂದು ಬಂದರೆ ಕಂಗಾಲಾಗುವ ಸವಾರನಂತಾದನೋ- ಗೊತ್ತಿಲ್ಲ. ವಾಹನ ಬೈಕ್ ಸವಾರನನ್ನು ಉರುಳಿಸಿ ಹೋಯಿತು.
ಹೆಲ್ಮೆಟ್ ಇಲ್ಲದ ತಲೆಯಿಂದ ತೀವ್ರ ರಕ್ತಸ್ರಾವ. ಅಮ್ಮ ಮೀಸಿ, ಎಣ್ಣೆ ಹಚ್ಚಿ, ಪುಟ್ಟ ಮಗುವಿನ ಯಾವ ತಲೆಯ ಪರಿಮಳವನ್ನ ಆಘ್ರಾಣಿಸಿದ್ದಳೋ, ಯಾವ ನೆತ್ತಿ, ಹಣೆ, ಗದ್ದ, ಗಲ್ಲಕ್ಕೆ ಅದೆಷ್ಟು ತುಟಿಗಳು ಚಿಕ್ಕಂದಿನಲ್ಲಿ ಮುತ್ತಿಟ್ಟಿದ್ದವೋ, ಆ ಭಾಗಗಳು ರಕ್ತಸಿಕ್ತವಾಗಿತ್ತು. ಸಂಜೆಯಾಗುತ್ತಿದ್ದ ಹಾಗೇ ಈ ಹುಡುಗನ ಪ್ರಾಣ ಪಕ್ಷಿಯೂ ಗೂಡು ಸೇರಿಕೊಳ್ಳುವ ತವಕದಲ್ಲಿ ಏದುಸಿರು ಬಿಡುತ್ತಿತ್ತು.
ಯಾರೋ ಅವನನ್ನ ಆ ಕೂಡಲೇ ಕಂಡು ಆಸ್ಪತ್ರೆಗೆ ಒಯ್ದರು. ಅಲ್ಲಿಂದ ಕೆಲವೇ ಕಿ.ಮೀ. ಕ್ರಮಿಸಿದರೆ ಹೊಸನಗರ. ಆದರೆ ಅಲ್ಲಿಗೆ ಹೋಗುವ ಹೊತ್ತಿಗೆ, ವ್ಯಕ್ತಿಯನ್ನು ವೈದ್ಯರು ಕಂಡವರೇ ಇಲ್ಲಿ ಸಾಧ್ಯವೇ ಇಲ್ಲ ಅಂದರು. ಈ ಕೂಡಲೇ ಶಿವಮೊಗ್ಗಕ್ಕೆ ಕರೆದೊಯ್ದರೆ ಏನಾದರೂ ಬದುಕಬಹುದು ಎಂದರು. ಆದರೆ ತೀವ್ರತರದ ರಕ್ತಸ್ರಾವದಿಂದಾಗಿ ಆಗಲೇ ದೇಹಕ್ಕೆ ಪ್ರಾಣವನ್ನು ಇರಿಸಿಕೊಳ್ಳುವ ಶಕ್ತಿ ಕುಂದಿತ್ತು. ಬಾಯಿಯಿಂದ ವಿಚಿತ್ರ ಸ್ವರ ಹೊರಡಿಸುತ್ತಲೇ, ನೆಲದ ಕಡೆಗಿನ ಸೆಳೆಯವನ್ನು ಕಣ್ಣಲ್ಲೇ ತೋರುತ್ತಲೇ ಆತನ ಪ್ರಾಣ ಪಕ್ಷಿ ಹಾರಿ ಹೋಯಿತು.
ಇತ್ತ ನೇಗಿಲೋಣಿಯ ಮನೆಯಲ್ಲಿ ಇದ್ಯಾವುದರ ಅರಿವೇ, ಪರಿವೇ ಇಲ್ಲದ ಅಮ್ಮನ ಮನೆಯ ಗೂಡಿನಿಂದ ಹಕ್ಕಿಯಂದು ಆಗಷ್ಟೇ ಗೊತ್ತಾಗದಂತೆ ಹಾರಿಹೋಗಿತ್ತು.
ಆಕೆಗೆ ಮಗನಿಗೆ ಆಕ್ಸಿಡೆಂಟ್ ಆದ ಸುದ್ದಿ ಬಂದಿತ್ತು. ಆದರೆ ಸಣ್ಣಪುಟ್ಟ ಗಾಯಗಳಾಗಿರಬಹುದೆಂಬ ಸುದ್ದಿ ಮಾತ್ರ. ಅವನ ಸಾವಿನ ಸುದ್ದಿ ಆ ಊರಿನ ಯಾರ್ಯಾರ ಮನೆಗೆ ತಲುಪಿತೋ ಅವರೆಲ್ಲಾ ಈಕೆಗೆ ಫೋನ್ ಮೂಲಕ ಸಂಪರ್ಕಿಸುವುದಕ್ಕೆ ನೋಡಿದರು. ಆದರೆ ಆಕೆ ಸಣ್ಣ ಆಕ್ಸಿಡೆಂಟ್ ಎಂದು ಆಗಲೇ ತನ್ನನ್ನು ತಾನು ನಿಸ್ಸಂಶಯವಾಗಿ ನಂಬಿಸಿಕೊಂಡಿದ್ದಳು.
ಆದರೆ ಸಂಜೆಯಾದರೂ ಮನೆಗೆ ಯಾವ ವರ್ತಮಾನಗಳೂ ಬರಲಿಲ್ಲ, ನೋಡಿಕೊಂಡು ಬರುವುದಾಗಿ ಹೋದ ಗಂಡನೂ ಬರಲಿಲ್ಲ. ತಾಯಿಯ ಅನುಮಾನಗಳು ಯಾಕೋ ಬಲವಾದವು. ಕೊನೆಗೆ ಆತಂಕದ, ಪ್ರಾರ್ಥನೆಯ, ಅಲ್ಪಸ್ವಲ್ಪ ಭರವಸೆಗಳ ನಡುವೆ ಮಗನ ಸಾವಿನ ಸುದ್ದಿ ಬಂತು. ಅದರ ಹಿಂದೆ ಹೆಣ ಬಂತು.
ಯಾವುದೇ ಚಾನಲ್ ನ ಸಣ್ಣ ಸುದ್ದಿಯಾಗಿ, ಯಾವುದೇ ಪತ್ರಿಕೆಯ ಸಿಂಗಲ್ ಕಾಲಂ ನ್ಯೂಸ್ ಆಗಿ ಅದು ಪ್ರಚಾರ ಪಡೆಯಲಿಲ್ಲ. ಊರಿಗೆ ಊರೇ ಸೂತಕದಲ್ಲಿ ಹೆಣ ನೋಡಿತು, ಮನೆಗೆ ಮಗ ಬಂದೊಡನೇ ಅಮ್ಮನ ದುಃಖದ ಕಟ್ಟೆಯೊಡೆಯಿತು, ಬಿಕ್ಕಿದಳೋ, ಮೂರ್ಛೆ ತಪ್ಪಿದಳೋ, ಅತ್ತಳೋ, ಸೂರು ಹಾರುವಂತೆ ಅರಚಿದಳೋ, ಹುಚ್ಚಿಯಾದಳೋ? ಪಂಚನಾಮ ಕ್ರಿಯೆಗಳೆಲ್ಲಾ ಮುಗಿದು ಬೆಳಿಗ್ಗೆ ಹನ್ನೊಂದಕ್ಕೆಲ್ಲಾ ಬರಬೇಕಾಗಿದ್ದ ಬಾಡಿ ಮಧ್ಯಾಹ್ನ ಹನ್ನೆರಡೂವರೆಗೆ ಬಂತು. ನಾಲ್ಕರೊಳಗೆ ಕ್ರಿಯೆಗಳೆಲ್ಲಾ ಮುಗಿದವು.
ಮಗನ ಸಾವಿನಿಂದಿನ್ನೂ ಚೇತರಿಸಿಕೊಳ್ಳದ, ಅಥವಾ ಯಾವತ್ತೂ ಚೇತರಿಸಿಕೊಳ್ಳಲಾರದ ಆಕೆ ನನ್ನ ಚಿಕ್ಕಮ್ಮ.
**
ಭಾನುವಾರ ಅಮ್ಮಂದಿರ ದಿನ. ಮೆಸೇಜ್ ಗಳು ಮೊಬೈಲ್ ನಿಂದ ಮೊಬೈಲ್ ಗೆ ಹ್ಯಾಪಿ ಮದರ್ಸ್ ಡೇ ಎನ್ನುತ್ತಾ ರವಾನೆಯಾಗುತ್ತವೆ. ನಿರೂಪಕರ ಕಂಠಗಳು ಅಮ್ಮಂದಿರ ಗುಣಗಾನದಲ್ಲಿ ಮೈಮರೆಯುತ್ತವೆ. ಬಾಯಿಂದ ಬಾಯಿಗೆ ಅಮ್ಮನಿಗೆ ಶುಭಾಶಯ ಸಲ್ಲಬಹುದು.
ಆದರೆ ಯಾರಿಗಾದರೂ ಇಂಥ ಅದೆಷ್ಟೋ ಕುಟುಂಬಗಳಿಗೆ ಶುಭ ಸಡಗರಗಳನ್ನು ತಲುಪಿಸುವುದಕ್ಕೆ ಸಾಧ್ಯವಿದೆಯೇ?
ನೇಗಿಲೋಣಿಯವರೇ, ಎರಡೂ ಪ್ರತ್ಯೇಕ ಘಟನೆಗಳನ್ನು ಓದಿ ಮಮ್ಮಲ ಮರುಗಿತು. ಬೇರೆ ಏನನ್ನು ಬರೆದರೂ ಅದು ಎ೦ದಿನ ಸ೦ತಾಪ ಸೂಚಕವಾಗುತ್ತದೆ. ಅಗಲಿದ ಎರಡೂ ಆತ್ಮಗಳಿಗೆ ಶಾ೦ತಿ ಸಿಗಲೆ೦ಬುದಷ್ಟೇ ನನ್ನ ಹಾರೈಕೆ ಹಾಗೂ ಪ್ರಾರ್ಥನೆ.
ನಮಸ್ಕಾರಗಳು.
so sad.
suddi keli nondu kondidde.