Archive for the ‘Uncategorized’ Category

ಅಮ್ಮನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಅಮ್ಮಂದಿರ ದಿನ ಅಂತ ಮೊನ್ನೆ ವೆಬ್ ಸೈಟ್ ಒಂದರಲ್ಲಿ ಬಾಲಿವುಡ್ ನ ಅಮ್ಮಂದಿರ ಇನ್ನೂ ಮಸುಕದ ಗ್ಲಾಮರ್ ಬಗ್ಗೆ ಫೋಟೋ ಸಹಿತ ಒಂದು ಸಾಲಿನ ಬರೆಹ ಇತ್ತು. ಅಮ್ಮಂದಿರ ದಿನಕ್ಕೆ ಮಾಧ್ಯಮಗಳೆಲ್ಲಾ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡಲು ಸಿದ್ಧವಾಗುತ್ತಿವೆ.

ಈ ಭಾನುವಾರ ಎಲ್ಲಾ ವ್ಯಾಪಾರ ಮಳಿಗೆ, ಎಲ್ಲಾ ಹೊಟೇಲ್, ಎಲ್ಲಾ ಮಾಲ್ ಗಳು ಶುಭಾಶಯಗಳಿಂದ, ಸಂಭ್ರಮಗಳಿಂದ ತುಂಬುತ್ತವೆ, ಮನೆ ಮನೆಯಲಿ ದೀಪ ಉರಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿದ ಅಮ್ಮನೆಂಬ ಕೈಗಳಿಗೆ ಹೂಗೊಂಚಲಿನ ಶುಭಕಾಮನೆ. ಆದರೆ ಇಲ್ಲೊಂದೆರಡು ಫ್ಯಾಮಿಲಿಗಳಿಗೆ ಹ್ಯಾಗೆ ಅಮ್ಮಂದಿರ ದಿನದ ಶುಭಾಶಯ ಹೇಳೋದು ಅಂತ ಗೊತ್ತೇ ಆಗುತ್ತಿಲ್ಲ. ನಿಮಗೇನಾದರೂ ಹೇಳುವುದಕ್ಕೆ ಸಾಧ್ಯವಾದರೆ ಅದಕ್ಕೆ ನನ್ನ ಕಡೆಯಿಂದ ಒಂದು ಥ್ಯಾಂಕ್ಸ್ ಸಲ್ಲುತ್ತದೆ.

1.

ಜನವರಿ 08, 2007

ಅಂದು ಸೋಮವಾರ. ಅನುರಾಧಾ ಹೆಸರಿನ ಆ ಅಮ್ಮ ಎಂದಿನಂತೆ ಗಡಿಬಿಡಿಯಲ್ಲೇ ಎದ್ದಳು. ಗಂಡನನ್ನು ಆಫೀಸಿಗೆ ರೆಡಿ ಮಾಡಿದಳು. ಗಂಡ ರೆಡಿ ಆಗುತ್ತಿದ್ದ ಹಾಗೇ ಮಗನನ್ನು ಶಾಲೆಗೆ ರೆಡಿ ಮಾಡಬೇಕಿತ್ತು. ಅದೂ ಎಂದಿನಂತೆ ನಿರಾತಂಕವಾಗಿ ಸಾಗಿತು. ಅವನು ಶಾಲೆ ಮುಗಿಸಿ ಬೇಗನೆ ಬಂದರೆ ಅವನಿಗೆ ಏನಾದರೂ ಮಾಡಿಡಬೇಕು ಅಂತ ಅದನ್ನೂ ಮಾಡಿದಳು. ಗಂಡ ಬೈದಿರಬಹುದು, ತಿಂಡಿಗೆ ಉಪ್ಪು ಜಾಸ್ತಿ, ಕಾಫಿಗೆ ಸಕ್ಕರೆ ಕಮ್ಮಿ ಅನ್ನುವುದೆಲ್ಲಾ ಅದಕ್ಕೆ ಕಾರಣ ಇರಲೂಬಹುದು. ಆದರೆ ಮಗ ಮಾತ್ರ ಅಮ್ಮನ ಗಡಿಬಿಡಿಯನ್ನು ಪ್ರೀತಿ, ಅಭಿಮಾನ ಮತ್ತು ಕನಿಕರದಿಂದ ನೋಡಿರಬಹುದು.

ಅನುರಾಧಾ ಶರ್ಮ

ಗಂಡ, ಮಗನನ್ನು ಅವರವರ ಕೆಲಸಕ್ಕೆ ಕಳಿಸಿಕೊಟ್ಟು ತನ್ನ ಕೆಲಸಕ್ಕಾಗಿ ರೆಡಿ ಆದಳು. ಓಡುತ್ತೋಡುತ್ತಾ ಬ್ಯಾಂಕ್ ಮೆಟ್ಟಿಲೇರಿದಳು. ಕ್ಯಾಶ್ ವಿಡ್ರಾ ಮಾಡಿಕೊಂಡಳು. ಉಳಕೊಂಡಿರುವ ತ್ಯಾಗರಾಜ ನಗರಿಂದ ಅಲಸೂರಿಗೆ ಹೋಗಬೇಕಿತ್ತು. ಅಲ್ಲಿ ತಾನು ಮಾಡುತ್ತಿರುವ ಅರೆಕಾಲಿಕ ಎಲ್ಲೈಸಿ ಏಜೆಂಟ್ ಉದ್ಯೋಗದ ಕೆಲಸಗಳೆಲ್ಲಾ ಬಾಕಿ ಇದೆ. ಬ್ಯಾಂಕ್ ನಲ್ಲಿ ಸಿಕ್ಕ ಒಂದೆರಡು ಪರಿಚಿತ ಮುಖವನ್ನೂ ನಗು ಹೊರತುಪಡಿಸಿ ಉಳಿದ ಯಾವ ಮಾತುಗಳಲ್ಲೂ ಭೇಟಿ ಮಾಡುವುದಕ್ಕೆ ವೇಳೆ ಇರಲಿಲ್ಲ.

ಅಷ್ಟರಲ್ಲಿ ಮೊಪೆಡ್ ಏರಿ ಆಗಿತ್ತು. ಮೊಪೆಡ್ ಸಾಗುತ್ತಿತ್ತು. ಬಹುಶಃ ಯಾರದೋ ಪಾಲಿಸಿ ಮೆಚೂರ್ ಆಗಿದ್ದು, ಯಾರದೋ ಹೊಸ ಪಾಲಿಸಿಗಾಗಿ ಅರ್ಜಿ ತುಂಬಿಸುವ ಕೆಲಸಗಳೆಲ್ಲಾ ಅವಳ ತಲೆಯೊಳಗೆ ತುಂಬಿಕೊಂಡಿದ್ದಾಗ ಅವಳ ಮೊಪೆಡ್ ಎಂಜಿ ರಸ್ತೆಯ ಸಿಗ್ನಲ್ ಒಂದರ ಎದುರು ನಿಂತಿತ್ತು, ಮಣಿಪಾಲ್ ಸೆಂಟರ್ ಪಕ್ಕ ಹೊರಳಿ ಹೋದರೆ ಸಿಗದೇ ಇರುವುದಕ್ಕೆ ಅಲಸೂರು ಯಾವ ಮಹಾ ದೂರವೂ ಅಲ್ಲ.

…05, 04, 03, 02, 01, 00

(ಹೆಚ್ಚು…)

ಚಿತ್ರಕೃಪೆ: ಹಿಂದೂ

ಕಾಲೇಜು ಓದುತ್ತಿದ್ದ ಕಾಲ. ಅಶ್ವತ್ಥ್ ಅವರ ಸಂಗೀತದಲ್ಲಿರುವ ಹುರುಳನ್ನು ತಿಳಿಯದ, ಅದರ ಔಚಿತ್ಯ ಗೊತ್ತಿಲ್ಲದ ನಾನು ಸೇರಿದಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಾವೊಂದು ಎಂಟು ಮಂದಿ ಉಜಿರೆಯಿಂದ ಮಂಗಳೂರಿಗೆ ಹೋದೆವು.

ಅದು ಮುಂದೆ 2000 ಎಂಬ ಸಹಸ್ರಮಾನವನ್ನು ಆಹ್ವಾನಿಸಲು ಅಶ್ವತ್ಥ್ ಸಿದ್ಧಪಡಿಸಿದ್ದ ಒಂದು ಕಾರ್ಯಕ್ರಮ. ಅದರ ಪ್ರಕಾರ 1999ರ ಡಿಸೆಂಬರ್ 31ಕ್ಕೆ ರಾತ್ರಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಒಂದು ಸಾವಿರ ಮಂದಿ ಹಾಡಬೇಕು. ಅದಕ್ಕೆ ಹೆಸರು: ‘ಹೊಸ ಸಹಸ್ರಮಾನಕ್ಕೆ ಸಪಸ್ರ ಕಂಠದ ಗಾಯನ’. ಅದಕ್ಕಾಗಿ ಕರ್ನಾಟಕದ ಬೇರೆ ಬೇರೆ ಕಡೆ ಪೂರ್ವಭಾವಿ ತರಬೇತಿ. ಅದರಲ್ಲಿ ನಾನು ನನ್ನ ತಮ್ಮ ಹೋಗಿದ್ದೆವು.

ಒಂದು ದಿನವಿಡೀ ಅಶ್ವತ್ಥ್ ಅವರಿಂದ ತರಬೇತಿ ಪಡೆದುಕೊಳ್ಳುವ ಒಂದು ಅಪೂರ್ವ ಅವಕಾಶ ನಮಗಿತ್ತು. ಆದರೆ ಆ ಕಾಲಕ್ಕೆ ಅವರೊಬ್ಬ ಅಷ್ಟು ಮಹಾನ್ ಗಾಯಕ ಎಂಬ ಅಂಥ ದೊಡ್ಡ ಕಲ್ಪನೆ ನನ್ನ ಹುಡುಗುಬುದ್ಧಿಗೆ ಹೊಳೆದಿರಲಿಲ್ಲವೇನೋ?

ಆದರೂ ಅವರಿಂದ ಕಲಿತ ಹಾಡುಗಳು ಈಗಲೂ ಒಂದೊಂದೂ ಸ್ಮರಣೀಯ. ಕುವೆಂಪು ಅವರ ಕ್ರಾಂತಿ ಗೀತೆಗಳ ಅರಿವು, ಅದರ ಸ್ವಾದ, ಸಂಗೀತದ ಜೊತೆ ಅದನ್ನು ಉಣಬಡಿಸಿದ ರೀತಿ, ಅಶ್ವತ್ಥ್ ಕಲಿಸುವ ರೀತಿ… ಹೀಗೆ ಎಲ್ಲವೂ ಒಂದೊಂದೂ ನೆನಪಾಗುತ್ತದೆ ಈಗ.

ನಾನು, ನನ್ನ ಸಹೋದರ ವಿಶ್ವಾಸ್

ಆದರೆ ಒಂದು ಹಂತ ಎದುರಾಯಿತು. ನನ್ನ ಹಿಂದೆ ಯಾರೋ ಅಪಶ್ರುತಿ ತೆಗೆಯುತ್ತಿದ್ದರಂತ ಕಾಣಿಸುತ್ತದೆ. ಎರಡು ಮೂರು ಸಲ ನನ್ನ ಕಡೆ ನೋಡಿದರು ಅಶ್ವತ್ಥ್. ನಾನು ಅಷ್ಟೊಂದು ಗಮನ ಹರಿಸದೇ ನನ್ನ ಪಾಡಿಗೆ ಹಾಡುತ್ತಿದ್ದೆ. ಆದರೆ ಮತ್ತೊಂದು ಸಲ ನನ್ನ ಕಡೆಯಿಂದ ಅಪಶ್ರುತಿ ಬಂದಾಗ ಅಶ್ವತ್ಥ್ ಕೆರಳಿದರು.

‘ಅಯ್ಯೋ ಏನ್ರೀ ಹಾಗ್ ಅಪಶ್ರುತಿ ತೆಗೀತೀರಿ, ಸರಿಯಾಗ್ ಹಾಡೋಕ್ ಬರ್ದಿದ್ರೆ ಯಾಕ್ರೀ ಬರ್ತೀರಿ ಇಲ್ಗೆಲ್ಲಾ, ಸರಿಯಾಗ್ ಹಾಡೋಕ್ ಏನ್ ತೊಂದ್ರೆ ನಿಮ್ಗೆ?’

ಬೈಗಳವನ್ನೂ ತಾರಕದಲ್ಲೇ ಹೇಳಿದರು.

ಆದರೆ ನಾನು ಆ ದಿನ ನಿಜಕ್ಕೂ ಅಪಶ್ರುತಿಯಲ್ಲಿ ಹಾಡಿರಲಿಲ್ಲ. ಹಿಂದಿನವರು ಅಪಶ್ರುತಿ ತೆಗೆದಿದ್ದು ತಾವು ಎಂದು ಒಪ್ಪಿಕೊಳ್ಳಲಿಲ್ಲ.

ಅದಾದ ಮೇಲೆ ಅಲ್ಲಿ ಕಲಿತ ಹಾಡುಗಳನ್ನು ಮಂಗಳೂರಿನಲ್ಲಿ ಹಾಡಿದೆವು. ಹಾಡು ಚೆನ್ನಾಗಿ ಬಂದಾಗ ಅಶ್ವತ್ಥ್ ನಮ್ಮನ್ನು ಅಭಿನಂದಿಸಿದರು. ‘ಮಂಗಳೂರಿನವರು, ಚೆನ್ನಾಗ್ ಹಾಡ್ತೀರ್ರೀ’ ಅಂತ ಉಬ್ಬಿಸಿದರು ನಮ್ಮನ್ನು. ಮುಂದೆ ಬೆಂಗಳೂರಿಗೆ ಬಂದಾಗ, ನಮ್ಮ ಕಡೆ ಬಂದು. ‘ನೀವು ಮುಂದೆ ಬನ್ರೂ, ನೀವ್ ಮಂಗಳೂರಿನೋರು ಚೆನ್ನಾಗಿ ಹಾಡ್ತೀರಿ’ ಎಂದು ಹುರಿದುಂಬಿಸಿದರು.

ಅದು ಇವತ್ತಿಗೂ ಅಶ್ವತ್ಥ್ ಅವರಿಗೆ ಗೊತ್ತಿಲ್ಲ, ಅಪಶ್ರುತಿ ತೆಗೆದಿದ್ದು ನಾನಲ್ಲ ಅಂತ!

@#@ @#@

ಅದಾದ ಮೇಲೆ ನಾನು ಬಂದು, ಪತ್ರಿಕೋದ್ಯಮಕ್ಕೆ ಸೇರಿಕೊಂಡು, ಹಾಡು ಬಿಟ್ಟು ಎಲ್ಲಾ ಮುಗಿದಿದೆ. ಅದಾದ ಮೇಲೆ ಒಮ್ಮೆ ಕಲಾಕ್ಷೇತ್ರದಲ್ಲಿ ಅವರ ಬಳಿ ‘ನಿಮ್ಮ ತರಬೇತಿ ಪಡೆದು ಆ ದಿನ ಹಾಡಿದ್ದೆ’ ಎಂದು ಹೇಳಿಕೊಂಡು. ಅವರು ಆ ದಿನ ಅವರದೇ ಆದ ಶೈಲಿಯಲ್ಲಿ ನಕ್ಕು ಹೊರಟು ಹೋದರು.

ಅನಂತರ ಪತ್ರಿಕೋದ್ಯಮದಲ್ಲಿದ್ದ ಕಾರಣಕ್ಕೆ ಅವರನ್ನು ಭೇಟಿ ಆಗಬೇಕಾಗಿ ಬಂತು. ಸಂತೋಷದಿಂದ ಭೇಟಿ ಆದೆ. ಅವರ ಮನೆಯಲ್ಲಿ ಒಂದು ಸಲ ಸಿನಿಮಾ ಪತ್ರಕರ್ತನಾಗಿ ಅವರ ಆತಿಥ್ಯ ಸ್ವೀಕರಿಸಿದೆ. ತಡರಾತ್ರಿಯವರೆಗೆ ಅವರು ಆತಿಥ್ಯ ನೀಡಿ, ಅವರ ಹಾಡು ಕೇಳಿಸಿದ್ದು, ಯಾರಾದರೂ ಮಾತಾಡಿದರೆ ‘ಶ್ ಕೇಳಿ, ಹಾಡು ಕೇಳಿ ಮಾತಾಡ್ಬೇಡಿ’ ಎಂದು ಚಿಕ್ಕ ಮಕ್ಕಳಿಗೆ ಹಳುವಂತೆ ಕಣ್ಣು ಬಿಟ್ಟು ಹೆದರಿಸಿದ್ದು ಎಲ್ಲಾ ನೆನಪಿದೆ.

ಈಗ ಅವರು, ನಾನು ವಾಸಿಸುವ ಬೆಂಗಳೂರಿನ ಎನ್ ಆರ್ ಕಾಲೋನಿ ಭಣಭಣಗುಟ್ಟುತ್ತಿದೆ. ಯಾವತ್ತಾದರೂ ಒಮ್ಮೆ ಕಾಣಿಸಿಕೊಂಡು, ತರಕಾರಿಗೆ ಚೌಕಾಶಿ ಮಾಡುವ ಅವರು ಅಲ್ಲಿಲ್ಲ. ಅವರನ್ನು ಕೂರಿಸಿಕೊಂಡು ಹೋಗುವ ಮೊಪೆಡ್ ಕಾಣಿಸಿಕೊಳ್ಳುವುದಿಲ್ಲ. ಅವರ ಓರೆಯಾದ ಬಾಗಿಲೊಳಗೆ ಯಾವತ್ತಾದರೂ ಕಂಡಾರೇನೋ ಎಂದು ನಾನು ರಸ್ತೆಯಿಂದಲೇ ಇಣುಕುವ ಆಶಾವಾದ ಇನ್ನಿಲ್ಲ. ಯಾವುದೋ ಆಟೋವನ್ನು ನಿಲ್ಲಿಸಿ ‘ಅಲ್ಲಿಗೆ ಬರ್ತೀರಾ, ಇಲ್ಗೆ ಬರ್ತೀರಾ’ ಎಂದು ಕೇಳಲು ಅಶ್ವತ್ಥ್ ಇಲ್ಲ.

@#@ @#@

ಈಗ ಸಂಗೀತ, ಪ್ರಾಕ್ಟೀಸ್ ಬಿಟ್ಟು ನಿಜಕ್ಕೂ ನಾನು ಅಪಶ್ರುತಿ ತೆಗೆಯುತ್ತಿದ್ದೇನೆ. ಈಗ ಅಶ್ವತ್ಥ್ ಧಾರಾಳವಾಗಿ ನನ್ನನ್ನು ಬೈಯಬಹುದು. ‘ಯಾಕ್ರೀ ಸರಿಯಾಗ್ ಹಾಡೋಕಾಗಲ್ವೇನ್ರೀ’ ಅಂತ ಕಣ್ಣು ಕೆಂಪಗಾಗಿಸಬಹುದು.

ಆದರೆ ಅದಕ್ಕೀಗ ಅವರೇ ಇಲ್ಲ.

ಸಾಹಿತ್ಯ ಸಮಾರಂವೊಂದರಲ್ಲಿ ಪಿಳ್ಳೆ (ಎಡಾಗದವರು)

ಸಾಹಿತ್ಯ ಸಮಾರಂಭವೊಂದರಲ್ಲಿ ಪಿಳ್ಳೆ (ಎಡಭಾಗದವರು)

ಕೆ ಜಿ ಶಂಕರ ಪಿಳ್ಳೆ. ಮಲೆಯಾಳಂ ಕಾವ್ಯಕ್ಕೆ ಹೊಸ ತಿರುವು ನೀಡಿದ ಕವಿ. ಕೇರಳ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿರುವ ಇವರ ಕವಿತೆಗಳು ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಪದಗಳು ಪುನರಾವರ್ತನೆಯಾಗುತ್ತಾ ಆಗುತ್ತಾ ನಿಮಗೆ ಹೊಸ ಅರ್ಥವನ್ನು, ಹೊಳಹನ್ನು ಕೊಡುತ್ತಾ ಹೋಗುತ್ತವೆ ಅವರ ಕವಿತೆಗಳು.
ಅವರು ಮಾನವ ಹಕ್ಕುಗಳ ಹೋರಾಟದಲ್ಲೂ ಸಕ್ರಿಯವಾಗಿದ್ದಾರೆ. ಪ್ಯಾಧ್ಯಾಪಕರಾಗಿ ದುಡಿದ ಅನುಭವ ಅವರದು. ಅವರ ಕವಿತೆಯನ್ನು ಓದುತ್ತಾ ಹೋದರೆ ಹೊಸ ಬಗೆಯ ಕಾವ್ಯವಾಗಿ ಕಾಣುತ್ತಾ ಹೋಗುತ್ತದೆ, ಬೆರಗಾಗುತ್ತದೆ. `ಬಾವಿ’, `ಬೊಕ್ಕ’, `ತರಾವರಿ ಪೋಜಿನ ಫೋಟೋಗಳು’, `ಜಿಡ್ಡು ಮೆತ್ತಿದ ಆರಾಮಕುರ್ಚಿ’, `ಉಡುದಾರ’, `ಬಂಗಾಲ್‌’ ಮೊದಲಾದ ಕವಿತೆಗಳನ್ನು ಓದುತ್ತಾ ಓದುತ್ತಾ ಕಾವ್ಯಾಸಕ್ತರಾದ ನೀವು ಥ್ರಿಲ್‌ ಆಗಿರುತ್ತೀರಿ. ಕನ್ನಡದಲ್ಲಿ ಅಡಿಗರನ್ನು, ಲಂಕೇಶರನ್ನು ಓದಿ ಮೆಚ್ಚಿ ಆರಾಸುವವರು ಈ ಸಂಕಲನವನ್ನೂ ಅಷ್ಟೇ ಪ್ರೀತಿಯಿಂದ ಪರಿಗ್ರಹಿಸಲು ಸಾಧ್ಯ.
`ಬೊಕ್ಕ ಬೊಕ್ಕನ ಜೊತೆ ಮಾತನಾಡುವಾಗ
ಬಚ್ಚಿಡುವಂಥದ್ದು ಏನೂ ಇಲ್ಲ.
ಒಂದು ನಾಜೂಕಿನ ನಗೆಯಲ್ಲಿ
ಭೂತವೋ ಭವಿಷ್ಯವೋ ಏನು ಬೇಕಾದರೂ
ಪ್ರತಿಬಿಂಬಿಸಲು ಪ್ರಯಾಸವಿಲ್ಲ

ಆದರಿಂದು,
ಕವಿ ಕವಿಯ ಜೊತೆ ಮಾತನಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ಯಾತ್ರಿಕ ಯಾತ್ರಿಕನ ಜೊತೆ ಮಾತಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ನೆರೆಯವ ನೆರೆಯವನ ಜೊತೆ ಮಾತನಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ಇಂಡಿಯಾ ಚೀನಾ ಜೊತೆ ಮಾತನಾಡುವಾಗ
ಬಚ್ಚಿಡುತ್ತವೆ ಎಲ್ಲವನ್ನೂ….’
-ಎಂದೆಲ್ಲಾ ಬರೆದು ಬೆಚ್ಚಿ ಬೀಳಿಸುವ ಅವರ ಕವಿತೆಗಳಲ್ಲಿ ನಿತ್ಯ ನೈಮಿತ್ಯಿಕ ವಿಷಯಗಳೇ ವಸ್ತುಗಳಾಗಿವೆ. ಆದರೆ ಆ ನಮ್ಮ ನಿತ್ಯದಲ್ಲೇ ಇರುವ ಸಂಗತಿಯಲ್ಲಿ ಅವರು ಸುರಿಸುವ ಜಿಜ್ಞಾಸೆ, ಓದೇ ಅನುಭವಿಸಬೇಕಾದ ಸಂಗತಿ.
ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ `ಕೆಜಿ ಶಂಕರ ಪಿಳ್ಳೆಯವರ ಕವಿತೆಗಳು‘ ಸಂಕಲನ ಇದೀಗ ಮಾರುಕಟ್ಟೆಯಲ್ಲಿದೆ. ಮಲೆಯಾಳಂ ಮತ್ತು ಕನ್ನಡ ಸಾಹಿತ್ಯದ ವಿಶೇಷ ಅಧ್ಯಯನ ನಡೆಸಿ ಅನುಭವವಿರುವ ತೇರ್‌ಳಿ ಶೇಖರ್‌ ಕವಿತೆಗಳನ್ನು ಅನುವಾದಿಸಿದ್ದಾರೆ. ಅವರ ಅನುವಾದದ ಸೊಗಸು ಎಷ್ಟು ಅದ್ಭುತವಾಗಿದೆ ಎಂದರೆ ಮೂಲದ ಲಯ ಒಂಚೂರೂ ಆಚೀಚೆ ಆಗಿಲ್ಲ. ಪಿಳ್ಳೆ ಕವಿತೆಗಳ ಲಯವೇ ಭಿನ್ನ. ಅದನ್ನು ಅನುವಾದದಲ್ಲೂ ಉಳಿಸಿಕೊಳ್ಳುವುದು ಅನುವಾದಕರಿಗೆ ಸಾಧ್ಯವಾಗಿದೆ ಎನ್ನುವುದು ಕಾವ್ಯಪ್ರೇಮಿಗಳಿಗೆ ಖುಷಿಯ ವಿಷಯ.
ಆ ಮೂಲ ಕಾವ್ಯದ ಪುಳಕಕ್ಕೆ, ಅನುವಾದದ ಜಲಕ್‌ಗೆ ಇಲ್ಲಿ ಒಂದೆರಡು ಕವಿತೆಗಳನ್ನು ನೀಡಲಾಗುತ್ತಿದೆ, ಓದಿ. ನೀವೇ ಇಷ್ಟಪಟ್ಟು ಆ ಸಂಕಲನವನ್ನು ಹುಡುಕಿ ಹೋಗಿಬಿಡುತ್ತೀರಾ.

ಕಾಗೆ
ಗುಡ್ಡ ನಿಂತಿದೆ ಗುಡ್ಡವಾಗಿಯೇ
ಗುಡ್ಡದ ಮೇಲೆ ಮಾವು ನಿಂತಿದೆ ಮಾವಾಗಿಯೇ
ಮಾವಿನ ಕೆಳಗೆ ಹಸು ಮೇಯುತ್ತಿದೆ ಹಸುವಾಗಿಯೇ
ಮಾವಿನ ಕಣ್ಣಿಗೆ ಕಾಗೆ ಕುಟುಕುವಾಗ
ಮಾವು ಅಲುಗಾಡುತ್ತದೆಹಸುವಾಗಿಯೇ
ಗುಡ್ಡದ ಬಾಲಕ್ಕೆ ಕಾಗೆ ಕುಟುಕುವಾಗ
ಗುಡ್ಡ ಅಲುಗಾಡುತ್ತದೆ ಹಸುವಾಗಿಯೇ

ನಾನು
ವೇಶ್ಯೆಯಾಗಿದ್ದಳು ನನ್ನ
ಮುದಿ ಮುದಿ ಮುತ್ತಜ್ಜಿ
ಹೆಣ್ಣಾಗಿದ್ದರೆ
ನಾನೂ
ವೇಶ್ಯೆಯಾಗುತ್ತಿದ್ದೆ.

ವಿಟನಾಗಿದ್ದ ನನ್ನ
ಮುದಿ ಮುದಿ ಮುತ್ತಾತ
ಗಂಡಾಗಿದ್ದರೆ
ನಾನೂ
ವಿಟನಾಗುತ್ತಿದ್ದೆ.

ಶಬ್ದಾಸುರನ ನಗರದಲ್ಲಿ
ಒಂದು ಹಿಂಡು ಕಿವಿಗಳು
ಅಲೆಯುತ್ತಿವೆ
ಮೌನವನ್ನು ದತ್ತು ಪಡೆಯಲು,
ಶಬ್ದಾಸುರನ ನಗರದಲ್ಲಿ.

ಒಲವಿನಂತೆಯೋ
ಒತ್ತೆಯಂತೆಯೋ
ಪಿ. ಎಫ್‌. ಲೋನಿನಂತೆಯೋ
ಬಂಡೆ ರಾಶಿಯಂತೆಯೋ
ೃಹತ್‌ ತಟಾಕದಂತೆಯೋ
ಥಟ್ಟನೆ

ಆವಿಯಾಗಿ ಮರೆಯಾದ ಮೌನವನ್ನು.
ಕೆತ್ತಿ ಕೆತ್ತಿ ಶಿಲ್ಪಗಳನ್ನೋ
ಮೊಗೆದು ನೆನಸಿ ಹಣ್ಣುಗಳನ್ನೋ
ಬೆಳೆಸಬಹುದಾದ ಮೌನವನ್ನು.

ಅರ್ಥ
ಭಾಷೆಯ ದಾರದಲ್ಲಿ ಪೋಣಿಸಿ
ಜಗತ್ತನ್ನು
ಗಡಿಯಾರದಂತೆ
ಹೊತ್ತು ನಡೆಯುತ್ತೇನೆ
ಎತ್ತ ಹೋಗುವಾಗಲೂ
ಏನೇ ಮಾಡುವಾಗಲೂ

ಆದ್ದರಿಂದ
ಯಾವ ದೂರಕ್ಕೂ
ಯಾವ ಕರ್ಮಕ್ಕೂ
ಯಾವ ಮಾತಿಗೂ
ಯಾವ ತಾಳಕ್ಕೂ
ಯಾವ ಹೊತ್ತಲ್ಲೂ
ಒಂದೇ ಒಂದು ಅರ್ಥ: ಕಾಲ.

(ಮುಂದಿನ ಓದಿಗೆ ನೀವು ಆ ಸಂಕಲನವನ್ನು ತೆಗೆದುಕೊಳ್ಳಲೇಬೇಕು.)

IND2760Bಸಾಮಾನ್ಯ ಜನರ ಸಾವು, ಕಮಾಂಡೋಗಳ ವೀರ ಮರಣ ಮತ್ತು ಆತಂಕವಾದಿಗಳ ಹತ್ಯೆ.
`ಮೂರು ವರ್ಗ’ಗಳಾಗಿ ಹೀಗೆ ನಾವು ಸಾವನ್ನು ವಿಂಗಡಿಸಿ ನೋಡುತ್ತಿದ್ದರೂ ಮುಂಬಯಿಯಲ್ಲಿ ಎರಡೂವರೆ ದಿನಗಳ ಕಾಲ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಘಟಿಸಿದ ಎಲ್ಲಾ ಸಾವೂ ಒಂದೇ. ನಿಂತಿದ್ದು ಉಸಿರು, ಸ್ತಬವಾಗಿದ್ದು ಎದೆಬಡಿತ, ಚೆಲ್ಲಿದ್ದು ರಕ್ತ, ಮುಚ್ಚಿದ್ದು ಕಣ್ಣು. ಆತಂಕವಾದಿಗಳ ಹತ್ಯೆ ಆ ಕ್ಷಣಕ್ಕೆ ಮಾನ್ಯವಾದರೂ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತಾ ವ್ಯಾಪಿಸುತ್ತಿರುವ `ಆತಂಕವಾದಿತನ’ದ ಹತ್ಯೆಯಿಂದ ಮಾತ್ರ ಬಹುಶಃ ಎಲ್ಲವೂ ಸರಿಯಾಗಲು ಸಾಧ್ಯ.
ಈವರೆಗೆ ನೂರರೊಳಗೆ ಲೆಕ್ಕಕ್ಕೆ ಸಿಗುತ್ತಿದ್ದ ಭಯೋತ್ಪಾದಕ ಸಾವಿನ ಸಂಖ್ಯೆ ಇದೀಗ ನೂರನ್ನು ದಾಟಿದೆ. ಗಡಿಯಲ್ಲಿ ನಡೆಯುತ್ತಲೇ ಬಂದ ಯುದದ ಸಂಖ್ಯೆಯೂ ಹೀಗೇ ಸಣ್ಣ ಮಟ್ಟದಲ್ಲಿ ಪ್ರಾರಂಭವಾಗಿ ದೊಡ್ಡ ಸಂಖ್ಯೆಯಲ್ಲಿ ಯೋಧರನ್ನು, ಶ್ರೀಸಾಮಾನ್ಯರನ್ನು ಬಲಿ ತೆಗೆದುಕೊಳ್ಳುತ್ತಾ ಸಾಗಿತು. ಈಗ ಅದೂ ಮಾಮೂಲಿ ಸುದ್ದಿಗಳಲ್ಲಿ ಒಂದಾಗಿಬಿಟ್ಟಿದೆ. ಮುಂದೆ ಭಯೋತ್ಪಾದಕ ಕೃತ್ಯವೂ ಸಾರ್ವಜನಿಕರ ಮನಸ್ಸಲ್ಲಿ ಹೀಗೆ ನಿರ್ಭಾವುಕತೆಯನ್ನು ಬಿತ್ತಿಬಿಟ್ಟರೆ ಕಷ್ಟ.
IND27164Bಮುಂಬಯಿ, ಬೆಂಗಳೂರು, ದೆಹಲಿ, ಹೀಗೆ ದೊಡ್ಡ ದೊಡ್ಡ ನಗರಗಳಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಭಯೋತ್ಪಾದಕತೆ ಒಂದು ಲೆಕ್ಕದಲ್ಲಿ ಪರಸ್ಪರ ದ್ವೇಷದ ಕತೆ ಅಷ್ಟೇ. `ಮುಸ್ಲೀಮರಿಗೆ ಯಾವುದೇ ತೊಂದರೆಯಾಗಬಾರದು’ ಎಂದು ಎಚ್ಚರಿಕೆ ನೀಡಲು ಮೊನ್ನೆಯ `ಬ್ಲ್ಯಾಕ್‌ ವೆಡ್ನೆಸ್‌ಡೇ’ ಕಾರ್ಯಾಚರಣೆ ನಡೆಯಿತು ಎಂಬ ಮಾತನ್ನು ಭಯೋತ್ಪಾದಕ ಸಂಘಟನೆಗಳು ಹೇಳಿವೆ. ಇತ್ತೀಚಿನ ಸ್ವಾ ಪ್ರಕರಣ `ಹಿಂದೂ ಭಯೋತ್ಪಾದನೆ’ಯನ್ನು ಪ್ರತಿಪಾದಿಸಿತು. ಅಲ್ಲಿಗೆ ದ್ವೇಷಕ್ಕೆ ದ್ವೇಷದ, ಹಿಂಸೆಗೆ ಹಿಂಸೆಯ ಉತ್ತರವೇ ಸಾಗಬೇಕಾಗುತ್ತದೆ. ಇದೇ ತೀವ್ರಗೊಂಡರೆ ಮುಂದೊಂದು ದಿನ ಉಳಿಯುವುದು ಶಾಂತಿಯಲ್ಲ, ಹೊರತಾಗಿ ಅಲ್ಲಿ ಉಳಿಯುವುದು ದ್ವೇಷ ಮಾತ್ರ.
ಈಗ ನಾವಿಡುವ ಹೆಜ್ಜೆ ಎಷ್ಟು ಎಚ್ಚರಿಕೆಯಿಂದ ಕೂಡಿರಬೇಕು ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಹಿಂದೂ ಸಮುದಾಯದ ಮನಸ್ಸಲ್ಲಿ ಆಳವಾಗಿ (ಒಬ್ಬರಿಗೂ ತಮ್ಮ ಅರಿವಿಗೇ ಬಾರದಂತೆ) ಬೇರೂರಿರುವುದು ಮುಸ್ಲಿಂ ದ್ವೇಷ. ಹೀಗಾದರೆ ಶ್ರೀಸಾಮಾನ್ಯನಾಗಿ, ಇದಾವುದರ ಪರಿವೆ, ಹರಕತ್ತು ಇಲ್ಲದಂತೆ ಬದುಕುತ್ತಿರುವ ಅಸಂಖ್ಯ ಭಾರತೀಯ ಮುಸ್ಲಿಂ ಸಮುದಾಯ ಎಲ್ಲಿಗೆ ಹೋಗಬೇಕು? ನಮ್ಮ ನಿಮ್ಮ ಗೆಳಯ ಮುಸ್ಲಿಂ ಆಗಿದ್ದಾನೆ, ನಮ್ಮ ಅಕ್ಕ ಪಕ್ಕ ಅಂಥ ಅನೇಕ ನಿರುಪದ್ರವಿ ಮುಸ್ಲಿಂ ಕುಟುಂಬಗಳಿವೆ. ಭಯೋತ್ಪಾದಕ ಕೃತ್ಯ ಎಂದರೆ ಅದು ಮುಸ್ಲಿಂ ಸಮುದಾಯದ ಕೃತ್ಯ ಎಂದೇ `ಪ್ರತಿಪಾದನೆ’ ಆಗಿಬಿಟ್ಟರೆ ಅದಕ್ಕಿಂತ ದೊಡ್ಡ `ಭಾವನಾತ್ಮಕ ಭಯೋತ್ಪಾದನೆ’ ಇನ್ನೊಂದಿಲ್ಲ. ಅದನ್ನು ಬಹಳ ಸೂಕ್ಷ್ಮವಾಗಿ, ಹುಷಾರಾಗಿ ಹೋಗಲಾಡಿಸದೇ ಹೋದರೆ ಸ್ವಸ್ಥ ಸಮಾಜವೊಂದಕ್ಕೆ ದೊಡ್ಡ ಗಂಡಾಂತರ ಕಾದಿದೆ.
ಈ ನಡುವೆ ಮಾಧ್ಯಮಕ್ಕೂ ಕೂಡ ಜವಾಬ್ದಾರಿಯ ಅರಿವು ಇನ್ನಷ್ಟು ಹೆಚ್ಚಾಗಬೇಕು. ಹಿಂಸಾಚಾರ ಸುದ್ದಿಯ ಒಂದು ಸರಕಾಗುವುದು `ಭಯೋತ್ದಾದಕತೆ’ಗಿಂತ ದೊಡ್ಡ ದುರಂತ. ಒಂದು ಘಟನೆಯ ವರದಿ ಮಾಡುವ ಉತ್ಸಾಹದ ಮಧ್ಯೆಯೂ ಸುದ್ದಿಯನ್ನು ಸೋಸಿ, ಒಂದು ಸಮಾಜದ ಆರೋಗ್ಯಕ್ಕೆ ಯಾವುದನ್ನು ಹೇಳಿದರೆ ಹೆಚ್ಚು ಸರಿ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಆಲೋಚಿಸಿ ವರದಿಯನ್ನು ನೀಡಬೇಕು. `ಫ್ಲಾಷ್‌ ನ್ಯೂಸ್‌’ (ಸುದಿ ಸೋಟ) ಎನ್ನುವುದು `ಬ್ಲಾಸ್ಟ್‌ ನ್ಯೂಸ್‌’ ಆಗದಿದ್ದರೆ ಸಾಕು. ಸುದ್ದಿಯ ಹೇಳಿಕೆಯಲ್ಲಿ ರಂಜಕತೆಯನ್ನು ತೋರದೇ, ಸುದ್ದಿಯ ನಡುವೆಯೂ ಭಾವುಕತೆಯನ್ನು ಮರೆಯದೇ ಒಬ್ಬ ವರದಿಗಾರ ವ್ಯವಹರಿಸಬೇಕು. ಮಾಧ್ಯಮದ ಕಡೆಯಿಂದ ಸತ್ತ ಅಮಾಯಕರಿಗೆ ಸಲ್ಲಿಸಬಹುದಾದ ಅತಿ ಉತ್ತಮ ಶ್ರದಾಂಜಲಿ ಬಹುಶಃ ಇದೇ ಆಗಿದ್ದೀತು.
ಕಳೆದ ಮೂರು ದಿನಗಳಿಂದ ನಡೆದ ಮುಂಬಯಿ ಹಿಂಸಾಚಾರ ಒಂದು ಭಯೋತ್ಪಾದಕ ಕೃತ್ಯದ ಹಿಂಸೆಯ ವಿರಾಟ್‌ದರ್ಶನವನ್ನು ಇಡೀ ರಾಷ್ಟ್ರಕ್ಕೆ ರವಾನಿಸಿದೆ ಎಂದರೆ ಆ ಹೇಳಿಕೆ ಅಮಾನವೀಯವಾಗಿ ಕೇಳಬಹುದು. ಆದರೆ ಈ ಅಸೀಮ ಹಿಂಸೆ ಒಬ್ಬ ಭಯೋತ್ಪಾದಕನ ಮನಸ್ಸಲ್ಲೂ ವೇದನೆಯನ್ನು, ಕಳವಳವನ್ನು ತರಲಿ. ಒಬ್ಬ ಹಿಂಸಾಚಾರಿಗೇ ಆ ಹಿಂಸೆ ದುಃಖವನ್ನು ತರುವ ದಿನ ಬಂದರೆ ಜಗತ್ತು ಶಾಂತವಾದೀತು. ಕಂಠ ಬಿಗಿದು, ಸೆರೆಯುಬ್ಬಿ, ಕಣ್ಣುಗಳಲ್ಲಿ ನೀರುದುಂಬಿಕೊಂಡವರ ಅಳು ಅಲ್ಲೇ ನಿಲ್ಲಬಹುದು. ಬೋರ್ಗರೆವ ಎದೆಯ ಕಡಲು ಉಬ್ಬರ ಇಳಿಸಿಕೊಂಡು ನಿಶ್ಚಿಂತವಾಗಬಹುದು.

ಪತ್ರಕರ್ತನ ಪತ್ರಕತೆ

Posted: ನವೆಂಬರ್ 26, 2008 in Uncategorized

ಮನೋಹರ್‌

ಚಿತ್ರ: ಮನೋಹರ್‌

ಸುರೇಶ್‌ ಕೆ `ಉದಯವಾಣಿ’ಯ ಸಹೋದ್ಯೋಗಿ. ಶುಕ್ರವಾರದ `ಸುಚಿತ್ರ’ ಸಿನಿಪುರವಣಿಯನ್ನು ನಿರ್ವಹಿಸುವವರು. ಅಂದವಾದ ಮುಖಪುಟ ರೂಪಿಸುವಲ್ಲಿ, ವಿಶೇಷವಾಗಿ ಪುರವಣಿಗಳಿಗೆ ಅಂದ, ಆಕಾರವನ್ನು ನೀಡುವಲ್ಲಿ ನುರಿತಿರುವ ಲೇಔಟ್‌ ತಜ್ಞ. ಸಿನಿಮಾಗಳನ್ನು ಖಚಿತವಾಗಿ ವಿಮರ್ಶಿಸಬಲ್ಲ, ಮೊನಚಾಗಿ ಬರೆಯಬಲ್ಲ, ಯಾವುದೇ ಕಲೆಯನ್ನು ಸುಲಭವಾಗಿ ಗ್ರಹಿಸಿ, ಬರವಣಿಗೆಗೆ ಇಳಿಸಬಲ್ಲವರು ಸುರೇಶ್‌.
ಆದರೆ ಕತೆ, ಕವಿತೆಗಳ ಬರವಣಿಗೆಗೆ ಈವರೆಗೂ ತೊಡಗದೇ ಇದ್ದ ಸುರೇಶ್‌ ಅಚಾನಕ್‌ ಒಂದು ಕತೆ ಬರೆದು ಅಚ್ಚರಿ ಮೂಡಿಸಿದ್ದಾರೆ. ಕತೆಯ ಹೆಸರು: ಕಾಗದ ಬಂದಿದೆ. ಪತ್ರಲೇಖನ ಹೋಗಿ ಎಸ್ಸೆಮ್ಮೆಸ್‌ ಲೇಖನಕ್ಕೆ ಬಂದು ನಿಂತಿರುವ ನಮ್ಮ ಕುಶಲವಿನಿಮಯ ಪ್ರತಿಭೆ, ಸಂಬಂಧಗಳ ಅರ್ಥವನ್ನೇ ಸಂಕುಚಿತಗೊಳಿಸಿರಬಹುದಾದ ಸಾಧ್ಯತೆ ಇದೆ. `ಒಂದಿಷ್ಟು ವ್ಯಾವಹಾರಿಕ ಪತ್ರಗಳ ನಡುವೆ ಒಂದು ಹಸಿರು ಅಂತರ್ದೇಶಿ ಪತ್ರ ಇದ್ದರೆ ಒಣ ತರಗೆಲೆಯ ನಡುವೆ ಒಂದು ಹಸಿರು ಎಲೆ ಸಿಕ್ಕಷ್ಟು ಖುಷಿಯಾಗುತ್ತದೆ’ ಎಂದು ಲೇಖಕ ಜಯಂತ ಕಾಯ್ಕಿಣಿ ಬರೆದಿದ್ದರು.
ಅಂಥ ಅಂತರ್ದೇಶಿ ಪತ್ರಗಳ ಸಂಭ್ರಮದ ದಿನಗಳಲ್ಲೇ ಹುಟ್ಟಿ ಬೆಳೆದು ಬಂದ ಸುರೇಶ್‌, `ಕಾಗದ ಬಂದಿದೆ’ ಕತೆಯ ಮೂಲಕ ಸಂಬಂಧಕ್ಕಿರುವ ಅನೇಕ ಸೂಕ್ಷ್ಮಗಳನ್ನು ಹೇಳಲು ಪ್ರಯತ್ನಿಸಿದ್ದಾರೆ.
ನಾವು `ಕಳ್ಳಕುಳ್ಳ’ ಬ್ಲಾಗ್‌ನಲ್ಲಿ ಈಗಷ್ಟೇ ಪ್ರಾರಂಭಿಸಿರುವ `ತಿಳಿಯ ಹೇಳುವೆ ಇಷ್ಟಕತೆಯನು’ ಮಾಲಿಕೆಯಲ್ಲಿ `ಕಾಗದ’ ಕತೆಯನ್ನು ಪ್ರಕಟಿಸುತ್ತಿದ್ದೇವೆ. ಓದಿ.
(ಹೆಚ್ಚು…)

jogula

ಜೋಗುಳ ಎನ್ನು­ವುದು ಒಂದು ಅತ್ಯಂತ ಮಾನ­ವೀಯ ಕಲ್ಪನೆ. ಅಮ್ಮ ತನ್ನ ಕೈ ಬಳೆ ಸದ್ದಿನ ಲಯದ ಮೂಲಕ ಮಗು­ವಿನ ಉಸಿ­ರಾ­ಟದ ಲಯ­ವನ್ನು ಮಾತಾ­ಡಿ­ಸುವ ಪರಿ ಅದು. ಅಲ್ಲಿ ಅಮ್ಮನ ಮಮತೆ, ಮಗು­ವಿನ ಅರ್ಪ­ಣಾ­ಭಾವ, ವಾತಾ­ವ­ರ­ಣದ ತಾದಾತ್ಮ್ಯ, ಮಗುವಿನ ನೆತ್ತಿಯ ಸುವಾ­ಸ­ನೆ­ಗಳು ಒಂದಾ­ಗು­ತ್ತವೆ. ಪ್ರತಿ ಹೆಣ್ಣಿಗೂ ತಾಯ್ತನ ವರ, ಪ್ರತಿ ಮಗು­ವಿಗೂ ಜೋಗುಳ ವರ.
ಹಾಗೆ ನೋಡಿ­ದರೆ ಜೋಗುಳ ಎಲ್ಲರ ಎದೆ­ಯೊ­ಳ­ಗಿ­ರುವ ಒಂದು ಆಕಾ­ರ­ವಿ­ಲ್ಲದ ಭಾವ. ಅಲ್ಲಿ ರಾಗ­ಜ್ಞಾನ ಚೆನ್ನಾ­ಗಿ­ರ­ಬೇ­ಕಾ­ಗಿಲ್ಲ, ಸಾಹಿ­ತ್ಯದ ಹಂಗಿಲ್ಲ, ಜೋಗುಳ ಹಾಡು­ವು­ದನ್ನು ಯಾರಾ­ದರೂ ಮೆಚ್ಚಿ ಅಭಿ­ನಂ­ದಿ­ಸಲಿ ಎಂಬ ಅಪೇ­ಕ್ಷೆ­ಯಿಲ್ಲ. ತನ್ನ ಕರು­ಳಿನ ಕೊಡು­ಗೆ­ಯನ್ನು ಅಮ್ಮ ಮಲ­ಗಿ­ಸು­ತ್ತಾಳೆ, ಮಲ­ಗಿ­ಸು­ತ್ತು­ನು­ನುನು’ ಅಂತ ಹಾಡು­ತ್ತಾಳೆ, ರಾಗ ಬದ­ಲಾ­ದು­ದನ್ನೂ ಗಮ­ನಿ­ಸ­ದಾ­ಗು­ತ್ತಾಳೆ. ಇಲ್ಲಿ ಬೇಕಾ­ಗಿ­ರು­ವುದು ಎರಡು ಮನ­ಸ್ಸ­ಗಳ ನಡು­ವಿನ ಒಂದು ಭಾವ ಮಾತ್ರ.

ಅಷ್ಟೇ ಆಲ್ಲ, ಜೋಗುಳ ತಾಯ್ತ­ನದ ಪ್ರತೀಕ. ಮಗು ಹುಟ್ಟಿ ಬೆಳೆ­ಯು­ವ­ರೆಗೆ ಆಮ್ಮ ಜೊಗುಳ ಹೇಳು­ತ್ತಾಳೆ. ಜೋಗುಳ ಕೇಳಿ ಮಗು ಬೆಳೆದು, ಜೋಗು­ಳ­ವನ್ನು ಮರೆ­ಯ­ಬ­ಹುದು. ಒಂದು ಕಾಲ­ಕ್ಕೆ­ಅ­ಮ್ಮನ ಜೋಗು­ಳಕ್ಕೆ ಹಠ ಮಾಡು­ತ್ತಿದ್ದ ಮಗ/ಳು ನಿಧಾ­ನ­ವಾಗಿ ಬದು­ಕಿನ ಕುಲು­ಮೆ­ಯಲ್ಲಿ ಬದ­ಲಾ­ಗುತ್ತಾ ಹೋಗು­ತ್ತಾನೆ/ಳೆ. ಆಗ ತನ್ನ ಮಗ/ಳು ತನ್ನ ಅಂತ್ಯ­ಕಾ­ಲದ ಹೊತ್ತಿಗೆ ಹಾಡ­ಬ­ಹು­ದಾದ ಮೌನ ಜೋಗು­ಳ­ಕ್ಕಾಗಿ ಕಾಯು­ತ್ತಾಳೆ ಅಮ್ಮ. ತನ್ನ ಕೆನ್ನೆಯ ಮೇಲೆ ನೇವ­ರಿ­ಸುವ ತನ್ನ ಕುಡಿಯ ಕೈಗಾಗಿ ಅಮ್ಮ ಈ ಜಗದ ತೊಟ್ಟಿ­ಲಲ್ಲಿ ಮಲಗಿ ಮೌನ­ವಾಗಿ ಅಳು­ತ್ತಾಳೆ.
ಅಮ್ಮ­ನಿಗೆ ಮಗು ತಾಯಿ
ಮಗುವೇ ಆಮ್ಮನ ಕಾಯಿ!
***
ಇದೀಗ ಅಮ್ಮನ ರೀತಿ ಬೇರೆ, ಮಗು­ವಿನ ರೀತಿ ಬೇರೆ. ಜೋಗುಳ ಇಲ್ಲೀಗ ಇನ್ನಷ್ಟು ಸಾಂಕೇ­ತಿಕ. ಬೇಬಿ­ಸಿ­ಟಿಂ­ಗ್‌­ನಲ್ಲಿ ತನ್ನ ಮಗು­ವನ್ನು ಬಿಟ್ಟ ಆಮ್ಮ, ಗಡಿ­ಬಿ­ಡಿ­ಯಲ್ಲಿ ಕಂದ­ನನ್ನು ಮುದ್ದಿಸಿ ಹೊರ­ಟರೆ ಅದೇ ಮಗು­ವಿನ ಪಾಲಿನ ಜೋಗುಳ. ರಾತ್ರಿ ಆಯಾಳ ಕೈಯಲ್ಲಿ ಮಗು­ವನ್ನು ಬಿಟ್ಟು ಗಂಡ, ಹೆಂಡತಿ ನೈಟ್‌ ಶಿಫ್ಟ್‌ಗೆ ಹೊರಟು ನಿಂತಾಗ ಮಗು­ವಿ­ನೆಡೆ ಆ ಪೋಷ­ಕರು ಎಸೆದ ಒಮದು ಮಮ­ತೆಯ ನೋಟವೇ ಆ ಮಗು­ವಿನ ಪಾಲಿಗೆ ಜೋಗುಳ. ಸರೋ­ಗೇಟ್‌ ಮದರ್‌, ಸಿಂಗಲ್‌ ಪೇರೆಂ­ಟಿಂಗ್‌ ಎಂಬೆಲ್ಲಾ ತಂತ್ರ­ಜ್ಞಾ­ನ­ಪ್ರೇ­ರಿತ ತಾಯ್ತ­ನದ ಜಗತ್ತಲ್ಲಿ ಮನೆ ಮನೆಯ ರಾಮ, ಕೃಷ್ಣ, ಚಂದ್ರ­ಹಾ­ಸರು ದಿಕ್ಕೆಟ್ಟು ನೋಡು­ತ್ತಿ­ದ್ದಾರಾ? ಮಡಿ­ಲಲ್ಲಿ ಮಗು ನಲಿಯೇ, ನಲಿದ ಮಗುವೂ ಮಡಿ­ಲಲ್ಲಿ ನಿಲ್ಲದೇ ಯಶೋದೆ, ದೇವ­ಕಿ­ಯರು ಕಂಗಾ­ಲಾ­ಗಿ­ದ್ದಾರಾ?

ತಾಯ್ತ­ನದ ಹಲವು ಮುಖ­ಗ­ಳನ್ನು ಹೊತ್ತ ಧಾರಾ­ವಾ­ಹಿ­ಯೊಂದು ಇದೇ ನವೆಂ­ಬರ್‌ 24ರಿಂದ ಝೀ ಚಾನ­ಲ್‌ನಲ್ಲಿ ಪ್ರಸಾ­ರ­ವಾ­ಗು­ತ್ತಿದೆ. `ಪ್ರೀತಿ ಇಲ್ಲದ ಮೇಲೆ’ ಎಂಬ ಜನ­ಪ್ರಿಯ ಧಾರಾ­ವಾ­ಹಿಯ ಚುಕ್ಕಾಣಿ ಹಿಡಿ­ದಿದ್ದ ವಿನು ಬಳಂಜ ಅವರೇ ಈ ಧಾರಾ­ವಾ­ಹಿಯ ನಿರ್ದೇ­ಶಕ. ಹೆಸರು: ಜೋಗುಳ. `ನ­ಚಿ­ಕೇತ್‌’ ಬರೆದ ಕತೆಗೆ ಚಿತ್ರ­ಕತೆ ಸಿದ­­ಪ­ಡಿ­ಸಿ­ರು­ವ­ವರು ಪತ್ರ­ಕರ್ತ ಸತ್ಯ­ಮೂರ್ತಿ ಆನಂ­ದೂರು. ಕರ್ನಾ­ಟಕ ಶಾಸ್ತ್ರೀಯ ಸಂಗೀತ ಪರಂ­ಪ­ರೆಯ ದೊಡ್ಡ ವಿದ್ವಾಂಸ ಆನೂರು ಅನಂ­ತ­ಕೃಷ್ಣ ಶರ್ಮ (ಶಿವು) ಈ ಧಾರಾ­ವಾ­ಹಿಗೆ ಸಂಗೀತ ನೀಡುವ ಮೂಲಕ ಕಿರುತೆ­ರೆಗೆ ಕಾಲಿ­ಟ್ಟಿ­ದ್ದಾರೆ. 24ರಿಂದ ಸೋಮ­ವಾ­ರ­ದಿಂದ ಶುಕ್ರ­ವಾ­ರ­ದ­ವ­ರೆಗೆ ರಾತ್ರಿ 8.30ಕ್ಕೆ ಪ್ರಸಾ­ರ­ವಾಗುವ ಈ ಧಾರಾ­ವಾ­ಹಿಯ ಶೀರ್ಷಿಕೆ ಗೀತೆ­ಯನ್ನು ಬರೆ­ದಿದ್ದು ವಿಕಾಸ ನೇಗಿ­ಲೋಣಿ.
ಆದರ ಪೂರ್ಣ­ಪದ್ಯ ಇಲ್ಲಿದೆ:
ಭಾವ­ಗಳ ತೊಟ್ಟಿ­ಲಲ್ಲಿ ಮನಸೇ ಮಗು­ವಾಗಿ
ಲಾಲಿಯ ಹಾಡಲಿ ಜಗ­ವೆಲ್ಲಾ
ಜೋಜೋ ಜೋಜೋ…

ಕಿಲ­ಕಿಲ ನಗು­ವಿನ ಶ್ಯಾಮನೇ
ತೆರೆ­ಸಲಿ ಹೃದ­ಯದ ಕಣ್ಣನೇ
ಮನೆ ಮನದ ಕನ­ಸಾಗು
ಕನಸೇ ನೀ ಉಸಿ­ರಾ­ಗು
ಕನ­ಸಿನ ತೇರಲಿ ಬಯ­ಕೆ­ಗಳ ಆಗ­ಮನ
ಪಯ­ಣದ ದಾರಿ­ಯಲಿ ಹೆಜ್ಜೆ ಹೆಜ್ಜೆಯೂ ರೋಮಾಂ­ಚ­ನ
ಎಲ್ಲರ ಎದೆ­ಯೊ­ಳಗೆ ಮಗು­ವೊಂದು ಮಲ­ಗಲಿ
ಸದ್ದು ಮಾಡದೇ ಅಮ್ಮ ಮುದ್ದಿ­ಸಲಿ
ಜೋ ಜೋ ಎಂದರೆ ಕಂದ­ನಿಗೆ ಸವಿ­ಹಾಲು
ಜೋಗು­ಳದ ಪ್ರೀತಿ­ಯಲಿ ಎಲ್ಲ­ರಿಗೂ ಸಮ­ಪಾಲು
ಕಿರು­ಗೆಜ್ಜೆ ಲಜ್ಜೆಗೆ ಜೋ ಜೋ
ಬೆಳೆಯೋ ಹೆಜ್ಜೆಗೆ ಜೋ ಜೋ

ಪ್ರದೀಪ್‌ ರಘುನಾಥನ್‌

ಚಿತ್ರಕೃಪೆ: ಪ್ರದೀಪ್‌ ರಘುನಾಥನ್‌

ಈ ದಾರಿ ಸುಸ್ತು ಕಡಿಮೆ ಮಾಡಲು ನಿನಗೆ ನಾನೊಂದು ಕತೆ ಹೇಳುತ್ತೇನೆ.
ಹೀಗೆ ನಮ್ಮ ಅನೇಕ ಜನಪದ ಕತೆಗಳು ಶುರುವಾಗುತ್ತವೆ. ಗಿಳಿ ಕತೆ ಹೇಳಿದ್ದು, ಬೇತಾಳ ಕತೆ ಹೇಳಿದ್ದು ನಮಗೆಲ್ಲಾ ಗೊತ್ತು.
ಆದರೆ ಇಲ್ಲಿ ಸ್ವಲ್ಪ ತಾಂತ್ರಿಕವಾಗಿ ಅಪ್‌ಡೇಟ್‌ ಆಗಿ `ಬ್ಲಾಗ್‌’ ಕತೆ ಹೇಳುತ್ತದೆ. ಕಳ್ಳಕುಳ್ಳ ಬ್ಲಾಗ್‌ನ `ತಿಳಿಯ ಹೇಳುವೆ ಇಷ್ಟ ಕತೆಯನು’ ಮಾಲಿಕೆಯಲ್ಲಿ ಕತೆ ಶುರುವಾಗುತ್ತದೆ ಎಂದು ನಿನ್ನೆ ಹೇಳಲಾಗಿತ್ತಲ್ಲಾ, ಹೌದು ಕತೆ ಶುರುವಾಗುತ್ತದೆ.
ಅದಕ್ಕಾಗಿ ಚಕ್ಕಳಮಕ್ಕಳ ಹಾಕಿಕೊಂಡು ಕುಳಿತುಕೊಳ್ಳಿ. ಕತೆ ಹೇಳುವವರು ಈಗ ರೆಡಿ ಆಗುತ್ತಿದ್ದಾರೆ. ನೆಟ್‌ ಡೌನ್‌ ಇದ್ದರೆ, ಮಂತ್ರಿಗಳು ಉದ್ಘಾಟನೆಗೆ ತಡವಾದರೆ, ಬಸ್‌ ಬರಬೇಕಾಗಿದ್ದು ಇನ್ನೂ ಬಸ್‌ಸ್ಟ್ಯಾಂಡ್‌ಗೆ ಬರದಿದ್ದರೆ, ಸಿಗ್ನಲ್‌ ಬಿಟ್ಟರೂ ತಾಂತ್ರಿಕ ಕಾರಣದಿಂದ ಟ್ರಾಫಿಕ್‌ ಪೊಲೀಸ್‌ ಆ ದಾರಿಯನ್ನು ಸುಗಮಗೊಳಿಸದಿದ್ದರೆ, ಪವರ್‌ಕಟ್‌ ಆಗಿ, ಇನ್ನೂ ಕರೆಂಟ್‌ ಬರದಿದ್ದರೆ ಕಣ್ಣರಳಿಸಿ, ತಲೆ ತುರಿಸಿಕೊಂಡು, ಕೈ ಕಾಲು ಬಡಿದು, ಬಂದೇ ಬರುತ್ತದೆ ಎಂದು ತಾಳ್ಮೆಯಿಂದ ಕಾಯುವ ನೀವು ನಮ್ಮ `ಕತೆ’ಗೂ ಕಾಯುತ್ತೀರಲ್ಲಾ?
ಇನ್ನೇನು ಬಂದೇ ಬಿಡುತ್ತದೆ, ಕತೆ.

slumbala2ಬೀದೀಲಿ ಬಿದ್ದೋರು, ಸದ್ದಿಲ್ಲದೇ ಇದ್ದೋರು, ಒಳಗೊಳಗೇ ಅತ್ತೋರು ನನ್ನ ಜನಗಳು…
`ನನ್ನ ಜನಗಳು’ ಎಂಬ ಸಿದಲಿಂಗಯ್ಯ ಅವರ ಕವಿತೆಯಲ್ಲಿ ಬರುವ ಮೇಲ್ಕಂಡ ಸಾಲಲ್ಲಿ ಇರುವ ಸಂಕಟ ಅಸಾಧಾರಣವಾದುದು. `ಸ್ಲಂ ಬಾಲಾ’ ಚಿತ್ರದಲ್ಲೂ ಆ ವೇದನೆ, ಸಂಕಟ ಇದೆ. `ಸೈಜುಗಲ್ಲು ಹೊತ್ತೋರು’ ದಲಿತರಾದರೆ ಮಂತ್ರಿಗಳ ಸಾಮ್ರಾಜ್ಯಕ್ಕೆ `ಸೈಜುಗಲ್ಲಾಗಿ’ ಹೋಗುವವ ಸ್ಲಂ ಬಾಲಾ. ಅವರ ರಾಜಕೀಯ ಹಾದಿಯನ್ನು ವಿರೋದಿಗಳಿಂದ ಮುಕ್ತ ಮಾಡುತ್ತಾ, ತನ್ನ `ದೊಡ್ಡೋರ’ ಉದ್ದಾರಕ್ಕಾಗಿ ತನ್ನ ಸರ್ವಸ್ವವನ್ನೂ ಬಲಿ ಕೊಡುತ್ತಾ, ಅವರ ಚುನಾವಣಾ ಸಾಫಲ್ಯಕ್ಕಾಗಿ ಕೊಲೆಗಿಲೆ ಮಾಡುತ್ತಾ ಬಾಲಾ ಬೆಳೆಯುತ್ತಾನೆ. ಬೆಳೆಯುತ್ತಾ ಬೆಳೆಯುತ್ತಾ ತನ್ನ ಮುಂದಿನ ದಿನಗಳನ್ನು ಕನಸಿನಿಂದ ಸಿಂಗರಿಸುತ್ತಾನೆ. `ಮೈ ಪಾರ್ವತವ್ವ, ಮೈ ಸ್ಲಂ, ಮೈ ಪೀಪಲ್‌’ ಎನ್ನುತ್ತಾ ಕುಡಿದ ಮತ್ತಲ್ಲಿ ತನ್ನವರನ್ನು ಪ್ರೀತಿಸುತ್ತಾನೆ. ಹೀಗೆ ಬೆಳೆಯುತ್ತಾ ಹೋದವನು ಬಳಸಿಕೊಂಡವರಿಂದಲೇ ಹತನಾಗುತ್ತಾನೆ.

ಬಿಡುಗಡೆಯಾಗಿರುವ `ಸ್ಲಂ ಬಾಲಾ’ ಅನೇಕ ಕಾರಣಕ್ಕೆ ನೋಡಲೇಬೇಕಾದ ಸಿನಿಮಾ. ಅತ್ಯಂತ ಮಂದಗತಿಯ ಚಲನೆ, ಅನೇಕ ಕಡೆ ವಸ್ತುವಿನ ನಿರ್ವಹಣೆ ವಿಚಾರದಲ್ಲಾಗಿರುವ ಔಟ್‌ ಆಫ್‌ ಫೋಕಸ್‌ ಮೊದಲಾದ ಸಮಸ್ಯೆಗಳು ಚಿತ್ರದುದ್ದಕ್ಕೂ ಕಾಡಿದರೂ ಇವೆಲ್ಲಾ ಆಕ್ಷೇಪಗಳನ್ನೂ ಮೀರಿದ ಕಾರಣಕ್ಕಾಗಿ ನಾವೆಲ್ಲಾ `ಸ್ಲಂ’ಗೆ ಒಮ್ಮೆ ಹೋಗಿ ಬರಬೇಕು. ನಾವು ದಲಿತ ಸಾಹಿತ್ಯದ ಮೂಲಕ ಅನಾದಿ ಕಾಲದಿಂದಲೂ ಕಾಣುತ್ತಲೇ ಬಂದ ಶೋಷಣೆಯ ಇನ್ನೊಂದು ರಾಜಕೀಯ ರೂಪವಾಗಿ `ಬಾಲಾ’ ಕಾಣುತ್ತಾನೆ. (ಹೆಚ್ಚು…)

ದೀಪಾವಳಿ ಮುಗಿದಿದೆ. ಆದರೆ ಆಗಸದಲ್ಲಿ ಪಟಾಕಿ, ರಾಕೇಟು, ಮೂಡೆಗಳ ಸಿಡಿತ ಬಡಿತ. ಎಲ್ಲರ ಕಣ್ಣಲ್ಲೂ ಮಿಂಚು, ಕಿವಿಯಲ್ಲಿ ಗುಡುಗು, ಪಟಾಕಿ ಹೊಡೆದು ಕಣ್ಣು ಗಾಯ ಮಾಡಿಕೊಂಡವರ ಸಂಸಾರಕ್ಕೆ ಸಿಡಿಲು. ಮೋಡದ ಮಧ್ಯೆ ಪಟಾಕಿ ಹೊಗೆಯೂ ಮುಗಿಲಾಗಿ ತೇಲುತಿದೆ…
ಪಟಾಕಿ ಇದೀಗ ಸಂತಸವೂ ವಿಘ್ನ ಸಂತಸವೂ ಪರಪೀಡನಾ ತಂತ್ರವೂ ಆಗುತ್ತಾ ಹೋಗುತ್ತಿದೆ. ದೀಪಾವಳಿ ಹಬ್ಬವೆಂದರೆ ಪಟಾಕಿ ಮಾತ್ರ ಆಗಿ, ಪಟಾಕಿ ಹೊಡೆಯುವುದೆಂದರೆ ಸಿಡಿಸುವುದರಲ್ಲಷ್ಟೇ ಖುಷಿಪಡುವ, ಸದ್ದುಗಳಲ್ಲೇ ಉನ್ಮಾದಗೊಳ್ಳುವ ಮನುಜ ಕುಲವಾಗಿ ಇವತ್ತು ಎಲ್ಲರೂ ಬದಲಾಗುತ್ತಿದ್ದಾರೆ. ಪಟಾಕಿ ಬಗ್ಗೆ ಜಯಂತ್‌ ಕಾಯ್ಕಿಣಿ ಅವರು `ಹಾಲಿನ ಮೀಸೆ’ ಕತೆಯಲ್ಲಿ ಬರೆದ ಒಂದು ವಿವರ ಮತ್ತು ಪಟಾಕಿ ಸಿಡಿತದ ಒಂದೆರಡು ಅಮಾನವೀಯ ಘಟನೆಗಳನ್ನು ಇಲ್ಲಿ ನೀಡಲಾಗುತ್ತಿದೆ.
ಸ್ಟಾಕ್‌ ಉಳಿದಿದೆ ಎಂದು ನೀವ್ಯಾರಾದರೂ ಪಟಾಕಿ ಹಿಡಿದುಕೊಂಡು, ಗೇಟ್‌ ಎದುರು ನಿಂತು, ರಸ್ತೆ ಮೇಲೆ ಪಟಾಕಿ ಇಟ್ಟು, ಬೆಂಕಿ ಹತ್ತಿಸಿದರೆ ಈ ಘಟನೆಗಳು ನೆನಪಾಗಲಿ, ರಸ್ತೆಯಲ್ಲಿ ಹೋಗುತ್ತಿರುವವರು ದಾಟಿ ಹೋದ ಮೇಲೆ ನಿಮ್ಮ ಪಟಾಕಿಗೆ ಬೆಂಕಿ ತಗುಲಲಿ. (ಹೆಚ್ಚು…)

ಬಂದೇ ಬರತಾವ ಕಾಲ್‌

Posted: ಅಕ್ಟೋಬರ್ 7, 2008 in Uncategorized

ಮಿಸ್ಡ್‌ ಕಾಲ್‌ ಬರೆಯುತ್ತದೆ,
ಪ್ರೀತಿಯ ಓಲೆಯನು
ಹೆಚ್ಚು, ಕಡಿಮೆ, ಮಧ್ಯಮ- ದರದ
ಹ್ಯಾಂಡ್‌ಸೆಟ್‌ಗಳ ಮೇಲೆ.
ಪ್ರೀತಿಗೆ ಎಲ್ಲವೂ ಸಮಾನ.

ಹಠಾತ್‌ ಸಿಗ್ನಲ್‌ ಬಿದ್ದರೆ
ಇರಬೇಕು ಅಕ್ಕಪಕ್ಕ
ಚೆಂದನೆಯ ಹುಡುಗಿಯರು,
ಹುಡುಗಿಗೆ ಎದುರುಗಡೆ ಸುಂದರಾಂಗ.
ಕ್ಷಣವೆಷ್ಟೇ ಕಳೆಯುತ್ತಿದ್ದರೂ
ಹಸಿರು, ಹಳದಿ, ಕೆಂಪು
ದೀಪಗಳು
ಮಧುಚಂದ್ರನ ಪ್ರತಿಫಲನ,
ಯಾರಿಗೋ ಕಾಲ್‌ ಬರುತ್ತದೆ,
`ಆಹಾ ಎಂಥ ಮಧುರ ಯಾತನೆ’ (ಹೆಚ್ಚು…)