
ಸಾಹಿತ್ಯ ಸಮಾರಂಭವೊಂದರಲ್ಲಿ ಪಿಳ್ಳೆ (ಎಡಭಾಗದವರು)
ಕೆ ಜಿ ಶಂಕರ ಪಿಳ್ಳೆ. ಮಲೆಯಾಳಂ ಕಾವ್ಯಕ್ಕೆ ಹೊಸ ತಿರುವು ನೀಡಿದ ಕವಿ. ಕೇರಳ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿರುವ ಇವರ ಕವಿತೆಗಳು ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಪದಗಳು ಪುನರಾವರ್ತನೆಯಾಗುತ್ತಾ ಆಗುತ್ತಾ ನಿಮಗೆ ಹೊಸ ಅರ್ಥವನ್ನು, ಹೊಳಹನ್ನು ಕೊಡುತ್ತಾ ಹೋಗುತ್ತವೆ ಅವರ ಕವಿತೆಗಳು.
ಅವರು ಮಾನವ ಹಕ್ಕುಗಳ ಹೋರಾಟದಲ್ಲೂ ಸಕ್ರಿಯವಾಗಿದ್ದಾರೆ. ಪ್ಯಾಧ್ಯಾಪಕರಾಗಿ ದುಡಿದ ಅನುಭವ ಅವರದು. ಅವರ ಕವಿತೆಯನ್ನು ಓದುತ್ತಾ ಹೋದರೆ ಹೊಸ ಬಗೆಯ ಕಾವ್ಯವಾಗಿ ಕಾಣುತ್ತಾ ಹೋಗುತ್ತದೆ, ಬೆರಗಾಗುತ್ತದೆ. `ಬಾವಿ’, `ಬೊಕ್ಕ’, `ತರಾವರಿ ಪೋಜಿನ ಫೋಟೋಗಳು’, `ಜಿಡ್ಡು ಮೆತ್ತಿದ ಆರಾಮಕುರ್ಚಿ’, `ಉಡುದಾರ’, `ಬಂಗಾಲ್’ ಮೊದಲಾದ ಕವಿತೆಗಳನ್ನು ಓದುತ್ತಾ ಓದುತ್ತಾ ಕಾವ್ಯಾಸಕ್ತರಾದ ನೀವು ಥ್ರಿಲ್ ಆಗಿರುತ್ತೀರಿ. ಕನ್ನಡದಲ್ಲಿ ಅಡಿಗರನ್ನು, ಲಂಕೇಶರನ್ನು ಓದಿ ಮೆಚ್ಚಿ ಆರಾಸುವವರು ಈ ಸಂಕಲನವನ್ನೂ ಅಷ್ಟೇ ಪ್ರೀತಿಯಿಂದ ಪರಿಗ್ರಹಿಸಲು ಸಾಧ್ಯ.
`ಬೊಕ್ಕ ಬೊಕ್ಕನ ಜೊತೆ ಮಾತನಾಡುವಾಗ
ಬಚ್ಚಿಡುವಂಥದ್ದು ಏನೂ ಇಲ್ಲ.
ಒಂದು ನಾಜೂಕಿನ ನಗೆಯಲ್ಲಿ
ಭೂತವೋ ಭವಿಷ್ಯವೋ ಏನು ಬೇಕಾದರೂ
ಪ್ರತಿಬಿಂಬಿಸಲು ಪ್ರಯಾಸವಿಲ್ಲ
ಆದರಿಂದು,
ಕವಿ ಕವಿಯ ಜೊತೆ ಮಾತನಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ಯಾತ್ರಿಕ ಯಾತ್ರಿಕನ ಜೊತೆ ಮಾತಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ನೆರೆಯವ ನೆರೆಯವನ ಜೊತೆ ಮಾತನಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ಇಂಡಿಯಾ ಚೀನಾ ಜೊತೆ ಮಾತನಾಡುವಾಗ
ಬಚ್ಚಿಡುತ್ತವೆ ಎಲ್ಲವನ್ನೂ….’
-ಎಂದೆಲ್ಲಾ ಬರೆದು ಬೆಚ್ಚಿ ಬೀಳಿಸುವ ಅವರ ಕವಿತೆಗಳಲ್ಲಿ ನಿತ್ಯ ನೈಮಿತ್ಯಿಕ ವಿಷಯಗಳೇ ವಸ್ತುಗಳಾಗಿವೆ. ಆದರೆ ಆ ನಮ್ಮ ನಿತ್ಯದಲ್ಲೇ ಇರುವ ಸಂಗತಿಯಲ್ಲಿ ಅವರು ಸುರಿಸುವ ಜಿಜ್ಞಾಸೆ, ಓದೇ ಅನುಭವಿಸಬೇಕಾದ ಸಂಗತಿ.
ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ `ಕೆಜಿ ಶಂಕರ ಪಿಳ್ಳೆಯವರ ಕವಿತೆಗಳು‘ ಸಂಕಲನ ಇದೀಗ ಮಾರುಕಟ್ಟೆಯಲ್ಲಿದೆ. ಮಲೆಯಾಳಂ ಮತ್ತು ಕನ್ನಡ ಸಾಹಿತ್ಯದ ವಿಶೇಷ ಅಧ್ಯಯನ ನಡೆಸಿ ಅನುಭವವಿರುವ ತೇರ್‌ಳಿ ಶೇಖರ್ ಕವಿತೆಗಳನ್ನು ಅನುವಾದಿಸಿದ್ದಾರೆ. ಅವರ ಅನುವಾದದ ಸೊಗಸು ಎಷ್ಟು ಅದ್ಭುತವಾಗಿದೆ ಎಂದರೆ ಮೂಲದ ಲಯ ಒಂಚೂರೂ ಆಚೀಚೆ ಆಗಿಲ್ಲ. ಪಿಳ್ಳೆ ಕವಿತೆಗಳ ಲಯವೇ ಭಿನ್ನ. ಅದನ್ನು ಅನುವಾದದಲ್ಲೂ ಉಳಿಸಿಕೊಳ್ಳುವುದು ಅನುವಾದಕರಿಗೆ ಸಾಧ್ಯವಾಗಿದೆ ಎನ್ನುವುದು ಕಾವ್ಯಪ್ರೇಮಿಗಳಿಗೆ ಖುಷಿಯ ವಿಷಯ.
ಆ ಮೂಲ ಕಾವ್ಯದ ಪುಳಕಕ್ಕೆ, ಅನುವಾದದ ಜಲಕ್‌ಗೆ ಇಲ್ಲಿ ಒಂದೆರಡು ಕವಿತೆಗಳನ್ನು ನೀಡಲಾಗುತ್ತಿದೆ, ಓದಿ. ನೀವೇ ಇಷ್ಟಪಟ್ಟು ಆ ಸಂಕಲನವನ್ನು ಹುಡುಕಿ ಹೋಗಿಬಿಡುತ್ತೀರಾ.
ಕಾಗೆ
ಗುಡ್ಡ ನಿಂತಿದೆ ಗುಡ್ಡವಾಗಿಯೇ
ಗುಡ್ಡದ ಮೇಲೆ ಮಾವು ನಿಂತಿದೆ ಮಾವಾಗಿಯೇ
ಮಾವಿನ ಕೆಳಗೆ ಹಸು ಮೇಯುತ್ತಿದೆ ಹಸುವಾಗಿಯೇ
ಮಾವಿನ ಕಣ್ಣಿಗೆ ಕಾಗೆ ಕುಟುಕುವಾಗ
ಮಾವು ಅಲುಗಾಡುತ್ತದೆಹಸುವಾಗಿಯೇ
ಗುಡ್ಡದ ಬಾಲಕ್ಕೆ ಕಾಗೆ ಕುಟುಕುವಾಗ
ಗುಡ್ಡ ಅಲುಗಾಡುತ್ತದೆ ಹಸುವಾಗಿಯೇ
ನಾನು
ವೇಶ್ಯೆಯಾಗಿದ್ದಳು ನನ್ನ
ಮುದಿ ಮುದಿ ಮುತ್ತಜ್ಜಿ
ಹೆಣ್ಣಾಗಿದ್ದರೆ
ನಾನೂ
ವೇಶ್ಯೆಯಾಗುತ್ತಿದ್ದೆ.
ವಿಟನಾಗಿದ್ದ ನನ್ನ
ಮುದಿ ಮುದಿ ಮುತ್ತಾತ
ಗಂಡಾಗಿದ್ದರೆ
ನಾನೂ
ವಿಟನಾಗುತ್ತಿದ್ದೆ.
ಶಬ್ದಾಸುರನ ನಗರದಲ್ಲಿ
ಒಂದು ಹಿಂಡು ಕಿವಿಗಳು
ಅಲೆಯುತ್ತಿವೆ
ಮೌನವನ್ನು ದತ್ತು ಪಡೆಯಲು,
ಶಬ್ದಾಸುರನ ನಗರದಲ್ಲಿ.
ಒಲವಿನಂತೆಯೋ
ಒತ್ತೆಯಂತೆಯೋ
ಪಿ. ಎಫ್. ಲೋನಿನಂತೆಯೋ
ಬಂಡೆ ರಾಶಿಯಂತೆಯೋ
ೃಹತ್ ತಟಾಕದಂತೆಯೋ
ಥಟ್ಟನೆ
ಆವಿಯಾಗಿ ಮರೆಯಾದ ಮೌನವನ್ನು.
ಕೆತ್ತಿ ಕೆತ್ತಿ ಶಿಲ್ಪಗಳನ್ನೋ
ಮೊಗೆದು ನೆನಸಿ ಹಣ್ಣುಗಳನ್ನೋ
ಬೆಳೆಸಬಹುದಾದ ಮೌನವನ್ನು.
ಅರ್ಥ
ಭಾಷೆಯ ದಾರದಲ್ಲಿ ಪೋಣಿಸಿ
ಜಗತ್ತನ್ನು
ಗಡಿಯಾರದಂತೆ
ಹೊತ್ತು ನಡೆಯುತ್ತೇನೆ
ಎತ್ತ ಹೋಗುವಾಗಲೂ
ಏನೇ ಮಾಡುವಾಗಲೂ
ಆದ್ದರಿಂದ
ಯಾವ ದೂರಕ್ಕೂ
ಯಾವ ಕರ್ಮಕ್ಕೂ
ಯಾವ ಮಾತಿಗೂ
ಯಾವ ತಾಳಕ್ಕೂ
ಯಾವ ಹೊತ್ತಲ್ಲೂ
ಒಂದೇ ಒಂದು ಅರ್ಥ: ಕಾಲ.
(ಮುಂದಿನ ಓದಿಗೆ ನೀವು ಆ ಸಂಕಲನವನ್ನು ತೆಗೆದುಕೊಳ್ಳಲೇಬೇಕು.)